ಸಾರಾಂಶ
ಬ್ಯಾಡಗಿ: ಹೆಚ್ಚುತ್ತಿರುವ ಬಾಲ್ಯವಿವಾಹ ಪ್ರಕರಣ ಅವಲೋಕಿಸಿದರೇ ನಾವೆಷ್ಟೇ ಮುಂದುವರಿದಿದ್ದರೂ ಇನ್ನೂ ಅನಾಗರಿಕರಂತೆ ವರ್ತಿಸುತ್ತಿದ್ದೇವೆನೋ ಎಂದೆನಿಸುತ್ತದೆ. ತಾಲೂಕಿನಲ್ಲಿ ಬಾಲ್ಯವಿವಾಹ ಮತ್ತು ಬಾಲಕಿಯರ ಗರ್ಭಿಣಿ ಪ್ರಕರಣಗಳು ಹೆಚ್ಚಾಗುತ್ತಿದ್ದು, ಶಿಶು ಅಭಿವೃದ್ಧಿ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳು ಜಾಗೃತಿ ಮೂಡಿಸುವ ಮೂಲಕ ಸಮನ್ವಯತೆಯಿಂದ ನಿರ್ವಹಿಸಿ ಕಡಿವಾಣ ಹಾಕುವಂತೆ ತಹಸೀಲ್ದಾರ್ ಕಚೇರಿಯಲ್ಲಿ ನಡೆದ ತಾಲೂಕು ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ತಹಸೀಲ್ದಾರ್ ಫಿರೋಜ್‌ಶಾ ಸೋಮನಕಟ್ಟಿ ಅಧಿಕಾರಿಗಳಿಗೆ ಎಚ್ಚರಿಸಿದರು.
14 ಪ್ರಕರಣ ಪತ್ತೆ:ತಾಂತ್ರಿಕವಾಗಿ ಇಷ್ಟೆಲ್ಲ ಮುಂದುವರೆದರೂ ಸಹ ಬಾಲ್ಯವಿವಾಹ ತಪ್ಪು ಎಂಬ ಪರಿಕಲ್ಪನೆ ಪೋಷಕರ ತಲೆಗೆ ಹೋಗದೇ ಇರುವುದು ನೋವಿನ ಸಂಗತಿ. ತಾಲೂಕಿನಲ್ಲಿ ಒಟ್ಟು 14 ಬಾಲ್ಯ ವಿಹಾಹ ಹಾಗೂ ಗರ್ಭಿಣಿ ಪ್ರಕರಣಗಳು ಪತ್ತೆಯಾಗಿದೆ, ಬಾಲ್ಯ ವಿವಾಹಗಳನ್ನು ತಡೆಗಟ್ಟುವಲ್ಲಿ ಕೇವಲ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳೇ ಬಂದು ತಡೆಯಲಿ ಎನ್ನುವುದು ಸರಿಯಲ್ಲ, ಗ್ರಾಪಂ ಸೇರಿದಂತೆ ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವಯತೆ ಸಾಧಿಸಿಕೊಂಡು ಇಂತಹವುಗಳನ್ನು ತಡೆಗಟ್ಟಲು ಸಹಕರಿಸಬೇಕು, ಜೊತೆಗೆ ಸಾರ್ವಜನಿಕರು ಸಹ ಕೈಜೋಡಿಸಬೇಕು ಅಂದಾಗ ಮಾತ್ರ ಇದಕ್ಕೆ ಕಡಿವಾಣ ಹಾಕಲು ಸಾಧ್ಯವೆಂದರು.ಹೆಸರಿಗಷ್ಟೆ ಕಾವಲು ಸಮಿತಿ:ಸಭೆಯಲ್ಲಿದ್ದ ಸಿಡಿಪಿಒ ವೈ.ಟಿ. ಪೂಜಾರ ಮಾತನಾಡಿ, ಬಾಲ್ಯ ವಿವಾಹ ತಡೆಗಟ್ಟಲು ಪ್ರತಿ ಗ್ರಾಪಂಗಳಿಗೆ ಕಾವಲು ಸಮಿತಿಯನ್ನು ರಚಿಸಲಾಗಿದೆ. ಅದರಲ್ಲಿ ಗ್ರಾಪಂ ಮಹಿಳಾ ಸದಸ್ಯರೇ ಅಧ್ಯಕ್ಷ, ಉಪಾಧ್ಯಕ್ಷರು. ಉಳಿದಂತೆ ಎಲ್ಲ ಜನಪ್ರತಿನಿಧಿಗಳು, ಅಧಿಕಾರಿಗಳು, ಶಿಕ್ಷಕರು ಸೇರಿದಂತೆ ಎಲ್ಲರನ್ನು ಒಳಗೊಂಡಿದೆ. ಸದರಿ ಸಮಿತಿಯ ಅನುಮತಿ ಪಡೆದು ಗ್ರಾಮದಲ್ಲಿ ಮದುವೆ ಕಾರ್ಯಗಳನ್ನು ನಡೆಸಬೇಕೆಂಬ ನಿಯಮವಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರ್ ಸಮಿತಿ ಬಗ್ಗೆ ಯಾರಿಗೂ ಮಾಹಿತಿಯೇ ಇಲ್ಲದಿರುವುದನ್ನು ನೋಡಿದರೆ ಇದು ಕೇವಲ ಹೆಸರಿಗಷ್ಟೆ ಸೀಮಿತವಾಗಿದೆ ಎಂಬ ಸಂಶಯ ವ್ಯಕ್ತವಾಗುತ್ತಿದೆ. ಸಮಿತಿಯ ಬಗ್ಗೆ ಜನರಿಗೆ ತಿಳಿಸಲು ಕೂಡಲೇ ಪ್ರತಿಯೊಂದು ಗ್ರಾಪಂ ಹಾಗೂ ಸಿಡಿಪಿಓ ಸೇರಿದಂತೆ ಸರಕಾರಿ ಕಚೇರಿಗಳಲ್ಲಿ ಮಾಹಿತಿ ಪತ್ರಗಳ ಲಗತ್ತಿಸಿ ಜಾಗೃತಿ ಮೂಡಿಸುವಂತೆ ಸೂಚಿಸಿದರು.ಬಾಲ್ಯ ವಿವಾಹ ವಿಚಾರದಲ್ಲಿ ಆಧಾರ ಕಾರ್ಡನಲ್ಲಿರುವ ಜನ್ಮ ದಿನಾಂಕ ಗಣನೆಗೆ ತೆಗೆದು ಕೊಳ್ಳಬೇಡಿ, ಬದಲಾಗಿ ಶಾಲಾ ದಾಖಲಾತಿ ಪಡೆದುಕೊಳ್ಳುವುದು ಅಗತ್ಯವಾಗಿದೆ. ಇದರಿಂದ ನಿಖರ ವಯಸ್ಸು ತಿಳಿಯುತ್ತದೆ. ಇದರೊಟ್ಟಿಗೆ ಕೆಲ ಮಕ್ಕಳಿಗೆ ಜನನ ದಾಖಲೆಗಳೇ ಇಲ್ಲದಿರುವುದು ಬೆಳಕಿಗೆ ಬಂದಿದೆ. ಇವೆಲ್ಲವನ್ನು ಗಂಭೀರವಾಗಿ ಪರಿಗಣಿಸಿ ಅಂಗನವಾಡಿ ಹಾಗೂ ಶಾಲೆಗಳಲ್ಲಿ ಇಂತಹ ಮಕ್ಕಳ ಪಟ್ಟಿ ಮಾಡಿ ನೀಡಿದಲ್ಲಿ ಕಚೇರಿಯಲ್ಲಿ “ಈ ಜನ್ಮ ಪೋರ್ಟಲ್” ದಾಖಲಿಸಿ ಪ್ರಮಾಣಪತ್ರ ಒದಗಿಸುವ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ತಾಪಂ ಇಓ ಕೆ.ಎಂ. ಮಲ್ಲಿಕಾರ್ಜುನ, ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ, ಶಿಕ್ಷಣಾಧಿಕಾರಿ ಎಸ್.ಜಿ.ಕೋಟಿ, ತಾಲೂಕು ಆರೋಗ್ಯಾಧಿಕಾರಿ ಡಾ. ಕಾಂತೇಶ ಭಜಂತ್ರಿ, ಎಎಸ್‌ಐ ನಿಂಗೇನಹಳ್ಳಿ, ಜಿಪಂ ಎಇಇ ಸುರೇಶ ಬೇಡರ, ಸಾಮಾಜಿಕ ಕಾರ್ಯಕರ್ತೆ ಕೆ.ಸಿ. ಅಕ್ಷತಾ ಸೇರಿದಂತೆ ಹಲವರು ಭಾಗವಹಿಸಿದ್ದರು.ಅಂಗನವಾಡಿಗಳಿಗೆ ನೀರು ಪೂರೈಸಿ: ತಾಲೂಕಿನ ವಿವಿಧ ಗ್ರಾಮಗಳಲ್ಲಿನ ಅಂಗನವಾಡಿಗಳಿಗೆ ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆ ಇಲ್ಲದಿರುವುದು ಹಲವು ಸಮಸ್ಯೆ ತಂದೊಡ್ಡಿದೆ. ಆದ್ದರಿಂದ ಅಗತ್ಯವಿರುವ ಅಂಗನವಾಡಿಗಳಿಗೆ ಜೆಜೆಎಂ ಅಥವಾ ಇನ್ಯಾವುದೇ ಯೋಜನೆಯಲ್ಲಿ ನೀರೊದಗಿಸಿ ಎಂದು ಸಭೆಯಲ್ಲಿದ್ದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇಗೆ, ಸಿಡಿಪಿಒ ಮನವಿ ಮಾಡಿದರು.