ಸಾರಾಂಶ
ಕನ್ನಡಪ್ರಭ ವಾರ್ತೆ ಮುಧೋಳ
ದಶಕಗಳ ಬೇಡಿಕೆಯಾಗಿದ್ದ ಒಳ ಮೀಸಲಾತಿ ಜಾರಿಗೆ ತರುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸರ್ಕಾರ ಶತಮಾನಗಳಿಂದ ನೋವುಂಡಿದ್ದ ಮೂಲ ಪಂಚಮ ಜನಾಂಗಕ್ಕೆ ನ್ಯಾಯ ಒದಗಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.ಮುಧೋಳದಲ್ಲಿ ತಮ್ಮನ್ನು ಸನ್ಮಾನಿಸಿದ ಮೂಲ ಆಸ್ಪೃಶ್ಯ ಸಮುದಾಯದವರನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ದೀರ್ಘ ಚರ್ಚೆ ನಡೆಸಿ ಒಮ್ಮತದ ನಿರ್ಧಾರಕ್ಕೆ ಬಂದು ಶೇ.6, ಶೇ.6 ಮತ್ತು ಶೇ.5ರಂತೆ ಮೂರು ಭಾಗಗಳನ್ನಾಗಿ ಮಾಡಿ ಒಳ ಮೀಸಲಾತಿ ಜಾರಿಗೆ ತಂದಿದೆ. ಇದು ಕಾಂಗ್ರೆಸ್ ಸರ್ಕಾರದ ಮಹತ್ತರ ಯಶಸ್ಸು ಎಂದು ಹೇಳಿ, ನಾನು ಆಯೋಗ ಆರಂಭಿಸಿದ ಜಿಲ್ಲೆಯ ಉಸ್ತುವಾರಿಯಾಗಿದ್ದೆ. 2004ರಲ್ಲಿ ಹುನಗುಂದ ಉಪಚುನಾವಣೆ ಸಮಯದಲ್ಲಿ ಬಾಗಲಕೋಟೆ ಜಿಲ್ಲೆಯ ಉಸ್ತುವಾರಿ ಸಚಿವನಾಗಿ ಒಳ ಮೀಸಲಾತಿಗಾಗಿ ಆಯೋಗ ಆರಂಭಿಸಿದ್ದೆ, ಈಗಲೂ ನಾನು ಇದೇ ಜಿಲ್ಲೆಯ ಉಸ್ತುವಾರಿ ಸಚಿವನಾಗಿ ಈ ಹೋರಾಟ ಅಂತ್ಯಗೊಳಿಸಲು ನೆರವಾದೆ ಎಂದು ಸಚಿವರು ಸಂತಸ ವ್ಯಕ್ತಪಡಿಸಿದರು.
ನಮ್ಮ ಸಮುದಾಯದ ಜನರು ಜನಸಂಖ್ಯೆಗನುಗುಣವಾಗಿ ಶೇ.6ರಷ್ಟು ಮೀಸಲಾತಿ ಪಡೆದಿದ್ದಾರೆ. ಯಾರಿಂದಲೂ ಕಸಿದುಕೊಂಡಿಲ್ಲ. ನಮ್ಮ ಮೂರು ದಶಕಗಳ ಹೋರಾಟಕ್ಕೆ ಅಂತ್ಯ ಹಾಡಿದ ಸಿದ್ದರಾಮಯ್ಯನವರನ್ನು ನಾವು ಎಂದಿಗೂ ಮರೆಯಬಾರದು. ಅವರ ಬೆಂಬಲಕ್ಕೆ ಸದಾ ಇರಬೇಕೆಂದು ಹೇಳಿದರು.ಸಿದ್ದರಾಮಯ್ಯ ಆಧುನಿಕ ಬಸವಣ್ಣ:
