ಫೆಂಗಲ್ ಚಂಡಮಾರುತಕ್ಕೆ ಜನಜೀವನ ಅಸ್ತವ್ಯಸ್ತ

| Published : Dec 03 2024, 12:31 AM IST

ಸಾರಾಂಶ

ರಾಮನಗರ: ಫೆಂಗಲ್‌ ಚಂಡಮಾರುತದ ಪರಿಣಾಮ ಜಿಲ್ಲೆಯಲ್ಲಿ ಹಲವೆಡೆ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ರಾಮನಗರ: ಫೆಂಗಲ್‌ ಚಂಡಮಾರುತದ ಪರಿಣಾಮ ಜಿಲ್ಲೆಯಲ್ಲಿ ಹಲವೆಡೆ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಭಾನುವಾರ ಮಧ್ಯಾಹ್ನದಿಂದಲೇ ಆರಂಭವಾದ ಜಿಟಿಜಿಟಿ ಮಳೆ, ಗಾಳಿ, ಚಳಿ ಮುಂದಿನ ಎರಡು-ಮೂರು ದಿನ ಇದೇ ವಾತಾವರಣವಿರುವ ಸಾಧ್ಯತೆ ಇದೆ. ಜಿಲ್ಲೆಯ ಜನತೆ ಜಿಟಿ ಜಿಟಿ ಮಳೆಗೆ ಹೈರಾಣಾಗಿದ್ದಾರೆ. ಬಹುತೇಕ ಖಾಸಗಿ ಶಾಲಾ ಕಾಲೇಜುಗಳಿಗೆ ಸೋಮವಾರ ಬೆಳಗ್ಗೆಯೇ ರಜೆ ಘೋಷಿಸಿತು. ಸರ್ಕಾರಿ ಶಾಲಾ- ಕಾಲೇಜುಗಳಿಗೆ ಜಿಲ್ಲಾಡಳಿತ ಮಧ್ಯಾಹ್ನದ ಬಳಿಕ ಮಂಗಳವಾರದವರೆಗೆ ರಜೆ ಘೋಷಣೆ ಮಾಡಿತು.

ಜಿಲ್ಲೆಯ ಬಹುತೇಕ ಕಡೆ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಜಲಾಶಯಗಳು ಹಾಗೂ ಕೆರೆಕಟ್ಟೆಗಳಲ್ಲಿ ನೀರಿನ ಒಳ ಹರಿವಿನ ಪ್ರಮಾಣವೂ ಹೆಚ್ಚಾಗಿದೆ. ಜಮೀನುಗಳಲ್ಲೂ ನೀರು ನಿಂತಿದೆ. ರೈತರು ಕೃಷಿ ಚಟುವಟಿಕೆಗಳಿಂದ ಸ್ಥಗಿತಗೊಳಿಸಿದ್ದಾರೆ.

ಬೆಂ-ಮೈ ಹೆದ್ದಾರಿಯಲ್ಲಿ ಸವಾರರಿಗೆ ತೊಂದರೆ:

ವರುಣನ ಅಬ್ಬರಕ್ಕೆ ನಗರದ ಹೊರವಲಯದ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕೆಲವೆಡೆ ರಸ್ತೆಯಲ್ಲಿ ನೀರು ಸಂಗ್ರಹಗೊಂಡಿದ್ದರಿಂದ, ಕಿಲೋ ಮೀಟರ್‌ನಷ್ಟು ದೂರ ವಾಹನಗಳ ದಟ್ಟಣೆ ಕಂಡುಬಂತು. ಇದರಿಂದಾಗಿ ವಾಹನ ಸವಾರರು ತೊಂದರೆ ಅನುಭವಿಸಿದರು.

ಗಾಳಿಯೊಂದಿಗೆ ಬಿಡದೆ ಸುರಿದ ಮಳೆಯಿಂದಾಗಿ ಸಂಗಬಸವನದೊಡ್ಡಿ ಬಳಿಯ ಹೆದ್ದಾರಿ ಸೇತುವೆ ಸೇರಿದಂತೆ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿತು. ಕೆಳ ಸೇತುವೆಗಳ ಬಳಿಯೂ ನೀರು ಸಂಗ್ರಹಗೊಂಡಿತು. ಇದರಿಂದಾಗಿ ವಾಹನಗಳು ಸಾಲುಗಟ್ಟಿ ನಿಂತವು. ದ್ವಿಚಕ್ರ ವಾಹನಗಳ ಸವಾರರು ಅತ್ತ ಮಳೆಯಿಂದ ತಪ್ಪಿಸಿಕೊಳ್ಳಲು ಆಗದೆ, ಇತ್ತ ಬೇಗನೇ ಹೋಗಲಾಗದೆ ಪರದಾಡಿದರು.

