ಸಾರಾಂಶ
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಹೃದಯಾಘಾತವಾದ ಮಹಿಳೆಯನ್ನು ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯ ಡಯಾಲಿಸಿಸ್ ಕೇಂದ್ರದ ಸಿಬ್ಬಂದಿ ಸಮುದಾಯ ಆರೋಗ್ಯ ಕೇಂದ್ರದಲ್ಲಿದ್ದ ವೈದ್ಯರ ಸಹಾಯದಿಂದ ಸಿಪಿಆರ್ ಮಾಡುವ ಮೂಲಕ ಅಪಾಯದಿಂದ ಪಾರು ಮಾಡಿದ್ದು, ಬದುಕುಳಿಸಿದ್ದಾರೆ.ರಬಕವಿ ಸುನೀತಾ ಭೀಮಶಿ ಹೂಗಾರ (೪೬) ಬದುಕುಳಿದ ಮಹಿಳೆ. ಇವರು ಕಿಡ್ನಿ ವೈಫಲ್ಯದಿಂದ ವಾರದಲ್ಲಿ ಎರಡು ಬಾರಿ ಇಲ್ಲಿನ ಸರ್ಕಾರಿ ಆಸ್ಪತೆಗೆ ಆಗಮಿಸಿ ಡಯಾಲಿಸಿಸ್ ಮಾಡಿಸಿಕೊಂಡು ಹೋಗುತ್ತಿದ್ದರು. ಎಂದಿನಂತೆ ಆ.27ರಂದು ಡಯಾಲಿಸಿಸ್ ಮಾಡಿಸಿಕೊಂಡು ಹೊರಹೋಗುತ್ತಿದ್ದಂತೆ ಒಮ್ಮೆಲೆ ಹೃದಯಾಘಾತವಾಗಿ ನೆಲಕ್ಕುರುಳಿ ಜೀವ ಹೋದಂತೆ ಬಿದ್ದರು. ರಬಕವಿ-ಬನಹಟ್ಟಿ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹೃದ್ರೋಗ ತಜ್ಞ ವೈದ್ಯರಿಲ್ಲದ ಕಾರಣ ಹಲವು ಬಾರಿ ಅನೇಕರು ಪ್ರಾಣ ಕಳೆದುಕೊಂಡ ಉದಾಹರಣೆಗಳಿವೆ. ಆದರೆ ಇಲ್ಲಿನ ಶುಶ್ರೂಷಕ ಸಿಬ್ಬಂದಿ ಮಹೇಶ ಹೊಸಕೋಟಿ ಮತ್ತು ಸಿಎಚ್‌ಸಿ ಸಿಬ್ಬಂದಿ ಸಮಯ ಪ್ರಜ್ಞೆ ತೋರಿ, ವೈದ್ಯರ ಮೊರೆ ಹೋದರು. ಡಾ.ಸುನೀಲ ಹನಗಂಡಿ ಹಾಗೂ ಡಾ.ಬಿ.ಎಸ್. ಬಗಲಿ ಸತತ ೪೫ ನಿಮಿಷ ಸಿಪಿಆರ್ (ಕಾರ್ಡಿಯೋಪಲ್ಮನರಿ ರಿಸಸಿಟೇಶನ್) ಪದ್ಧತಿಯ ಮೂಲಕ ಚಿಕಿತ್ಸೆ ನೀಡಿ ಮಹಿಳೆಗೆ ಮರುಜೀವ ನೀಡಿದ್ದಾರೆ ಎಂದು ಮಹೇಶ ಹೊಸಕೋಟಿ ಪತ್ರಿಕೆಗೆ ತಿಳಿಸಿದರು. ನಂತರ ಹೆಚ್ಚಿನ ಚಿಕಿತ್ಸೆಗೆ ಜಮಖಂಡಿಯ ಆರೋಗ್ಯ ಕೇಂದ್ರಕ್ಕೆ ಕಳುಹಿಸಲಾಯಿತು.
ನಾನು ಸತ್ತೇ ಹೋದೆ ಎಂದು ಭಾವಿಸಿದ್ದೆ. ಮರುಜೀವ ಬಂದ ಬಳಿಕ ಇಲ್ಲಿಯವರೆಗೆ ಎಲ್ಲಿಯೋ ಹೋದ ಭಾಸವಾಯಿತು. ಮರುಜೀವ ತಂದು ಕೊಟ್ಟ ವೈದ್ಯರಿಗೆ ಶತಕೋಟಿ ನಮನಗಳು. ಜೀವ ತಂದು ಕೊಟ್ಟ ವೈದ್ಯರ ಋಣ ತೀರಿಸಲು ಸಾಧ್ಯವಿಲ್ಲ, ಧನ್ಯವಾದ ಹೇಳಲು ಮಾತ್ರ ನಾನು ಅರ್ಹಳು.- ಸುನಿತಾ ಭೀಮಶಿ ಹೂಗಾರ ಹೂಮಾರುವ ಮಹಿಳೆ ರಬಕವಿ