ಮಾನವ ಕಳ್ಳ ಸಾಗಣೆಯಿಂದ ಮಕ್ಕಳನ್ನು ಭಿಕ್ಷಾಟನೆ, ಜೀತ ಮತ್ತು ಲೈಂಗಿಕ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಾರೆ. ಇದು ಅಪರಾಧ ಮಾತ್ರವಲ್ಲ. ಗುಲಾಮಗಿರಿಯಾಗಿದೆ. ಆದ್ದರಿಂದ ಯಾವುದೇ ಆಮಿಷಕ್ಕೆ ಒಳಗಾಗದೆ ಮಕ್ಕಳು ಬಹಳ ಎಚ್ಚರಿಕೆಯಿಂದ ಇರಬೇಕು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಮಾನವ ಕಳ್ಳ ಸಾಗಣೆ ಗುಲಾಮಗಿರಿಯಾಗಿದೆ. ಹಣದ ಆಸೆಗಾಗಿ ಆಮಿಷವೊಡ್ಡಿ ಮಕ್ಕಳನ್ನು ಕಳ್ಳ ಸಾಗಣೆ ಮಾಡುವ ಸಾಮಾಜಿಕ ಪಿಡುಗಿಗೆ ಕಡಿವಾಣ ಹಾಕುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು 1ನೇ ಅಪರ ಸಿವಿಲ್ ನ್ಯಾಯಾಧೀಶೆ ಟಿ.ಭಾನುಪ್ರಿಯ ತಿಳಿಸಿದರು.

ಪಟ್ಟಣದ ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅಭಿಯೋಜನಾ ಇಲಾಖೆ ಹಾಗೂ ರೋಟರಿ ಕ್ಲಬ್‌ನ ಸಹಭಾಗಿತ್ವದಲ್ಲಿ ಗುರುವಾರ ಆಯೋಜಿಸಿದ್ದ ಮಾನವ ಕಳ್ಳ ಸಾಗಣೆತಡೆ ದಿನಾಚರಣೆ ಪ್ರಯುಕ್ತ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಾನವ ಕಳ್ಳ ಸಾಗಣೆಯಿಂದ ಮಕ್ಕಳನ್ನು ಭಿಕ್ಷಾಟನೆ, ಜೀತ ಮತ್ತು ಲೈಂಗಿಕ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಾರೆ. ಇದು ಅಪರಾಧ ಮಾತ್ರವಲ್ಲ. ಗುಲಾಮಗಿರಿಯಾಗಿದೆ. ಆದ್ದರಿಂದ ಯಾವುದೇ ಆಮಿಷಕ್ಕೆ ಒಳಗಾಗದೆ ಮಕ್ಕಳು ಬಹಳ ಎಚ್ಚರಿಕೆಯಿಂದ ಇರಬೇಕು. ಮಕ್ಕಳು ಬಾಲ್ಯಾವಸ್ಥೆ ಅನುಭವಿಸಿ ಮಕ್ಕಳಾಗಿ ಉಳಿಯಲು ಅವಕಾಶ ಕೊಡಬೇಕು. ಯಾವುದೇ ರೀತಿಯ ದೌರ್ಜನ್ಯಗಳು ನಡೆಯದಂತೆ ಅಗತ್ಯ ಕ್ರಮವಹಿಸಬೇಕು ಎಂದರು.

ಮಕ್ಕಳಿಗೆ ಕಡ್ಡಾಯ ಶಿಕ್ಷಣ ಸೇರಿದಂತೆ ಎಲ್ಲಾ ಬಗೆಯ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡುವ ಜೊತೆಗೆ ಸಮಾಜದಲ್ಲಿ ಒಬ್ಬ ಉತ್ತಮ ಪ್ರಜೆಯನ್ನಾಗಿ ರೂಪಿಸಬೇಕಿರುವುದು ಶಿಕ್ಷಕರು, ಪೋಷಕರು ಮತ್ತು ಸರ್ಕಾರದ ಕರ್ತವ್ಯವಾಗಿದೆ. ಯಾವುದೇ ರೀತಿಯ ಅನುಮಾನಾಸ್ಪದವಾಗಿ ಕಂಡುಬಂದಲ್ಲಿ ಮಕ್ಕಳು 1098 ಅಥವಾ 112ಗೆ ಕರೆ ಮಾಡಬಹುದು ಎಂದು ಹೇಳಿದರು.