ಮಳೆ ನೀರು ಹೆದ್ದಾರಿ ಮತ್ತು ಸರ್ವೀಸ್ ರಸ್ತೆಯ ಪಕ್ಕದಲ್ಲಿರುವ ಚರಂಡಿಗಳಿಗೆ ಸರಾಗವಾಗಿ ಹರಿದು ಹೋಗಬೇಕು. ಆದರೆ, ಕೆಲವೆಡೆ ನೀರು ಹರಿದು ಹೋಗುವ ಪೈಪುಗಳಲ್ಲಿ ಕಸ ಕಟ್ಟಿಕೊಂಡಿರುವುದರಿಂದ ನೀರು ಸಂಗ್ರಹಗೊಂಡಿತು. ಕೆಲವೆಡೆ ತೀರಾ ತಗ್ಗು ಪ್ರದೇಶವಿರುವುದರಿಂದ ಎಲ್ಲಾ ನೀರು ಅಲ್ಲಿಗೇ ಬಂದು ಸೇರಿಕೊಂಡಿತು. ಇದರಿಂದಾಗಿ ಕೆಲವೆಡೆ ರಸ್ತೆ ಜಲಾವೃತವಾಯಿತು.

ಕೆಸರು ಗದ್ದೆಯಾದ ರಸ್ತೆಗಳು:

ರಾಮನಗರ ಟೌನಿನೊಳಗೆ ನಿರಂತರ ನೀರು ಕುಡಿಯುವ ಯೋಜನೆಗಾಗಿ ಅಗೆದಿರುವ ರಸ್ತೆಗಳು ಮಳೆಯಿಂದಾಗಿ ಕೆಸರಿನ ಗದ್ದೆಗಳಾದವು. ಗುಂಡಿಗಳಲ್ಲಿ ಮಳೆ ನೀರು ನಿಂತು ವಾಹನಗಳ ಸಂಚಾರವಿರಲಿ, ಪಾದಚಾರಿಗಳು ನಡೆದುಕೊಂಡು ಹೋಗಲು ಪರದಾಡಬೇಕಾಯಿತು.

ರಾಮನಗರದ ಎಂ.ಜಿ.ರಸ್ತೆ, ಮಂಡಿಪೇಟೆ, ರೈಲು ನಿಲ್ದಾಣ ರಸ್ತೆ, ರೈಲ್ವೆ ಕೆಳ ಸೇತುವೆ, ಬಾಲಗೇರಿ, ವಿನಾಯಕ ನಗರ, ಎಂ.ಎಚ್.ಕಾಲೇಜು ರಸ್ತೆ ಸೇರಿದಂತೆ ಹಲವೆಡೆ ಗುಂಡಿ ರಸ್ತೆಗಳು ಮಳೆ ನೀರಿನ ತಾಣಗಳಾದವು. ಕೆಲವೆಡೆ ಕೆಸರಿನ ರಾಡಿಯಾಗಿದ್ದರಿಂದ ವಾಹನಗಳ ಸವಾರರು ಮತ್ತು ಪಾದಚಾರಿಗಳು ಪರದಾಡಿದರು.

