ಸಾರಾಂಶ
ಭದ್ರಾವತಿ ಅರಣ್ಯ ವಿಭಾಗ ವ್ಯಾಪ್ತಿಯ ಉಂಬ್ಳೆಬೈಲು ವಲಯದ ಶಿವಮೊಗ್ಗ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರ (ಸಿಸಿಎಫ್) ಕಛೇರಿ ಮುಂಭಾಗದಲ್ಲಿ ನೂರಾರು ವರ್ಷಗಳ ಹಳೇಯದಾದ ಮರಗಳನ್ನು ಕಡಿತಲೆ ಮಾಡಿ ಸಾಗಿಸುತ್ತಿರುವ ದೃಶ್ಯ ಸಂಬಂಧ ೩ ದಿನಗಳಲ್ಲಿ ಮಾಹಿತಿ ನೀಡುವಂತೆ ಅರಣ್ಯ ಸಚಿವರ ಪತ್ರ ಬರೆದು ಸೂಚನೆ ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಭದ್ರಾವತಿ
ಇಲ್ಲಿನ ಅರಣ್ಯ ವಿಭಾಗ ವ್ಯಾಪ್ತಿಯ ಉಂಬ್ಳೆಬೈಲು ವಲಯದ ಶಿವಮೊಗ್ಗ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರ(ಸಿಸಿಎಫ್) ಕಛೇರಿ ಮುಂಭಾಗದಲ್ಲಿ ನೂರಾರು ವರ್ಷಗಳ ಹಳೇಯದಾದ ಮರಗಳನ್ನು ಕಡಿತಲೆ ಮಾಡಿರುವ ಸಂಬಂಧ ೩ ದಿನಗಳಲ್ಲಿ ಉತ್ತರ ನೀಡುವಂತೆ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಕಛೇರಿ ಆವರಣದಲ್ಲಿ ನೂರಾರು ವರ್ಷಗಳ ಹಳೆಯದಾದ ಬೃಹತ್ ಮರಗಳನ್ನು ಕಡಿತಲೆ ಮಾಡಿ ಮರದ ದಿಮ್ಮಿಗಳನ್ನು ಲಾರಿಗಳಲ್ಲಿ ಸಾಗಿಸಿರುವ ಕುರಿತು ಸಚಿತ್ರ ಮಾಹಿತಿ ನಮಗೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಬೃಹತ್ ಮರಗಳನ್ನು ಕಡಿತಲೆ ಮಾಡಲು ಕಾರಣವೇನು? ನಿಯಮಾನುಸಾರ ಮರ ಕಡಿತಲೆಗೆ ಅರ್ಜಿ ಸಲ್ಲಿಸಿ ಮರ ಕಡಿತಲೆ ಮಾಡಲು ಆದೇಶ ಪಡೆಯಲಾಗಿದೆಯೇ? ಕಡಿತಲೆ ಮಾಡಿದ ಮರದ ಡಿಮ್ಮಿಗಳನ್ನು ಯಾವ ಡಿಪೋಗೆ ಸಾಗಿಸಲಾಗಿದೆ? ಎಂಬ ಮಾಹಿತಿಯನ್ನು ತಿಳಿಸುವಂತೆ ಸೂಚಿಸಿದ್ದಾರೆ. ಮತ್ತೊಂದೆಡೆ ಬೃಹತ್ ಮರಗಳಿಂದ ಯಾರಿಗೂ ಯಾವುದೇ ರೀತಿ ತೊಂದರೆ ಇಲ್ಲದಿದ್ದರೂ ಸಹ, ಅಲ್ಲದೆ ಈ ಸಂಬಂಧ ಯಾರು ಸಹ ಮರಕಡಿತಲೆ ಮಾಡುವಂತೆ ಇಲಾಖೆಗೆ ಅರ್ಜಿ ಸಲ್ಲಿಸದಿದ್ದರೂ ಸಹ ಅರಣ್ಯ ಇಲಾಖೆ ಅಧಿಕಾರಿಗಳು ವಿನಾಕಾರಣ ನೂರಾರು ವರ್ಷಗಳ ಬೃಹತ್ ಮರಗಳನ್ನು ಕಡಿತಲೆ ಮಾಡುವ ಮೂಲಕ ಅರಣ್ಯ ಇಲಾಖೆ ಆಶಯಕ್ಕೆ ಧಕ್ಕೆ ತಂದಿದ್ದಾರೆ. ಇನ್ನೊಂದೆಡೆ ಸಸಿಗಳನ್ನು ನೆಡುವ ಮೂಲಕ ಪೋಷಿಸಿ ಬೆಳೆಸುವಂತೆ ಹೇಳುತ್ತಾರೆ ಎಂದು ಪರಿಸರ ಹೋರಾಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಕ್ಷಣ ಅರಣ್ಯ ಸಚಿವರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶಿಶ್ ರೆಡ್ಡಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರತ್ನಪ್ರಭಾ, ಸಿಸಿಎಫ್ ಕೆ.ಟಿ ಹನುಮಂತಪ್ಪ ಇವರುಗಳನ್ನು ಅಮಾನತುಗೊಳಿಸಿ ಮುಂದಿನ ತನಿಖೆ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.