ಸಗಟು ಬಳಕೆದಾರರ ನೀರಿಗೆ ಕತ್ತರಿ; ಕಾವೇರಿ ನೀರಲ್ಲಿ 20% ಕಡಿತ

| Published : Mar 21 2024, 01:46 AM IST

ಸಾರಾಂಶ

ನಗರದಲ್ಲಿನ ನೀರಿನ ಸಮಸ್ಯೆ ನೀಗಿಸಲು ಜಲಮಂಡಳಿ ಹರಸಾಹಸಪಡುತ್ತಿದೆ. ಟ್ಯಾಂಕರ್‌ಗಳ ನೋಂದಣಿ, ಬತ್ತಿ ಹೋಗಿರುವ ಕೊಳವೆಬಾವಿಗಳ ದುರಸ್ತಿ ಸೇರಿದಂತೆ ಇನ್ನಿತರ ಕ್ರಮ ಕೈಗೊಳ್ಳುತ್ತಿದೆ. ಇದೀಗ ಸಗಟು ನೀರು ಬಳಕೆದಾರರಿಗೆ ಪೂರೈಸಲಾಗುತ್ತಿರುವ ನೀರನ್ನು ಕಡಿತಗೊಳಿಸಿ, ಅವಶ್ಯಕತೆ ಇರುವ ಪ್ರದೇಶಗಳಿಗೆ ಪೂರೈಸುವ ಚಿಂತನೆ ನಡೆಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದಲ್ಲಿನ ನೀರಿನ ಸಮಸ್ಯೆ ನೀಗಿಸಲು ಜಲಮಂಡಳಿ ಹರಸಾಹಸಪಡುತ್ತಿದೆ. ಟ್ಯಾಂಕರ್‌ಗಳ ನೋಂದಣಿ, ಬತ್ತಿ ಹೋಗಿರುವ ಕೊಳವೆಬಾವಿಗಳ ದುರಸ್ತಿ ಸೇರಿದಂತೆ ಇನ್ನಿತರ ಕ್ರಮ ಕೈಗೊಳ್ಳುತ್ತಿದೆ. ಇದೀಗ ಸಗಟು ನೀರು ಬಳಕೆದಾರರಿಗೆ ಪೂರೈಸಲಾಗುತ್ತಿರುವ ನೀರನ್ನು ಕಡಿತಗೊಳಿಸಿ, ಅವಶ್ಯಕತೆ ಇರುವ ಪ್ರದೇಶಗಳಿಗೆ ಪೂರೈಸುವ ಚಿಂತನೆ ನಡೆಸಿದೆ.

ದಿನದಿಂದ ದಿನಕ್ಕೆ ನಗರದಲ್ಲಿ ನೀರಿನ ಸಮಸ್ಯೆ ಹೆಚ್ಚುತ್ತಿದೆ. ನಗರ ಹೊರವಲಯ ಅದರಲ್ಲೂ 110 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಹೆಚ್ಚಿದ್ದು, ಜಲಮಂಡಳಿ ಖಾಸಗಿ ಟ್ಯಾಂಕರ್‌ಗಳ ಮೂಲಕ ಅಲ್ಲಿಗೆ ನೀರು ಸರಬರಾಜು ಮಾಡುತ್ತಿದೆ. ನಗರದಲ್ಲಿ ಕುಡಿಯಲು ಮತ್ತು ಕೈಗಾರಿಕೆಗಳಿಗೆ ಪ್ರತಿದಿನ 2,600 ಎಂಎಲ್‌ಡಿ ನೀರಿನ ಅವಶ್ಯಕತೆಯಿದೆ. ಅದರಲ್ಲಿ ಕಾವೇರಿ ನದಿಯಿಂದ 1,450 ಎಂಎಲ್‌ಡಿ ನೀರು ಪೂರೈಸಲಾಗುತ್ತಿದ್ದು, 650 ಎಂಎಲ್‌ಡಿ ನೀರು ಕೊಳವೆಬಾವಿಯಿಂದ ದೊರೆಯುತ್ತಿದೆ. ಆದರೂ, ನಿತ್ಯ 500 ಎಂಎಲ್‌ಡಿ ನೀರಿನ ಕೊರತೆ ಕಾಣಿಸಿಕೊಳ್ಳುತ್ತಿದೆ.