ಹದಗೆಟ್ಟ ರಸ್ತೆಗಳಲ್ಲಿ ಪಾದಚಾರಿಗಳು ಹಾಗೂ ದ್ವಿಚಕ್ರ ವಾಹನ ಸವಾರರು ತೊಂದರೆ ಅನುಭವಿಸಿದರು. ಕೆಲವರು ರಸ್ತೆ ಬದಿಯ ಕಟ್ಟಡಗಳ ಬಳಿ ನಿಂತು ಆಶ್ರಯ ಪಡೆದರೆ, ಉಳಿದವರು ನೆನೆದುಕೊಂಡೇ ಮಳೆಯನ್ನು ಆನಂದಿಸಿಕೊಂಡು ನಡೆದುಕೊಂಡು ಹೋದರು. ಮಳೆ ಇಲ್ಲದೆ ಮೂಲೆ ಸೇರಿದ್ದ ಛತ್ರಿಗಳನ್ನಿಡಿದು ಓಡಾಡುತ್ತಿದ್ದ ಜನರು ಅಲ್ಲಲ್ಲಿ ಕಂಡುಬಂದರು. ಬೆಳಗ್ಗೆ ಅಂಗಡಿ ಮುಂಗಟ್ಟುಗಳನ್ನು ಉತ್ಸಾಹದಿಂದ ತೆರೆದ ವರ್ತಕರು ಮಳೆಯ ಕಾರಣ ಹೆಚ್ಚಿನ ವಹಿವಾಟು ನಡೆಯಲಿಲ್ಲ. ಮಾರುಕಟ್ಟೆಯಲ್ಲಿ ವ್ಯಾಪಾರ ತುಸು ಕಡಿಮೆಯಾಗಿದೆ.

ರೇಷ್ಮೆನಗರಿಗೆ ಮಂಜಿನ ಹೊದಿಕೆ:

ಸತತವಾಗಿ ಸುರಿಯುತ್ತಿರುವ ಮಳೆಗೆ ರಾಮನಗರದ ಸುತ್ತಲಿನ ಬೆಟ್ಟಗುಡ್ಡಗಳು ಮಂಜಿನಿಂದ ಆವೃತ್ತವಾಗಿವೆ. ನಿರಂತರ ಮಳೆಯಿಂದ ಜಿಲ್ಲೆಯು ಇದೀಗ ಮಲೆನಾಡಿನಂತಾಗಿದ್ದು, ಜಿಲ್ಲಾ ಕೇಂದ್ರ ರಾಮನಗರ ಮಂಜಿನ ಹೊದಿಕೆ ಹೊದಿಸಿದಂತೆ ಭಾಸವಾಗುತ್ತಿದೆ. ಬೆಟ್ಟದ ಸುತ್ತಲು ಹಾಗೂ ಇಳಿಜಾರು ಪ್ರದೇಶದಲ್ಲಿ ಹಸಿರು ಹೊದ್ದಂತೆ ಸಸ್ಯರಾಶಿ ಕಾಣಿಸುತ್ತಿದೆ. ಇದು ನೋಡುಗರಿಗೆ ಹಿತಕರ ಅನುಭವ ನೀಡುತ್ತಿದೆ.

ಗಾಳಿಯ ಅಬ್ಬರಕ್ಕೆ ಕೆಲವೆಡೆ ಮರಗಳು, ಕೊಂಬೆಗಳು ಬಿದ್ದಿರುವ ವರದಿಯಾಗಿದೆ. ಮಳೆ ಕಾರಣಕ್ಕೆ ಹಲವೆಡೆ ವಿದ್ಯುತ್ ಕೂಡ ಕೈ ಕೊಟ್ಟಿದ್ದರಿಂದ ಜನ ಕತ್ತಲೆಯಲ್ಲಿ ಕಾಲ ಕಳೆಯಬೇಕಾಯಿತು.

ಬಾಕ್ಸ್ ..................

ರಾಮನಗರದಲ್ಲಿ ಆರೆಂಜ್ ಅಲರ್ಟ್

ಫೆಂಗಲ್ ಚಂಡಮಾರುತದ ಪರಿಣಾಮ ರಾಮನಗರ ಜಿಲ್ಲೆಯ ಮೇಲೂ ಬೀರಿದ್ದು, ಹವಾಮಾನ ಇಲಾಖೆ ಭಾನುವಾರ ರಾತ್ರಿಯಿಂದಲೇ ಯೆಲ್ಲೋ ಹಾಗೂ ಸೋಮವಾರ ಆರೆಂಜ್ ಅಲರ್ಟ್ ಘೋಷಿಸಿದೆ. ಫೆಂಗಲ್ ಚಂಡಮಾರುತದ ಆರ್ಭಟ ಕ್ಷೀಣಿಸಿದೆ. ಆದರೆ ಅದರ ಅವಶೇಷ ಸೈಕ್ಲೋನಿಕ ಚಂಡಮಾರುತದ ಪರಿಣಾಮವನ್ನು ಇನ್ನು ಎದುರಿಸಬೇಕಾಗಿದೆ ಎಂದು ಹವಾಮಾನ ಇಲಾಖೆಯ ಅಂಕಿ ಅಂಶ ತಿಳಿಸಿದೆ. ಭಾನುವಾರ ಸುರಿದ ಮಳೆಗೆ ಕನಕಪುರ ತಾಲೂಕಿನ ಚಾಕನಹಳ್ಳಿ ಗ್ರಾಮದಲ್ಲಿ 66.5 ಮಿಮಿ ಮಳೆಯಾಗಿದೆ .ಡಿ.3ರಂದು ಸಹ ರಾಮನಗರ ಜಿಲ್ಲೆಯಲ್ಲಿ ಭಾರಿ ಮಳೆಯಾಗವ ಮುನ್ಸೂಚನೆ ನೀಡಿದೆ.

