ಪ್ರತಿಯೊಬ್ಬ ಗ್ರಾಹಕರಿಗೂ ಅಡುಗೆ ಅನಿಲವನ್ನು ಬುಕ್ ಮಾಡಿದ ಅವಧಿಗೆ ಅನುಗುಣವಾಗಿ ಕೊರತೆಯಾಗದಂತೆ ನೀಡುತ್ತೇವೆ
ಕೊಟ್ಟೂರು: ಅಡುಗೆ ಅನಿಲದ ಕೊರತೆಯಾಗುತ್ತದೆ ಎಂಬ ಗಾಳಿಸುದ್ದಿ ಹಿನ್ನೆಲೆ ಜನತೆ ಗ್ಯಾಸ್ ಏಜೆನ್ಸಿ ಮುಂದೆ ನೂರಾರು ಸಂಖ್ಯೆಯಲ್ಲಿ ಖಾಲಿ ಸಿಲಿಂಡರಗಳೊಂದಿಗೆ ನಸುಕಿನಿಂದಲೇ ಜಮಾವಣೆಗೊಳ್ಳುತ್ತಿರುವ ದೃಶ್ಯ ಮಾಮೂಲಾಗಿದೆ.
ತಾಲೂಕಿನ ಉಜ್ಜಿಯನಿ ಗ್ರಾಮದ ಭರತ್ ಗ್ಯಾಸ್ ಅಂಗಡಿ ಮುಂದೆ ಶುಕ್ರವಾರ ಬೆಳಗ್ಗೆ 6ರಿಂದಲೇ ನೂರಾರು ಸಂಖ್ಯೆಯ ಗ್ರಾಹಕರು ನೆರೆದಿದ್ದರು. ಅಲ್ಲದೇ ಸಿಲಿಂಡರ್ ಕೊಡುವಂತೆ ಅಂಗಡಿ ಮಾಲೀಕರಿಗೆ ದುಂಬಾಲು ಬಿದ್ದರು.ಅಂಗಡಿಯವರು ಅಡುಗೆ ಅನಿಲದ ಕೊರತೆ ಇಲ್ಲವೇ ಇಲ್ಲ. ಪ್ರತಿಯೊಬ್ಬ ಗ್ರಾಹಕರಿಗೂ ಅಡುಗೆ ಅನಿಲವನ್ನು ಬುಕ್ ಮಾಡಿದ ಅವಧಿಗೆ ಅನುಗುಣವಾಗಿ ಕೊರತೆಯಾಗದಂತೆ ನೀಡುತ್ತೇವೆ ಎಂದು ಹೇಳಿದರೂ ಜನತೆ ತಾಳ್ಮೆ ಕಳೆದುಕೊಂಡು ಸಿಲಿಂಡರಗಾಗಿ ಬಿಸಿಲನ್ನು ಲೆಕ್ಕಿಸದೇ ಉದ್ದನೇ ಸಾಲಿನಲ್ಲಿ ನಿಂತಿದ್ದು ಕಂಡುಬಂತು.
ಕೊರತೆ ಇಲ್ಲ: ಉಜ್ಜಯನಿನ ಭರತ ಗ್ಯಾಸ್ ಅಂಗಡಿಗೆ ಪ್ರತಿದಿನ 260 ಅಡುಗೆ ಅನಿಲ ಪೂರೈಕೆಯನ್ನು ಕಂಪನಿಯವರು ಮಾಡುತ್ತಿದ್ದರು. ಇದೀಗ ಕಳೆದ ಒಂದು ವಾರದಿಂದ 206 ಅಡುಗೆ ಅನಿಲ ಸಿಲಿಂಡರ್ ಪೂರೈಕೆ ಮಾಡುತ್ತಿದ್ದಾರೆ. ಗ್ರಾಹಕರಿಗೆ ಯಾವುದೇ ತೊಂದರೆ ಇಲ್ಲದೇ ಅಡುಗೆ ಅನಿಲ ಸರಬರಾಜು ಮಾಡುತ್ತಿದ್ದೇವೆ. ಅನಗತ್ಯವಾಗಿ ಜನತೆ ತಾಳ್ಮೆ ಕಳೆದುಕೊಂಡು ಅಡುಗೆ ಅನಿಲಕ್ಕಾಗಿ ಅಲೆದಾಡುತ್ತಿದ್ದಾರೆ. ವಾಸ್ತವ ಸ್ಥಿತಿ ಅರಿತುಕೊಂಡು ಗ್ರಾಹಕರು ಸಮಾಧಾನದಿಂದ ಇರಬೇಕು. ಎಲ್ಲರಿಗೂ ಸಕಾಲಕ್ಕೆ ಅಡುಗೆ ಅನಿಲ ದೊರಕುತ್ತದೆ ಎಂದು ಭಾರತ್ ಗ್ಯಾಸ್ ಅಂಗಡಿಯ ಮಾಲೀಕ ಮಲ್ಲಿಕಾರ್ಜುನ ತಿಳಿಸಿದರು.