ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಿ, ಇಲ್ಲಜಾಗ ಖಾಲಿ ಮಾಡಿ!

| Published : Jul 07 2025, 11:48 PM IST

ಸಾರಾಂಶ

ಕೊಪ್ಪಳ ತಾಲೂಕಿನಲ್ಲಿ ಗಾಂಜಾ ಮಾರಾಟ ಪ್ರಕರಣ ಇದ್ದರು ಅದು ಗಂಗಾವತಿ ತಾಲೂಕಿನಲ್ಲಿ ನಡೆದಿದೆ ಎಂದು ಪೊಲೀಸ್ ಇಲಾಖೆ ಮತ್ತು ಅಬಕಾರಿ ಇಲಾಖೆಯ ಅಧಿಕಾರಿಗಳು ಬಿಂಬಿಸಿದ್ದೀರಿ. ಇಂತಹ ಅಧಿಕಾರಿಗಳು ನಮಗೆ ಬೇಕಾಗಿಲ್ಲ ಎಂದು ಶಾಸಕ ಜನಾರ್ದನ ರೆಡ್ಡಿ ಕಿಡಿಕಾರಿದರು.

ಗಂಗಾವತಿ:

ನಗರ ಸೇರಿದಂತೆ ತಾಲೂಕಿನಾದ್ಯಂತ ಗಾಂಜಾ, ಅಕ್ರಮ ಮದ್ಯ ಮಾರಾಟ, ಜೂಜಾಟ ಕೇಂದ್ರಗಳು ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿದ್ದು, ಕೂಡಲೆ ನಿಯಂತ್ರಿಸದಿದ್ದರೆ ಬೇರೆಡೆಗೆ ವರ್ಗಾವಣೆಯಾಗಿ ಹೋಗಿ ಎಂದು ಅಬಕಾರಿ ಅಧಿಕಾರಿಗಳ ವಿರುದ್ಧ ಶಾಸಕ ಗಾಲಿ ಜನಾರ್ದನ ರೆಡ್ಡಿ ಹರಿಹಾಯ್ದರು.

ನಗರದ ತಾಲೂಕು ಪಂಚಾಯಿತಿಯಲ್ಲಿ ಸೋಮವಾರ ನಡೆದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗಂಗಾವತಿ ಕ್ಷೇತ್ರದಲ್ಲಿ ಆಕ್ರಮ ದಂಧೆಗಳು ನಡೆಯುತ್ತವೆ ಎಂದು ವಿಧಾನಸಭೆಯಲ್ಲಿ ಚರ್ಚೆಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ಕ್ಷೇತ್ರಕ್ಕೆ ಕೆಟ್ಟ ಹೆಸರು ತರುವ ಅಧಿಕಾರಿಗಳು ನಮಗೆ ಬೇಕಾಗಿಲ್ಲ. ಗಂಟು, ಮೂಟೆ ಕಟ್ಟಿಕೊಂಡು ನಡೆಯರಿ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಕೊಪ್ಪಳ ತಾಲೂಕಿನಲ್ಲಿ ಗಾಂಜಾ ಮಾರಾಟ ಪ್ರಕರಣ ಇದ್ದರು ಅದು ಗಂಗಾವತಿ ತಾಲೂಕಿನಲ್ಲಿ ನಡೆದಿದೆ ಎಂದು ಪೊಲೀಸ್ ಇಲಾಖೆ ಮತ್ತು ಅಬಕಾರಿ ಇಲಾಖೆಯ ಅಧಿಕಾರಿಗಳು ಬಿಂಬಿಸಿದ್ದೀರಿ. ಇಂತಹ ಅಧಿಕಾರಿಗಳು ನಮಗೆ ಬೇಕಾಗಿಲ್ಲ ಎಂದು ಕಿಡಿಕಾರಿದರು.

ಗಂಗಾವತಿ ನಗರದ ರಸ್ತೆಗಳನ್ನು ₹ 12.5 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸುವಂತೆ ಲೋಕೋಪಯೋಗಿ ಇಲಾಖೆಗೆ ಸೂಚಿಸಿದರು. ಕರಡಿ ಮತ್ತು ಚಿರತೆಗಳ ರಕ್ಷಣೆಗೆ ವನ್ಯಜೀವಿ ವಲಯ ಘೋಷಣೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಅರಣ್ಯ ಇಲಾಖೆಯ ವಲಯ ಅಧಿಕಾರಿ ಸುಭಾಶ್ಚಂದ್ರಗೆ ಸೂಚಿಸಿದರು.

ಸಭೆಯಲ್ಲಿ ನಗರಸಭೆ ಅಧ್ಯಕ್ಷ ಹೀರಾಬಾಯಿ, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ಚೌಡ್ಕಿ, ತಹಸೀಲ್ದಾರ್‌ ಯು. ನಾಗರಾಜ್, ತಾಪಂ ಇಒ ರಾಮರೆಡ್ಡಿ ಪಾಟೀಲ್, ಕೊಪ್ಪಳ ತಾಪಂ ಇಒ ದುಂಡಪ್ಪ ತುರಾದಿ, ನಗರಸಭೆ ಪೌರಾಯುಕ್ತ ಆರ್. ವಿರೂಪಾಕ್ಷಮೂರ್ತಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.