ಸಾರಾಂಶ
ಕಲಾದಗಿ : ಗದ್ದನಕೇರಿ ಕ್ರಾಸ್ ಮನೆಯೊಂದರಲ್ಲಿ ಭಾನುವಾರ ಬೆಳಗಿನ ಜಾವ ಅನಿಲ ಸೋರಿಕೆಯಾಗಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಮನೆಯಲ್ಲಿದ್ದ ಮಗು ಸೇರಿ 8 ಜನ ಯುವಕ, ಯುವತಿಯರಿಗೆ ಚಿಕ್ಕಪುಟ್ಟ ಗಾಯಗೊಂಡಿದ್ದಾರೆ.
ಸ್ನೇಹಾ (18), ಶ್ರುತಿ (18), ರಮಾ (16), ಐಶ್ವರ್ಯ (13) ಗಣೇಶ (26), ಸಚಿನ್ (24), ಕಲ್ಮೇಶ್ (24), ದಾಪುದೇವಿ (28), ಡಿಂಪಲ್ (1) ಗಾಯಗೊಂಡಿದ್ದು, ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಭಾನುವಾರ ಬೆಳಗಿನ ಜಾವ ಸಿಲಿಂಡರ್ ಸೋರಿಕೆಯಾಗಿ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಮನೆ ಸಂಪೂರ್ಣ ನಾಶವಾಗಿದ್ದು, ಮನೆಯ ಅಕ್ಕಪಕ್ಕ ನಿಲ್ಲಿಸಿದ್ದ ವಾಹನಗಳೂ ಬೆಂಕಿಗೆ ಆಹುತಿಯಾಗಿವೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ನಂದಿಸಿದರು.
ಸಚಿವರ ಭೇಟಿ : ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಅಗ್ನಿಶಾಮಕ ಇಲಾಖೆ, ಪೊಲೀಸ್ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ನವನಗರದ ಕುಮಾರೇಶ್ವರ ಆಸ್ಪತ್ರೆಗೆ ತೆರಳಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು.
ಈ ವೇಳೆ ಮಾತನಾಡಿದ ಸಚಿವ ಆರ್. ಬಿ. ತಿಮ್ಮಾಪೂರ, ಈ ದುರಂತದಿಂದ ಎಲ್ಲರೂ ಶೋಕದಲ್ಲಿದ್ದಾರೆ. ಗಾಯಾಳುಗಳ ಚಿಕಿತ್ಸೆಗೆ ಸರ್ಕಾರದಿಂದ ಎಲ್ಲ ರೀತಿಯ ಸಹಾಯ ಮಾಡಲಾಗುವುದು. ಸಿಲಿಂಡರ್ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.
ಶಾಸಕ ಜೆ.ಟಿ. ಪಾಟೀಲ ಮಾತನಾಡಿ, ಗಾಯಾಳು ಭೇಟಿಯಾಗಿ, ಚಿಕಿತ್ಸೆಗೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಇಂತಹ ದುರಂತ ಮತ್ತೆ ಸಂಭವಿಸದಂತೆ ಸುರಕ್ಷಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಹೇಳಿದರು.
ಪೊಲೀಸ್ ಇಲಾಖೆ ಘಟನೆಯ ಬಗ್ಗೆ ತನಿಖೆ ಆರಂಭಿಸಿದ್ದು, ಸಿಲಿಂಡರ್ ಸೋರಿಕೆಯ ಕಾರಣ ಕಂಡುಹಿಡಿಯಲಾಗುತ್ತಿದೆ. ಅಗ್ನಿಶಾಮಕದ ಇಲಾಖೆಯ ಅಧಿಕಾರಿಗಳು ಸ್ಥಳದಲ್ಲಿದ್ದರು.
ಬಾಗಲಕೋಟೆ ಉಪವಿಭಾಗಧಿಕಾರಿ ಸಂತೋಷ ಜಗಲಾಸರ, ತಾಲೂಕು ಪಂಚಾಯತಿ ಇಒ ಸಂತೋಷ ಸಂಪಗಾವಿ, ಗ್ರೇಡ್ 2 ತಹಸೀಲ್ದಾರ್ ಎಂ.ಜಿ. ಬಿರಾದಾರ, ಪಿಎಸ್ ಐ ಪ್ರವೀಣ ಬೀಳಗಿ ಇದ್ದರು.