ರೈತರಿಗೆ ನೀಡುತ್ತಿದ್ದ ಹಾಲಿನ ದರ ಕಸಿದ ಸರ್ಕಾರಕ್ಕೆ ಗೋಶಾಪ ತಟ್ಟುತ್ತದೆ

| Published : Feb 07 2024, 01:47 AM IST

ಸಾರಾಂಶ

ರಾಜ್ಯ ಸರ್ಕಾರ ರೈತರಿಂದ ಖರೀದಿ ಮಾಡುತ್ತಿದ್ದ ಹಾಲಿನ ದರವನ್ನು ಕಡಿತ ವಿರೋಧಿಸಿ, ಮಂಗಳವಾರ ಶಿವಮೊಗ್ಗ ಜಿಲ್ಲಾ ಬಿಜೆಪಿ ರೈತ ಮೋರ್ಚಾ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಗೋವುಗಳ ಸಮೇತ ಪ್ರತಿಭಟನೆ ನಡೆಯಿತು. ಈ ಹಿಂದೆ ರೈತರಿಗೆ ₹42 ನೀಡುತ್ತಿದ್ದರು. ಈಗ ₹33ಕ್ಕೆ ಇಳಿಸಲಾಗಿದೆ. ಭತ್ತ, ಮೆಕ್ಕೆಜೋಳ, ಕಬ್ಬು ಇತ್ಯಾದಿ ಬೆಳೆಗಳಿಗೆ ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೋಷಿಸಿದ್ದರು. ರಾಜ್ಯ ಸರ್ಕಾರ ವಿಳಂಬ ಮಾಡುತ್ತಿದೆ. ರೈತರಿಗೆ ನಿರಂತರ ವಿದ್ಯುತ್ ಪೂರೈಕೆ ಮಾಡುವುದಾಗಿ ಹೇಳಿದ ಸರ್ಕಾರ ಈಗ 4 ಗಂಟೆ ಕೂಡ ವಿದ್ಯುತ್ ನೀಡುತ್ತಿಲ್ಲ. ರೈತರ ಎಲ್ಲ ಸಮಸ್ಯೆಗಳಿಗೆ ಪರಿಹಾರ ಘೋಷಿಸಬೇಕು. ಇಲ್ಲದಿದ್ದರೆ ರೈತ ಮೋರ್ಚಾ ವತಿಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ನೇತೃತ್ವದ ಪ್ರತಿಭಟನೆಯಲ್ಲಿ ಎಚ್ಚರಿಕೆ ನೀಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ರಾಜ್ಯ ಸರ್ಕಾರ ರೈತರಿಂದ ಖರೀದಿ ಮಾಡುತ್ತಿದ್ದ ಹಾಲಿನ ದರವನ್ನು ಕಡಿತಗೊಳಿಸಿರುವುದನ್ನು ವಿರೋಧಿಸಿ, ಮಂಗಳವಾರ ಜಿಲ್ಲಾ ಬಿಜೆಪಿ ರೈತ ಮೋರ್ಚಾ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಗೋವುಗಳ ಸಮೇತ ಪ್ರತಿಭಟನೆ ನಡೆಯಿತು.

ಈ ಹಿಂದೆ ರೈತರಿಗೆ ₹42 ನೀಡುತ್ತಿದ್ದರು. ಈಗ ₹33ಕ್ಕೆ ಇಳಿಸಲಾಗಿದೆ. ಇದಲ್ಲದೇ, ಭತ್ತ, ಮೆಕ್ಕೆಜೋಳ, ಕಬ್ಬು ಇತ್ಯಾದಿ ಬೆಳೆಗಳಿಗೆ ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೋಷಿಸಿದ್ದರು. ರಾಜ್ಯ ಸರ್ಕಾರ ವಿಳಂಬ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.

