ಸಾರಾಂಶ
ಬಾದಾಮಿ ನಗರದಲ್ಲಿ ಗುರುವಾರ ರಾತ್ರಿ ಸೈಕಲ್ ಶಾಪ್‌ನಲ್ಲಿ ಇಡಲಾಗಿದ್ದ ಸಿಲಿಂಡರ್ ಗಳು ಸ್ಫೋಟಗೊಂಡು ಅಂಗಡಿ ಸಂಪೂರ್ಣ ಭಸ್ಮಗೊಂಡಿದ್ದು, 8 ಜನರು ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಭಾರೀ ಅನಾಹುತವೊಂದು ತಪ್ಪಿದೆ.
ಕನ್ನಡಪ್ರಭ ವಾರ್ತೆ ಬಾದಾಮಿ
ನಗರದಲ್ಲಿ ಗುರುವಾರ ರಾತ್ರಿ ಸೈಕಲ್ ಶಾಪ್‌ನಲ್ಲಿ ಇಡಲಾಗಿದ್ದ ಸಿಲಿಂಡರ್ ಗಳು ಸ್ಫೋಟಗೊಂಡು ಅಂಗಡಿ ಸಂಪೂರ್ಣ ಭಸ್ಮಗೊಂಡಿದ್ದು, 8 ಜನರು ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಭಾರೀ ಅನಾಹುತವೊಂದು ತಪ್ಪಿದೆ.ಟಾಂಗಾ ನಿಲ್ದಾಣದ ಹತ್ತಿರದ ಮುಖ್ಯ ರಸ್ತೆಯಲ್ಲಿರುವ ಜಮಾದಾರ ಎಂಬುವವರಿಗೆ ಸೇರಿದ ಸೈಕಲ್ ಅಂಗಡಿಯಲ್ಲಿ ಸಣ್ಣ ಕಿಡಿ, ಬೆಂಕಿ ಕಾಣಿಸಿಕೊಂಡಿದ್ದು ಇದನ್ನು ಗಮನಿಸಿದ ಜನರು ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಜಮಾದಾರ ಅವರು ತಕ್ಷಣ ಬಂದು ಬಾಗಿಲು ತೆರೆದಿದ್ದು, ತಕ್ಷಣ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಮಾಲೀಕ ಸೇರಿ ಮೂವರು ಸಾರ್ವಜನಿಕರು ಹಾಗೂ ಗಣೇಶ ಬಂದೋಬಸ್ತ್ ಗೆ ಬಂದಿದ್ದ ಓರ್ವ ಹೋಮಗಾರ್ಡ್ ಸೇರಿ 8 ಜನರಿಗೆ ಗಾಯಗಳಾಗಿವೆ. ಕಂದಾಯ ಮತ್ತು ಪೊಲೀಸ್ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಗಾಯಗೊಂಡವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸ್ಫೋಟ ಸಂಭವಿಸಿದ ಅಂಗಡಿಯ ಪಕ್ಕದಲ್ಲೇ ವೀರಪುಲಿಕೇಶಿ ಬ್ಯಾಂಕ್ ಇದ್ದು, ಹೆಚ್ಚಿನ ಜನರು ಸೇರಿರುತ್ತಾರೆ. ಅದೃಷ್ಟವಶಾತ್ ಸ್ವಲ್ಪದರಲ್ಲಿ ದೊಡ್ಡ ಅನಾಹುತವೊಂದು ತಪ್ಪಿದೆ. ಜಮಾದಾರ ಇಬ್ಬರು ಸಹೋದರರು ಇದ್ದು, ಒಬ್ಬರು ಸೈಕಲ್ ಶಾಪ್ ನಡೆಸಿದರೆ ಇನ್ನೊಬ್ಬರು 3 ಹಾಗೂ 5 ಕೆಜಿ ಗ್ಯಾಸ್ ಸಿಲಿಂಡರ್ ರೀಫಿಲ್ಲಿಂಗ್ ಮಾಡುವ ಕೆಲಸ ಮಾಡುತ್ತಾರೆ. ಬೇರೊಂದು ಅಂಗಡಿಯಲ್ಲಿ ರೀಫಿಲ್ಲಿಂಗ್ ಮಾಡಿ ಗ್ರಾಹಕರಿಗೆ ಕೊಡಲು ಸೈಕಲ್ ಅಂಗಡಿಯಲ್ಲಿ ಕೆಲವು ಸಿಲಿಂಡರ್ ಇಟ್ಟಿರುತ್ತಿದ್ದರು. ಅಂಗಡಿಯಲ್ಲಿ ಶಾರ್ಟ್ ಸರಕ್ಯೂಟ್ ಉಂಟಾಗಿ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಹೇಳಲಾಗಿದೆ. ಈ ರಸ್ತೆಯಲ್ಲಿ ತರಕಾರಿ ಮತ್ತು ಕಿರಾಣಿ ಅಂಗಡಿಗಳಿದ್ದು, ಜನನಿಬಿಡ ಪ್ರದೇಶವಾಗಿದೆ. ಇಂತಹ ಸ್ಥಳದಲ್ಲಿ ಗ್ಯಾಸ್ ಸಿಲಿಂಡರ್ ವ್ಯಾಪಾರ ಮಾಡುವುದು ಕಾನೂನು ಬಾಹಿರವಾಗಿದೆ. ಕಾನೂನು ಬಾಹಿರವಾಗಿದೆ.ಪ್ರಕರಣ ದಾಖಲು; ಅಕ್ರಮವಾಗಿ ಸಿಲಿಂಡರ್ ಸಂಗ್ರಹ ಮಾಡಿ ಘಟನೆಗೆ ಕಾರಣದಾದ ವಸಿಂ ಜಮಾದಾರ ಮತ್ತು ಸಲಿಂ ಜಮಾದಾರ ವಿರುದ್ಧ ಬಾದಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನಾ ಸ್ಥಳಕ್ಕೆ ಎಸ್.ಪಿ.ಭೇಟಿ; ಘಟನೆ ನಡೆದ ಸ್ಥಳಕ್ಕೆ ಎಸ್.ಪಿ.ಸಿದ್ದಾರ್ಥ ಗೋಯಲ್, ಸಿಪಿಐ ಕರೆಪ್ಪ ಬನ್ನೆ, ಪಿ.ಎಸ್.ಐ.ಹನಮಂತ ನೆರಳೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಗಾಯಾಳುಗಳ ಆರೋಗ್ಯ ವಿಚಾರಿಸಿದರು.