ನಶಾ ಮುಕ್ತ ಭಾರತ ಅಭಿಯಾನ ಹಾಗೂ ಆರೋಗ್ಯಕರ ಜೀವನಶೈಲಿಯ ಜಾಗೃತಿಗಾಗಿ ನಗರದ ತೋಳನಕೆರೆ ಮುಂಭಾಗದಲ್ಲಿ ಭಾನುವಾರ ಆಯೋಜಿಸಿದ್ದ 5 ಕಿ.ಮೀ. ಸೈಕ್ಲೋಥಾನ್ ಮತ್ತು ವಾಕಥಾನ್‌ನಲ್ಲಿ ನೂರಾರು ಯುವಕ-ಯುವತಿಯರು ಉತ್ಸಾಹದಿಂದ ಪಾಲ್ಗೊಂಡರು.

ನಟಿ ರಾಗಿಣಿ ದ್ವಿವೇದಿ ನೇತೃತ್ವದಲ್ಲಿ ನಡೆದ ಸೈಕ್ಲೋಥಾನ್‌

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ನಶಾ ಮುಕ್ತ ಭಾರತ ಅಭಿಯಾನ ಹಾಗೂ ಆರೋಗ್ಯಕರ ಜೀವನಶೈಲಿಯ ಜಾಗೃತಿಗಾಗಿ ನಗರದ ತೋಳನಕೆರೆ ಮುಂಭಾಗದಲ್ಲಿ ಭಾನುವಾರ ಆಯೋಜಿಸಿದ್ದ 5 ಕಿ.ಮೀ. ಸೈಕ್ಲೋಥಾನ್ ಮತ್ತು ವಾಕಥಾನ್‌ನಲ್ಲಿ ನೂರಾರು ಯುವಕ-ಯುವತಿಯರು ಉತ್ಸಾಹದಿಂದ ಪಾಲ್ಗೊಂಡರು.

ಹುಬ್ಬಳ್ಳಿ ಬೈಸಿಕಲ್ ಕ್ಲಬ್, ಫಿಟ್ ಇಂಡಿಯಾ, ಹುಬ್ಬಳ್ಳಿ ಫಿಟ್‌ನೆಸ್ ಫೌಂಡೇಷನ್, ಸಾಯಿ ಸಂಸ್ಥೆ ಹಾಗೂ ಕೇಂದ್ರ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ, ಭಾರತೀಯ ಕ್ರೀಡಾ ಪ್ರಾಧಿಕಾರ ಮತ್ತು ಜೆನೆಕ್ಟ್ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು. ಫಿಟ್ ಇಂಡಿಯಾ ಚಾಂಪಿಯನ್, ನಟಿ ರಾಗಿಣಿ ದ್ವಿವೇದಿ ನೇತೃತ್ವದಲ್ಲಿ ನಡೆದ ಸೈಕ್ಲೋಥಾನ್ ಮತ್ತು ವಾಕಥಾನ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ತೋಳನಕೆರೆ ಮುಂಭಾಗದಿಂದ ಆರಂಭವಾದ ಸೈಕ್ಲೋಥಾನ್ ಮತ್ತು ವಾಕಥಾನ್, ಟೆಂಡರ್‌ಶ್ಯೂರ್ ರಸ್ತೆ ಮೂಲಕ ಓಕ್ಸ್ ಹೋಟೆಲ್‌ ವರೆಗೆ ತೆರಳಿ, ಮರಳಿ ತೋಳನಕೆರೆ ಮುಂಭಾಗದಲ್ಲಿ ಮುಕ್ತಾಯಗೊಂಡಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ನಟಿ ರಾಗಿಣಿ ದ್ವಿವೇದಿ, ಪ್ರಧಾನಿ ನರೇಂದ್ರ ಮೋದಿ ಅವರ ಪ್ರೇರಣೆಯಿಂದ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಆರೋಗ್ಯ ಮತ್ತು ದೈಹಿಕ ಕ್ಷಮತೆಯನ್ನು ಜೀವನಶೈಲಿಯ ಭಾಗವಾಗಿಸಿಕೊಳ್ಳಬೇಕು. ಸಾರ್ವಜನಿಕರಲ್ಲಿ ಆರೋಗ್ಯದ ಅರಿವು ಮೂಡಿಸುವ ಜತೆಗೆ, ಪ್ರತಿಯೊಬ್ಬರೂ ನಿತ್ಯವೂ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ವಿಪ ಸದಸ್ಯ ಲಿಂಗರಾಜ ಪಾಟೀಲ ಮಾತನಾಡಿ, ಯುವ ಸಮುದಾಯ ಆರೋಗ್ಯವಂತರಾಗಿರಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಆಶಯವಾಗಿದೆ. ವ್ಯಕ್ತಿಯ ಆರೋಗ್ಯವೇ ದೇಶದ ಶಕ್ತಿಯಾಗಿದ್ದು, ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಇಂತಹ ಕಾರ್ಯಕ್ರಮಗಳು ಪೂರಕವಾಗಿವೆ ಎಂದರು.

ಹುಬ್ಬಳ್ಳಿ ಬೈಸಿಕಲ್ ಕ್ಲಬ್ ಅಧ್ಯಕ್ಷ ಶೆಟ್ಟೆಪ್ಪ ಫಿರಂಗಿ, ಕಾರ್ಯದರ್ಶಿ ಶಿವಾನಂದ ದಂಡಾವತಿಮಠ, ಆನಂದ ಪಟ್ಟಣಶೆಟ್ಟಿ, ಡಾ. ಅರುಣ ಯಳಮಲಿ, ಅಕ್ಷಯ ಬಳ್ಳಾರಿ, ಡಾ. ಸಚಿನ್ ಹೊಸಕಟ್ಟಿ, ಕಿರಣ ಉಪ್ಪಾರ, ವಿಶಾಲ ನಾಡಗೌಡರ ಪಾಲ್ಗೊಂಡಿದ್ದರು. ಆರ್‌.ಜೆ. ರಷೀದ್ ಕಾರ್ಯಕ್ರಮ ನಿರೂಪಿಸಿದರು.