ತುರ್ತು ಪರಿಸ್ಥಿತಿಗಿಂತ ಈಗಿನ ಸ್ಥಿತಿ ಕೆಟ್ಟಿದೆ: ಲಾಡ್‌

| Published : Jun 30 2025, 12:34 AM IST

ಸಾರಾಂಶ

ಪಹ್ಲಲ್ಗಾಮ್‌, ಪುಲ್ವಾಮಗಳ ಬಗ್ಗೆ ಕೇಳಬಾರದು. ಅದಕ್ಕಾಗಿ ಇಂಥ ಹೇಳಿಕೆ ನೀಡುತ್ತಿದ್ದಾರೆ. ವಿಷಯಾಧಾರಿತ ಸಮಸ್ಯೆ ಜನರಿಗೆ ಗೊತ್ತಾಗದಂತೆ ಹೀಗೆ ಮಾಡುತ್ತಾರೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದು 11 ವರ್ಷವಾಯಿತು. ಇವತ್ತೇಕೆ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ?.

ಧಾರವಾಡ: ತುರ್ತು ಪರಿಸ್ಥಿತಿಗಿಂತ ಕೆಟ್ಟ ಪರಿಸ್ಥಿತಿ ಈಗ ದೇಶದಲ್ಲಿದೆ. ಆ ಬಗ್ಗೆ ಚರ್ಚೆಯಾಗಬೇಕು ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಹೇಳಿದರು.

ಆರ್‌ಎಸ್‌ಎಸ್‌ ಪ್ರಮುಖ ದತ್ತಾತ್ರೇಯ ಹೊಸಬಾಳೆ ನೀಡಿದ ಹೇಳಿಕೆ ಕುರಿತಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ತುರ್ತು ಪರಿಸ್ಥಿತಿ ಆಗಿ ಐವತ್ತು ವರ್ಷ ಆಯಿತು. ಅದಕ್ಕಿಂತ ಕೆಟ್ಟ ಪರಿಸ್ಥಿತಿ ಈಗ ದೇಶದಲ್ಲಿದೆ. ಅದರ ಬಗ್ಗೆ ಅವರು ಮಾತನಾಡುತ್ತಾರಾ? ಎಂದು ಪ್ರಶ್ನಿಸಿದರು.

ಪಹ್ಲಲ್ಗಾಮ್‌, ಪುಲ್ವಾಮಗಳ ಬಗ್ಗೆ ಕೇಳಬಾರದು. ಅದಕ್ಕಾಗಿ ಇಂಥ ಹೇಳಿಕೆ ನೀಡುತ್ತಿದ್ದಾರೆ. ವಿಷಯಾಧಾರಿತ ಸಮಸ್ಯೆ ಜನರಿಗೆ ಗೊತ್ತಾಗದಂತೆ ಹೀಗೆ ಮಾಡುತ್ತಾರೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದು 11 ವರ್ಷವಾಯಿತು. ಇವತ್ತೇಕೆ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ? ಎಂದು ಕಟುವಾಗಿ ಪ್ರಶ್ನಿಸಿದರು.

ದೇಶದ ಆಗು-ಹೋಗುಗಳ ಬಗ್ಗೆ ಜನರಿಗೆ ಮಾಹಿತಿ ಇರಬಾರದು. ಅದಕ್ಕಾಗಿ ಹೀಗೆ ಹೇಳಿಕೆಗಳನ್ನು ನೀಡುತ್ತಾರೆ. ಬೇರೆ ದೇಶಕ್ಕೆ ಹೋಲಿಸಿಕೊಂಡು ನೋಡುವಂತಿಲ್ಲ. ಬೇರೆ ಬೇರೆ ರಾಜ್ಯಗಳಿಗೂ ಹೋಲಿಕೆ ಮಾಡಿಕೊಳ್ಳುವಂತಿಲ್ಲ ಎಂದರು.

ನಮ್ಮ ದೇಶವೇ ಗ್ರೇಟ್. ನಮ್ಮ ಪ್ರಧಾ‌ನಿಯೇ ಗ್ರೇಟ್ ಎನ್ನುವುದು ಟಿವಿಯಲ್ಲಿ ಓಡುತ್ತದೆ. 50 ವರ್ಷದ ತುರ್ತು ಪರಿಸ್ಥಿತಿ ಬಗ್ಗೆ ಮಾತನಾಡುತ್ತಿದ್ದಾರೆ. ಈಗ ಅದು ಪ್ರಸ್ತುತ ಇದೆಯಾ? ಅದು ಚರ್ಚೆಗೆ ತೆಗೆದುಕೊಳ್ಳಬೇಕಾದ ವಿಷಯವಾ? ಎಂದು ಮರುಪ್ರಶ್ನಿಸಿದರು.

ಏಕಾಧಿಪತ್ಯ ರಾಜಕಾರಣ ಹೋಗಬೇಕು. ದೇಶದಲ್ಲಿ ಯುವಜನತೆ ಹೊರಗೆ ಬರಬೇಕು. ಫೋಟೋಟೈಪ್ ಪಾಲಿಟಿಕ್ಸ್‌ ಹೋಗಬೇಕು. ಅದಕ್ಕಾಗಿ ಎಲ್ಲರೂ ಪ್ರಶ್ನೆ ಮಾಡುವಂತಾಗಬೇಕು. ನಮ್ಮ ಸರ್ಕಾರಗಳು ಪ್ರಶ್ನೆ ಮಾಡಲು ಅವಕಾಶ ಕೊಡುತ್ತಿಲ್ಲ ಎಂದು ಸಚಿವ ಲಾಡ್ ವಿಷಾಧಿಸಿದರು.