ಗವಿಸಿದ್ದಪ್ಪ ಕೊಲೆ ಪ್ರಕರಣದ ಸಮಗ್ರ ತನಿಖೆಗೆ ಸಿವಿಸಿ ಆಗ್ರಹ

| Published : Aug 08 2025, 01:02 AM IST

ಗವಿಸಿದ್ದಪ್ಪ ಕೊಲೆ ಪ್ರಕರಣದ ಸಮಗ್ರ ತನಿಖೆಗೆ ಸಿವಿಸಿ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಾಥಮಿಕ ತನಿಖೆಯ ಪ್ರಕಾರ ವೈಯಕ್ತಿಕ ಕಾರಣಗಳಿಂದಾಗಿ ಗವಿಸಿದ್ದಪ್ಪ ನಾಯಕ ಕೊಲೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಆದರೆ, ಆ ಕೊಲೆ ಹಿಂದೆ ಬೇರೆ ಕಾರಣಗಳು ಇರಬಹುದು ಎಂದು ಕುಟುಂಬದ ಸದಸ್ಯರು ಹೇಳಿದ್ದಾರೆ.

ಕೊಪ್ಪಳ:

ಗವಿಸಿದ್ದಪ್ಪನ ಕೊಲೆ ಪ್ರಕರಣವನ್ನು ಎಲ್ಲ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸಿ ತಪ್ಪಿಸ್ಥರಿಗೆ ಶಿಕ್ಷೆ ನೀಡಬೇಕೆಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ್ ಒತ್ತಾಯಿಸಿದ್ದಾರೆ.

ಗುರುವಾರ ಗವಿಸಿದ್ದಪ್ಪ ನಾಯಕ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಅವರು, ಪ್ರಾಥಮಿಕ ತನಿಖೆಯ ಪ್ರಕಾರ ವೈಯಕ್ತಿಕ ಕಾರಣಗಳಿಂದಾಗಿ ಈ ಕೊಲೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಆದರೆ, ಆ ಕೊಲೆ ಹಿಂದೆ ಬೇರೆ ಕಾರಣಗಳು ಇರಬಹುದು ಎಂದು ಕುಟುಂಬದ ಸದಸ್ಯರು ಹೇಳಿದ್ದಾರೆ. ಹತ್ತಾರು ಜನ ಓಡಾಡುವ ಸ್ಥಳದಲ್ಲಿಯೇ ಕೊಲೆಯಾಗಿರುವುದು ಸಂಶಯ ಮೂಡಿಸಿದೆ. ಕೊಲೆಯಾದ ರೀತಿ ನೋಡಿದರೆ ಆರೋಪಿತರ ಮನಸ್ಥಿತಿ ಹೆದರಿಕೆ ಹುಟ್ಟಿಸುತ್ತಿದೆ. ಅವರಿಗೆ ಕಾಣದ ಕೈಗಳ ಅಭಯ ಇರಬಹುದು ಎಂಬ ಅನುಮಾನ ಹುಟ್ಟುತ್ತದೆ. ಹೀಗಾಗಿ ಈ ಪ್ರಕರಣವನ್ನು ಸಮಗ್ರ ತನಿಖೆಗೆ ಒಳಪಡಿಸುವುದು ಸೂಕ್ತ ಎಂದು ಹೇಳಿದ್ದಾರೆ.

ಲಭ್ಯವಿರುವ ಎಲ್ಲ ಸಾಕ್ಷಿ ಉಪಯೋಗಿಸಿಕೊಂಡು ನ್ಯಾಯಾಲಯದ ಮುಂದೆ ಸಲ್ಲಿಸಬೇಕು. ಭೀಕರ ಹತ್ಯೆಗೆ ಉಗ್ರವಾದ ಶಿಕ್ಷೆಯನ್ನು ನ್ಯಾಯಾಲಯ ಕೊಡುವಂತೆ ಪ್ರಕರಣ ನಿಭಾಯಿಸಬೇಕು. ಕೊಪ್ಪಳ ಕೋಮು ಸೌಹಾರ್ದಕ್ಕೆ ಹೆಸರುವಾಸಿಯಾಗಿದೆ. ನಾಯಕ್ ಹಾಗೂ ಆರೋಪಿಗಳ ಕುಟುಂಬದವರು ಅತ್ಯಂತ ಸಯಮ ಹಾಗೂ ಜವಾಬ್ದಾರಿಯಿಂದ ವರ್ತಿಸಿದ್ದಾರೆ. ಇಲ್ಲಸಲ್ಲದ ಗಾಳಿ ಮಾತುಗಳನ್ನು ಹರಡುವವರ ಮೇಲೆ ನಿಗಾ ಇಡುವುದು ಪೊಲೀಸರ್‌ ಜವಾಬ್ದಾರಿ ಎಂದು ಹೇಳಿದ್ದಾರೆ.