ಈ ನೀರಿನ ಕೊರತೆ ಪ್ರಮಾಣವನ್ನು ತಗ್ಗಿಸಲು ಜಲಮಂಡಳಿ ಹಲವು ಕ್ರಮ ಕೈಗೊಳ್ಳುತ್ತಿದ್ದು, ಖಾಸಗಿ ಬೋರ್‌ವೆಲ್‌ಗಳಿಂದ ನೀರು ಪಡೆಯಲಾಗುತ್ತಿದೆ. ಹಾಗೆಯೇ ತ್ಯಾಜ್ಯ ನೀರು ಸಂಸ್ಕರಣಾ ಘಟಕದಿಂದ ಶುದ್ಧೀಕರಿಸಿದ ನೀರಿನ ಬಳಕೆಗೆ ಪ್ರೇರಿಪಿಸಲಾಗುತ್ತಿದೆ. ಅದರ ಜತೆಗೆ ಇದೀಗ ಪ್ರತಿದಿನ ಸರಾಸರಿ 19 ಎಂಎಲ್‌ಡಿ ನೀರು ಬಳಕೆ ಮಾಡುತ್ತಿರುವ ಸಗಟು ನೀರು ಬಳಕೆದಾರರಿಗೆ ಪೂರೈಸಲಾಗುತ್ತಿರುವ ನೀರು ಕಡಿತಗೊಳಿಸಿ, ಅದನ್ನು ಅಗತ್ಯವಿರುವ ಪ್ರದೇಶಗಳಿಗೆ ಪೂರೈಸಲು ಚಿಂತನೆ ನಡೆಸಲಾಗಿದೆ ಎಂದು ಜಲಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯ ಜಲಮಂಡಳಿ ಲೆಕ್ಕದಂತೆ ನಗರದಲ್ಲಿ ಪ್ರತಿದಿನ 19 ಎಂಎಲ್‌ಡಿ ನೀರು ಬಳಕೆ ಮಾಡುವ 35 ಸಗಟು ನೀರು ಬಳಕೆದಾರರಿದ್ದಾರೆ. ಅದರಲ್ಲಿ ಕೈಗಾರಿಕಾ ಪ್ರದೇಶ, ಸೇನಾ ಪ್ರದೇಶಗಳಿವೆ. ಹೀಗೆ ಸಗಟು ನೀರು ಬಳಕೆದಾರರೊಂದಿಗೆ ಮಾತನಾಡಲು ಮುಂದಾಗಿರುವ ಜಲಮಂಡಳಿ, ಅವರಿಗೆ ಪೂರೈಸಲಾಗುತ್ತಿರುವ ಕಾವೇರಿ ನೀರಿನ ಪ್ರಮಾಣದಲ್ಲಿ ಶೇ.20ರಷ್ಟನ್ನು ಕಡಿತಗೊಳಿಸುವುದಾಗಿ ತಿಳಿಸಲಾಗುತ್ತಿದೆ. ಹೀಗೆ ಕಡಿತಗೊಳ್ಳುವ ಕಾವೇರಿ ನೀರಿನ ಬದಲಾಗಿ ಶುದ್ಧೀಕರಿಸಿದ ನೀರು ಪೂರೈಸಲೂ ಜಲಮಂಡಳಿ ಮುಂದಾಗಿದೆ. ನೀರು ಕಡಿತದಿಂದಾಗಿ ನಗರದ 20 ಲಕ್ಷ ಜನರಿಗೆ ಸಮರ್ಪಕವಾಗಿ ನೀರು ಪೂರೈಕೆ ಮಾಡಬಹುದು ಎಂಬುದು ಜಲಮಂಡಳಿ ಅಧಿಕಾರಿಗಳ ಲೆಕ್ಕಾಚಾರವಾಗಿದೆ.