ಬಾಕ್ಸ್ ..................

ರಜೆ ಘೋಷಿಸಲು ಜಿಲ್ಲಾಡಳಿತ ಮೀನಮೇಷ

ಫೆಂಗಲ್ ಚಂಡಮಾರುತದ ಪರಿಣಾಮ ರಾಮನಗರ ಜಿಲ್ಲೆಯಲ್ಲಿಯೂ ಭಾರಿ ಮಳೆ ಮುನ್ಸೂಚನೆ ಇದ್ದರೂ ಶಾಲಾ ಕಾಲೇಜುಗಳಿಗೆ ರಜೆ ನೀಡಲು ಮೀನಮೇಷ ಎಣಿಸುತ್ತಿದ್ದ ಜಿಲ್ಲಾಡಳಿತ ತನ್ನ ನಿರ್ಧಾರವನ್ನು ಪ್ರಕಟಿಸುವ ವೇಳೆಗೆ ಮಧ್ಯಾಹ್ನ 12 ಗಂಟೆಯಾಗಿತ್ತು. ಭಾನುವಾರ ಮಧ್ಯಾಹ್ನದಿಂದಲೇ ರಾಮನಗರ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆ ನಿರಂತರ ಮಳೆ ಸುರಿಯುತ್ತಿತ್ತು. ಸೋಮವಾರ ಬೆಳಿಗ್ಗೆಯೂ ಮಳೆ ಮುಂದುವರೆದಿತ್ತು. ಇನ್ನು ಎರಡು ದಿನ ರಾಮನಗರ ಜಿಲ್ಲೆಯಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಹೊರಡಿಸಿತ್ತು. ಆದರೂ ವಿದ್ಯಾರ್ಥಿಗಳ ಸರುಕ್ಷತೆಯ ದೃಷ್ಟಿಯಿಂದ ಶಾಲಾ - ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಲಿಲ್ಲ. ಜಿಲ್ಲಾಡಳಿತದ ಸೂಚನೆಗಾಗಿ ಕಾದು ಕುಳಿತ ಖಾಸಗಿ ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿಗಳು ಬೆಳಗ್ಗೆ 8.30ರ ವೇಳೆಗೆ ತಮ್ಮ ವಿವೇಚನೆಯ ಮೇರೆಗೆ ರಜೆ ಘೋಷಿಸಿದವು.

ರಜಾದಿನ ಸರಿದೂಗಿಸಿಕೊಳ್ಳುವ ಷರತ್ತು :

ಜಿಲ್ಲೆಯಲ್ಲಿ ನಿರಂತರ ಸುರಿಯುತ್ತಿರುವ ಮಳೆ ಕಾರಣ ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನರಹಿತ ಎಲ್ಲಾ ಶಾಲಾ, ಕಾಲೇಜುಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳಿಗೆ ಡಿ.2 ಸೋಮವಾರ ಮಧ್ಯಾಹ್ನದಿಂದ ಡಿ.3 ಮಂಗಳವಾರದಂದು ರಜೆ ಘೋಸಿರುವುದಾಗಿ ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ಆದೇಶ ಹೊರಡಿಸಿದ್ದಾರೆ.

2ಕೆಆರ್ ಎಂಎನ್ 2,3.ಜೆಪಿಜಿ

2.ರಾಮನಗರದಲ್ಲಿ ಮೋಡು ಮುಸುಕಿರುವುದು.

3.ಮಳೆಯಲ್ಲಿ ಛತ್ರಿ ಹಿಡಿದು ವಾಹನ ಚಾಲನೆ ಮಾಡುತ್ತಿರುವುದು.