ಸರ್ಕಾರಿ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಿ

| Published : Mar 14 2024, 02:06 AM IST

ಸರ್ಕಾರಿ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಿ
Share this Article
  • FB
  • TW
  • Linkdin
  • Email

ಸಾರಾಂಶ

ಅವಧಿ ಮೀರಿದ ಆಹಾರ ವಿತರಿಸಬಾರದು. ತಾಳೆ ಎಣ್ಣೆಯ ಬದಲು ಸೂರ್ಯಕಾಂತಿ ಎಣ್ಣೆ ಬಳಸಬೇಕು. ಪಟ್ಟಣದಲ್ಲಿನ ರಸ್ತೆಗಳು ಹಾಳಾಗಿವೆ, ಶೀಘ್ರದಲ್ಲಿ ದುರಸ್ತಿ ಕಾರ್ಯ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ

ಲಕ್ಷ್ಮೇಶ್ವರ: ಉಪನೋಂದಣಾಧಿಕಾರಿ ಕಚೇರಿ ಹಾಗೂ ತಹಸೀಲ್ದಾರ್ ಕಚೇರಿ ಸೇರಿದಂತೆ ವಿವಿಧ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ತಡೆಗಟ್ಟಬೇಕು. ಸಿಸಿ ಕ್ಯಾಮೇರಾ ಅಳವಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಲೋಕಾಯುಕ್ತ ಡಿವೈಎಸ್ಪಿ ವಿಜಯ ಬಿರಾದಾರ ಎಚ್ಚರಿಕೆ ನೀಡಿದರು.

ಪಟ್ಟಣದ ಪುರಸಭೆಯ ಸಭಾಭವನದಲ್ಲಿ ಬುಧವಾರ ನಡೆದ ಸಾರ್ವಜನಿಕ ಕುಂದು ಕೊರತೆಗಳ ಕುರಿತು ಅಹವಾಲು ಸ್ವೀಕರಿಸಿ ಮಾತನಾಡಿದರು.

ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ ಗಳಲ್ಲಿ ವಾರ್ಡನ್ ಗಳು ಸರಿಯಾಗಿ ಇರುತ್ತಿಲ್ಲ. ಕುಡಿಯುವ ನೀರು ಸ್ವಚ್ಛವಾಗಿರಬೇಕು. ಕೊಳೆತ ತರಕಾರಿ ಬಳಸದಂತೆ ಎಚ್ಚರಿಕೆ ವಹಿಸಬೇಕು. ಅಂಗನವಾಡಿ ಕೇಂದ್ರಗಳಲ್ಲಿ ಸಹಾಯಕಿಯರು ಕಡ್ಡಾಯವಾಗಿ ಹಾಜರಿ ಇರಬೇಕು. ಅವಧಿ ಮೀರಿದ ಆಹಾರ ವಿತರಿಸಬಾರದು. ತಾಳೆ ಎಣ್ಣೆಯ ಬದಲು ಸೂರ್ಯಕಾಂತಿ ಎಣ್ಣೆ ಬಳಸಬೇಕು. ಪಟ್ಟಣದಲ್ಲಿನ ರಸ್ತೆಗಳು ಹಾಳಾಗಿವೆ, ಶೀಘ್ರದಲ್ಲಿ ದುರಸ್ತಿ ಕಾರ್ಯ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಲೋಕೋಪಯೋಗಿ ಇಲಾಖೆಯ ರಸ್ತೆಗಳು ಸಂಚಾರ ಮಾಡಲು ಯೋಗ್ಯವಾಗಿಲ್ಲ. ತಾಲೂಕಿನ ರಸ್ತೆಗಳ ಸ್ಥಿತಿ ಅಯೋಮಯವಾಗಿವೆ. ತಾಲೂಕಿನಲ್ಲಿ ಎಂ ಸ್ಯಾಂಡ್ ಹಾಗೂ ಜಲ್ಲಿ ಕಲ್ಲುಗಳನ್ನು ಓವರ್ ಲೋಡ್ ಮಾಡಿಕೊಂಡು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿ ಹೋಗುತ್ತಿದ್ದರು. ಸಂಬಂಧಿಸಿ ಅಧಿಕಾರಿಗಳು ಯಾಕೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಪ್ರಶ್ನಿಸಿದರು.

ಈ ವೇಳೆ ಮಾತನಾಡಿದ ಲೋಕಾಯುಕ್ತ ಡಿವೈಎಸ್ಪಿ ಅವರು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಲಾಗುವುದು ಎಂದು ಹೇಳಿದರು.

ವಿವಿಧ ಇಲಾಖೆಗಳ ಕುರಿತು ಸಾರ್ವಜನಿಕರಿಂದ ಬಂದು ಅರ್ಜಿಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲು ೧೦ ದಿನಗಳ ಅವಧಿ ನೀಡಲಾಗುವುದು ಎಂದು ತಿಳಿಸಿದರು.

ಲೋಕಾಯುಕ್ತ ಪೊಲೀಸ್ ಅಧಿಕಾರಿ ರವಿ ಪುರುಷೋತ್ತಮ, ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್ ಸಾವುಬಾಯಿ ತೇಲಿ, ತಹಸೀಲ್ದಾರ್ ವಾಸುದೇವ ಸ್ವಾಮಿ, ಮುಖ್ಯಾಧಿಕಾರಿ ಮಹೇಶ ಹಡಪದ ಇದ್ದರು.