ತಾಲೂಕಿನ ಕೃಷಿ ಜಮೀನುಗಳಲ್ಲಿ ಅನಧಿಕೃತವಾಗಿ ತಲೆಯೆತ್ತಿರುವ ಬೋರ್ಡಿಂಗ್ ಆ್ಯಂಡ್ ಲಾಡ್ಜಿಂಗ್, ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳು, ರೆಸಾರ್ಟ್ ಮತ್ತು ಹೋಂಸ್ಟೇಗಳ ಬಗ್ಗೆ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಮುಖಂಡ ಎಸ್.ನಾಗೇಶ್ ಒತ್ತಾಯಿಸಿದರು.

ಮಾಗಡಿ: ತಾಲೂಕಿನ ಕೃಷಿ ಜಮೀನುಗಳಲ್ಲಿ ಅನಧಿಕೃತವಾಗಿ ತಲೆಯೆತ್ತಿರುವ ಬೋರ್ಡಿಂಗ್ ಆ್ಯಂಡ್ ಲಾಡ್ಜಿಂಗ್, ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳು, ರೆಸಾರ್ಟ್ ಮತ್ತು ಹೋಂಸ್ಟೇಗಳ ಬಗ್ಗೆ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಮುಖಂಡ ಎಸ್.ನಾಗೇಶ್ ಒತ್ತಾಯಿಸಿದರು.

ಪಟ್ಟಣದಲ್ಲಿ ತಹಸೀಲ್ದಾರ್ ಶರತ್ ಕುಮಾರ್‌ಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು, ಬಂಡವಾಳ ಶಾಹಿಗಳು ಗ್ರಾಮೀಣ ಪ್ರದೇಶಗಳಲ್ಲಿ ರೈತರಿಂದ ಅತಿಕಡಿಮೆ ದರದಲ್ಲಿ ರಾಜ್ಯ ಹೆದ್ದಾರಿ ಪಕ್ಕದಲ್ಲಿರುವ ಕೃಷಿ ಜಮೀನುಗಳನ್ನು ಖರೀದಿಸಿ, ಗ್ರಾಮ ಪಂಚಾಯತಿ, ಕಂದಾಯ ಇಲಾಖೆ, ಲೋಕೋಪಯೋಗಿ, ಅಗ್ನಿಶಾಮಕ ಇಲಾಖೆಯಿಂದ ಎನ್‌ಓಸಿಗಳನ್ನು ಪಡೆಯದೆ ಅನಧಿಕೃತವಾಗಿ ಬಾರ್ ಅಂಡ್ ರೆಸ್ಟೋರೆಂಟ್, ಬೋರ್ಡಿಂಗ್‌ ಅಂಡ್ ಲಾಡ್ಜಿಂಗ್‌ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದು ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದರು.

ಅನಧಿಕೃತ ಚಟುವಟಿಕೆ : ತಾಲೂಕಿನ ಹಂಚಿಕುಪ್ಪೆ ಗ್ರಾಪಂ ವ್ಯಾಪ್ತಿಯ ಸಾವನದುರ್ಗ ಅರಣ್ಯ ಪ್ರದೇಶದ ಸಮೀಪವಿರುವ ರಾಜ್ಯ ಹೆದ್ದಾರಿ ಮಾಗಡಿ-ರಾಮನಗರ ಮುಖ್ಯರಸ್ತೆಯ ಪಕ್ಕದಲ್ಲಿರುವ ನಾಯಕನಪಾಳ್ಯದ ಗ್ರಾಮದ ಸರ್ವೆ ನಂ. 22/2ರ ಕೃಷಿ ಜಮೀನಿನಲ್ಲಿ ಅನಧಿಕೃತವಾಗಿ ಪ್ರಭಾವಿಯೊಬ್ಬರು ಪೂರ್ವಾನುಮತಿ ಇಲ್ಲದೇ ಕೃಷಿ ಜಮೀನಿನಲ್ಲೇ ಬೋರ್ಡಿಂಗ್‌ ಅ್ಯಂಡ್‌ ಲಾಡ್ಜಿಂಗ್ ಹಾಗೂ ಬಾರ್ ಆ್ಯಂಡ್ ರೆಸ್ಟೊರೆಂಟ್‌ ಕಟ್ಟಡ ನಿರ್ಮಿಸುತ್ತಿದ್ದಾರೆ.

ತಾಲೂಕಿನ ಮಂಚನೆಬೆಲೆ ಹಾಗೂ ದಬ್ಬಗುಳಿ, ಬಂಡೀಪುರ ಹೀಗೆ ಸಾಕಷ್ಟು ಅನಧಿಕೃತ ಚಟುವಟಿಕೆ ನಡೆಯುತ್ತಿದ್ದು ತಹಸೀಲ್ದಾರ್ ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ನಮ್ಮ ಹೋರಾಟದ ಮೂಲಕ ಸರ್ಕಾರದ ಗಮನ ಸೆಳೆಯಬೇಕಾಗುತ್ತದೆ ಎಂದು ಎಚ್ಚರಿಸಿದರು.