ಒಳ ಮೀಸಲಾತಿ ಖಂಡಿಸಿ ಸುಡುಗಾಡ ಸಿದ್ಧರ ಪ್ರತಿಭಟನೆ

| Published : Aug 30 2025, 01:02 AM IST

ಸಾರಾಂಶ

ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಯಲ್ಲಿ 59 ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಅಲೆಮಾರಿ ಸಮುದಾಯಗಳಿಗೆ ಸರ್ಕಾರ ಅನ್ಯಾಯ ಮಾಡಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಸುಡುಗಾಡಸಿದ್ಧ ಮಹಾ ಸಂಘ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಪರಿಶಿಷ್ಟ ಜಾತಿಗಳ ಒಳಮೀಸಲಾತಿಯಲ್ಲಿ 59 ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಅಲೆಮಾರಿ ಸಮುದಾಯಗಳಿಗೆ ಸರ್ಕಾರ ಅನ್ಯಾಯ ಮಾಡಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಸುಡುಗಾಡಸಿದ್ಧ ಮಹಾ ಸಂಘ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಸಲಾಯಿತು.

ಶುಕ್ರವಾರ ನವನಗರದ ಅಂಬೇಡ್ಕರ್‌ ಭವನದಿಂದ ಜಿಲ್ಲಾಡಳಿತ ಭವನದವರಗೆ ಮೆರವಣಿಗೆ ಮೂಲಕ ಆಗಮಿಸಿದ ಪ್ರತಿಭಟನಾಕಾರರು ಜಿಲ್ಲಾಡಳಿತ ಭವನ ಎದುರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಯ ಪ್ರವ ರ್ಗ-ಎ ರಲ್ಲಿ ಅನುಬಂಧಿತ 59 ಸೂಕ್ಷ್ಮ ಅಲೆಮಾರಿ ಪ.ಜಾತಿ ಸಮೂಹಕ್ಕೆ ಅನ್ಯಾಯ ಮಾಡಿದೆ. ಒಳ ಮೀಸಲಾತಿ ಜಾರಿ ಮಾಡುವ ಒತ್ತಡದಲ್ಲಿ ಸರ್ಕಾರ 101 ಪರಿಶಿಷ್ಟ ಜಾತಿಗಳಿಗೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸುವ ನಿಟ್ಟಿನಲ್ಲಿ ಅಘಾತ ಉಂಟು ಮಾಡಿದೆ ಎಂದು ಸಂಘಟನೆಯ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.

ನ್ಯಾ. ಎಚ್.ಎನ್. ಮೋಹನ ದಾಸ್ ಆಯೋಗದ ಶಿಫಾರಸ್ಸಿನಂತೆ 59 ಸೂಕ್ಷ್ಮ ಮತ್ತು ಅಲೆಮಾರಿ ಪರಿಶಿಷ್ಟ ಜಾತಿಗಳನ್ನು 59 ಸೂಕ್ಷ್ಮ ಮತ್ತು ಅಲೆಮಾರಿ ಪರಿಶಿಷ್ಟ ಜಾತಿಗಳನ್ನು ಪ್ರವರ್ಗ-ಎ ರಲ್ಲಿಯೇ ಇರಿಸಿ ಶೇ.1ರಷ್ಟು ಒಳ ಮೀಸಲಾತಿ ನೀಡಿದರೆ ಕಟ್ಟಕಡೆಯ ಸಮುದಾಯಗಳಿಗೆ ನ್ಯಾಯ ಸಿಗಲಿದೆ. ಅಲೆಮಾರಿಗಳನ್ನು ಬಂಜಾರ, ಭೋವಿ, ಕೊರಮ, ಕೊರಚ, ಸಮುದಾಯಗಳ ಜೊತೆ ಸೇರಿಸಿ ಶೇ.5 ಮೀಸಲಾತಿ ನಿಗದಿ ಮಾಡಿರುವುದರಿಂದ ಅಲೆಮಾರಿ ಸಮುದಾಯಗಳು ಶಾಶ್ವತವಾಗಿ ಮೀಸಲಾತಿಯಿಂದ ವಂಚಿತವಾಗಲಿವೆ. ಸಾವಿರಾರು ವರ್ಷಗಳಿಂದ ಗುಡಿ ಗುಂಡಾರ, ಕೌದಿ, ಜೋಪಡಿಗಳಲ್ಲಿ ಕುಲ ಕಸುಬು ಮಾಡುತ್ತಾ ಅಸ್ಪೃಶ್ಯರಲ್ಲಿ ಅಸ್ಪೃಶ್ಯರಾಗಿಯೇ ಹೀನಾಯ ಬದುಕು ಸಾಗಿಸುತ್ತಿರುವ ಈ ಅನಾಥ ಸಮುದಾಯಗಳಿಗೆ ಸ್ವಾತಂತ್ರ್ಯ ನಂತರ ಸಂವಿಧಾನಬದ್ಧ ಮೂಲ ಸೌಲಭ್ಯಗಳು ದೊರಕಿಲ್ಲ. ರಾಜಕೀಯದಲ್ಲಿ ಸಣ್ಣಮಟ್ಟದ ಸ್ಥಾನಮಾನವೂ ಸಿಕ್ಕಿಲ್ಲ. ಉನ್ನತ ಉದ್ಯೋಗಗಳು ಸಿಕ್ಕಿಲ್ಲ. ಪರಿಶಿಷ್ಟ ಜಾತಿಯಲ್ಲಿನ ಬಲಾಢ್ಯ ಸಮುದಾಯಗಳು ಮೀಸಲಾತಿಯಲ್ಲಿ ಪಾಲು ಪಡೆಯುತ್ತ ಬಂದಿವೆ. ಕಾರಣ ಮೀಸಲಾತಿಯಲ್ಲಿ ಪ್ರಾತಿನಿಧ್ಯ ಪಡೆಯದ ಚಿಕ್ಕ ಚಿಕ್ಕ ಸಮುದಾಯಗಳಿಗೆ ನಿರ್ದಿಷ್ಟ ಪಾಲು ನಿಗದಿಪಡಿಸಬೇಕೆಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಅಲೆಮಾರಿ ಸಮುದಾಯದವರು ತಮ್ಮ ವೇಷಭೂಷಣ ಧರಿಸಿ ಪಾಲ್ಗೊಂಡಿದ್ದರು. ಕೆ.ಎಸ್.ದಾಸರ, ರಾಘವೇಂದ್ರ ನಾಗೂರ, ಮುತ್ತಣ್ಣ ಬೆಣ್ಣೂರ, ಶಿವಾನಂದ ಟವಳಿ, ಶಂಕರ ರುದ್ರಾಕ್ಷಿ., ಮುದಕಪ್ಪ ಸಿಳ್ಳೆಕ್ಯಾತಿ, ಭೀಮಶಿ ಘಂಟಿ, ಕಾವ್ಯ ರುದ್ರಾಕ್ಷಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.