ಪಟ್ಟಣ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಎಚ್.ಎಂ.ಶಿವಕುಮಾರ್ ಮಾತನಾಡಿ, ಆಮಿಷವೊಡ್ಡುವವರ ಬಗ್ಗೆ ಮಕ್ಕಳು ಬಹಳ ಎಚ್ಚರಿಕೆ ವಹಿಸಿ 112ಕ್ಕೆ ಕರೆ ಮಾಡಬಹುದು. 18 ವರ್ಷದೊಳಗಿನ ಮಕ್ಕಳು ದ್ವಿಚಕ್ರ ಸೇರಿದಂತೆ ಯಾವುದೇ ವಾಹನ ಚಾಲನೆ ಮಾಡಿದರೆ 25 ಸಾವಿರ ದಂಡ ಮತ್ತು ಆಕಸ್ಮಿಕವಾಗಿ ಅಪಘಾತವಾದರೆ ಯಾವುದೇ ವಿಮಾ ಸೌಲಭ್ಯ ಸಿಗುವುದಿಲ್ಲ. ಪೋಷಕರು ತಮ್ಮ ಆಸ್ತಿ ಮಾರಾಟ ಮಾಡಿ ಪರಿಹಾರ ಕೊಡಬೇಕಾಗುತ್ತದೆ. ಮಕ್ಕಳು ವಾಹನ ಚಾಲನೆ ಮಾಡಬೇಡಿ ಎಂದರು.

ವಕೀಲೆ ಎಸ್.ಕೆ.ಹೇಮ ಮಾತನಾಡಿ, ಬಡತನ, ಅನಕ್ಷರತೆ, ನಿರುದ್ಯೋಗವೇ ಮಾನವ ಕಳ್ಳಸಾಗಣೆಗೆ ಮುಖ್ಯ ಕಾರಣ. ಬಡತನದ ಕುಟುಂಬವನ್ನೇ ಟಾರ್ಗೆಟ್ ಮಾಡುವ ವಂಚಕರು ಸಾಮಾಜಿಕ ಜಾಲತಾಣದ ಮೂಲಕ ಸುಳ್ಳು ಸುದ್ದಿ ಜಾಹೀರಾತು ತೋರಿಸಿ ಮಕ್ಕಳನ್ನು ಕದ್ದೊಯ್ದು ಹೊರರಾಜ್ಯಗಳಿಗೆ ಮಾರಾಟ ಮಾಡಿ ಜೀತಪದ್ಧತಿಗೆ ದೂಡುತ್ತಾರೆ ಅಥವಾ ಕಾನೂನು ಬಾಹಿರ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಾರೆ. ಮಹಿಳೆಯರು, ಮಕ್ಕಳೂ ಸೇರಿದಂತೆ ಮಂಗಳಮುಖಿಯರೂ ಕೂಡ ಮಾನವ ಕಳ್ಳಸಾಗಣೆಗೆ ಬಲಿಯಾಗುತ್ತಿದ್ದಾರೆ. ಹಾಗಾಗಿ ಮಕ್ಕಳು ಬಹಳ ಎಚ್ಚರಿಕೆಯಿಂದ ಇರಬೇಕು ಎಂದರು.

ತಾಲೂಕು ವಕೀಲರ ಸಂಘದ ಅಧ್ಯಕ್ಷ ಮಹದೇವ, ಅಧ್ಯಕ್ಷತೆ ವಹಿಸಿದ್ದ ರೋಟರಿ ಸಂಸ್ಥೆ ಅಧ್ಯಕ್ಷ ಎ.ಪಿ.ಧರ್ಮರಾಜು ಮಾತನಾಡಿದರು.

ಸಹಾಯಕ ಸರ್ಕಾರಿ ಅಭಿಯೋಜಕಿ ಎಚ್.ಸಿ.ಮಮತ, ಶಾಲೆ ಮುಖ್ಯ ಶಿಕ್ಷಕ ಬಿ.ಎಸ್.ಚೇತನ್, ಶಿಕ್ಷಕರಾದ ಅನುಶ್ರೀ, ಎಂ.ಹಿಲ್ಡಾಶಾಂತಿ, ಎಚ್.ಎಸ್.ಮಂಜುಳ, ರೋಟರಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ವಿಜಯಕುಮಾರ್, ಖಜಾಂಚಿ ಗೋವಿಂದರಾಜು, ನ್ಯಾಯಾಲಯದ ಸೋನುಮೂರ್ತಿ, ರಮೇಶ್ ಸೇರಿದಂತೆ ಹಲವರು ಇದ್ದರು.