ರೈತರಿಗೆ ನಿರಂತರ ವಿದ್ಯುತ್ ಪೂರೈಕೆ ಮಾಡುವುದಾಗಿ ಹೇಳಿದ ಸರ್ಕಾರ ಈಗ 4 ಗಂಟೆ ಕೂಡ ವಿದ್ಯುತ್ ನೀಡುತ್ತಿಲ್ಲ. ಕಾಂಗ್ರೆಸ್ ಸರ್ಕಾರ ರೈತ ವಿರೋಧಿಯಾಗಿದೆ. ರೈತರ ಎಲ್ಲ ಸಮಸ್ಯೆಗಳಿಗೆ ಪರಿಹಾರ ಘೋಷಿಸಬೇಕು. ಇಲ್ಲದಿದ್ದರೆ ರೈತ ಮೋರ್ಚಾ ವತಿಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಮಾತನಾಡಿ, ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ಸರ್ಕಾರವಾಗಿದೆ. ರೈತರಿಗೆ ನೀಡಬೇಕಾಗಿದ್ದ ಹಾಲಿನ ಪ್ರೋತ್ಸಾಹಧನ ₹716 ಕೋಟಿಗಳನ್ನು ಇನ್ನೂ ನೀಡಿಲ್ಲ. ಇದರಿಂದ ಬೇಸತ್ತ ರೈತರು ಹಾಲನ್ನು ಕೊಡುವುದನ್ನೇ ನಿಲ್ಲಿಸಿದ್ದಾರೆ. ಏಕಕಾಲದಲ್ಲಿ ಕಾಂಗ್ರೆಸ್ ಸರ್ಕಾರ ರೈತರಿಗೆ ಮತ್ತು ಗೋವುಗಳಿಗೂ ದ್ರೋಹ ಮಾಡುತ್ತಿದೆ. ಇವರಿಗೆ ಗೋವಿನ ಶಾಪ ತಟ್ಟುತ್ತದೆ. ಲೋಕಸಭಾ ಚುನಾವಣೆ ನಂತರ ಕಾಂಗ್ರೆಸ್ ಸರ್ಕಾರ ಬಿದ್ದುಹೋಗುತ್ತದೆ ಎಂದು ಭವಿಷ್ಯ ನುಡಿದರು.

ರೈತರ ತೆರಿಗೆ ಹಣದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲು ಕಾಂಗ್ರೆಸ್ ಶಾಸಕರು ದೆಹಲಿಗೆ ಹೋಗುತ್ತಿದ್ದಾರೆ. ಇದಕ್ಕಾಗಿ ಜಾಹಿರಾತು ನೀಡುತ್ತಿದ್ದಾರೆ. ಜಾಹಿರಾತಿನಲ್ಲಿ ಗಾಂಧೀಜಿ ಪೋಟೋ ಹಾಕಿದ್ದಾರೆ. ಗಾಂಧೀಜಿ ಅವರನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಜೈಲಿಗೆ ಹೋದವರೆಲ್ಲಾ ಹೀಗೆ ಗಾಂಧೀಜಿ ಅವರನ್ನು ದುರುಪಯೋಗ ಮಾಡಿಕೊಳ್ಳುತ್ತಿರುವುದು ದುರಾದೃಷ್ಟಕರ ಎಂದರು.

ಶಾಸಕ ಎಸ್‌.ಎನ್. ಚನ್ನಬಸಪ್ಪ ಮಾತನಾಡಿ, ಇದು ರೈತ ವಿರೋಧಿ ಸರ್ಕಾರ. ಬಿಜೆಪಿ ಸರ್ಕಾರ ರೈತರಿಗೆ ನೀಡಿದ್ದ ಯೋಜನೆಗಳನ್ನೆಲ್ಲ ಕಾಂಗ್ರೆಸ್ ಸರ್ಕಾರ ಕಸಿದುಕೊಂಡಿದೆ. ಹಾಲಿನ ವಿಷಯಕ್ಕೆ ಸಂಬಂಧಿಸಿದಂತೆ ಗ್ರಾಹಕರಿಗೂ, ರೈತರಿಗೂ ಏಕಕಾಲದಲ್ಲಿ ವಂಚನೆ ಮಾಡುತ್ತಿದೆ. ಇವರಿಗೆ ಆಲ್ಕೋಹಾಲ್‌ ಪವಿತ್ರ, ಗೋವಿನ ಹಾಲಲ್ಲ. ಮುಂದೊಂದು ದಿನ ಗೋವಿನ ಮೂತ್ರಕ್ಕೂ ಬೆಲೆ ಕಟ್ಟುತ್ತಾರೆ ಎಂದು ಹರಿಹಾಯ್ದರು.

ಪ್ರತಿಭಟನೆಯಲ್ಲಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಎಸ್. ಸಿದ್ದಲಿಂಗಪ್ಪ, ಪ್ರಮುಖರಾದ ದತ್ತಾತ್ರಿ, ಟಿ.ಡಿ.ಮೇಘರಾಜ್, ಮೋಹನ್ ರೆಡ್ಡಿ, ಅಣ್ಣಪ್ಪ, ಜಗದೀಶ್, ಮುಂತಾದವರು ಪಾಲ್ಗೊಂಡಿದ್ದರು.

- - - -6ಎಸ್‌ಎಂಜಿಕೆಪಿ08:

ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಜಿಲ್ಲಾ ಬಿಜೆಪಿ ರೈತ ಮೋರ್ಚಾ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ರಾಜ್ಯ ಸರ್ಕಾರ ರೈತರಿಂದ ಖರೀದಿ ಮಾಡುತ್ತಿದ್ದ ಹಾಲಿನ ದರವನ್ನು ಕಡಿತಗೊಳಿಸಿರುವುದನ್ನು ವಿರೋಧಿಸಿ ಗೋವುಗಳ ಸಮೇತ ಪ್ರತಿಭಟನೆ ನಡೆಯಿತು.