ವಿವಿಧ ದಲಿತ ಮತ್ತು ಮಾದಿಗ ಸಮುದಾಯದ ಸಂಘಟನೆಗಳು ಈ ಹೋರಾಟಕ್ಕಾಗಿ ಪ್ರಾಣ ಬಲಿದಾನದ ಮೂಲಕ ಕಿಚ್ಚು ಹಚ್ಚಿ, ಕೂಡಲಸಂಗಮ, ಹರಿಹರ ದಿಂದ ಬೆಂಗಳೂರಿನವರೆಗೆ ಕಾಲ್ನಡಿಗೆ, ಅರೆಬೆತ್ತಲೆ ಮತ್ತು ದಿಡ್ಡಿ ದಂಡೆ ಹೋರಾಟ ನಡೆಸಿದ್ದಾರೆ, ಊರೂರು ಸುತ್ತಿ, ಊಟ ಬಿಟ್ಟು, ಬೀದಿ ಬದಿಯಲ್ಲಿ ಮಲಗಿದ ಮಾದಿಗ ಸಮುದಾಯಕ್ಕೆ ಈ ಹೋರಾಟ ಹೊಸ ಬದುಕು ಕೊಟ್ಟಿದೆ. ಹೊಸ ಕನಸು ಕೊಟ್ಟ ಸಿಎಂ ಸಿದ್ದರಾಮಯ್ಯನವರನ್ನು ಒಳ ಮೀಸಲುರಾಮಯ್ಯ ಎಂದೇ ಹೆಮ್ಮೆಯಿಂದ ಕರೆಯಬೇಕು, ಸಂವಿಧಾನ ಬದ್ಧವಾಗಿ ಮೂಲ ಅಸ್ಪೃಶ್ಯರ ಕಣ್ಣೀರು ಒರೆಸಿದ ಆಧುನಿಕ ಬಸವಣ್ಣ ಎಂದು ಬಣ್ಣಿಸಿದರು.ಮುಧೋಳದಲ್ಲಿ ಸಂಭ್ರಮದ ವಾತಾವರಣ:ರಾಜ್ಯ ಸರ್ಕಾರದ ಒಳ ಮೀಸಲಾತಿ ನಿರ್ಧಾರದ ಹಿನ್ನೆಲೆಯಲ್ಲಿ ಮುಧೋಳದ ಪ್ರವಾಸಿ ಮಂದಿರದಲ್ಲಿ ನೆರೆದಿದ್ದ ಮೂಲ ಆಸ್ಪೃಶ್ಯ ಸಮುದಾಯದ ಹೋರಾಟಗಾರರು, ಮಹಿಳೆಯರು ಮತ್ತು ಹಿರಿಯರು ಸಚಿವ ಆರ್.ಬಿ. ತಿಮ್ಮಾಪೂರ ಅವರನ್ನು ಅದ್ಧೂರಿಯಾಗಿ ಸನ್ಮಾನಿಸಿ, ಪಟಾಕಿ ಸಿಡಿಸಿ, ಸಿಹಿ ಹಂಚಿ, ಜೈಕಾರ ಹಾಕುವ ಮೂಲಕ ತಮ್ಮ ಸಂಭ್ರಮಿಸಿದರು.
ಹಿರಿಯ ಹೋರಾಟಗಾರ ಕೃಷ್ಣಾ ಮಾದರ, ಗಣೇಶ ಮೇತ್ರಿ, ಪ್ರಕಾಶ ತಳಗೇರಿ , ಮಹಾದೇವ ಮಾದರ, ಹಣಮಂತ ಪೂಜಾರಿ, ಸದಾಶಿವ ಮೇತ್ರಿ, ಯಶವಂತ ಚಿಕ್ಕೂರ, ಕುಮಾರ ಕಾಳಮ್ಮನವರ, ರಮೇಶ ದುರದುಂಡಿ, ರಮೇಶ ಸತ್ತಿಗೇರಿ, ಹುಸೇನ್ ಅವರಾದಿ, ಸತೀಶ ಗಾಡಿ, ಭೀಮಶಿ ಮೇತ್ರಿ, ರಾಮಣ್ಣ ಮಲ್ಲಿಗೇರಿ, ಕಲ್ಲಪ್ಪ ಮಾದರ, ಯಮನಪ್ಪ ದೊಡಮನಿ, ಸಂಜು ಗಸ್ತಿ, ಮಹಾದೇವ ಬಾಗಿ, ಸಂತೋಷ ಶೇರ್ಖಾನೆ, ರವಿ ಕುಂದಗನೂರ, ಲಕ್ಷ್ಮಣ ಚಲವಾದಿ ಸೇರಿದಂತೆ ಮೂಲ ಆಸ್ಪೃಶ್ಯ ಹೋರಾಟಗಾರರು ಇದ್ದರು.