ಸಿಲಿಂಡರ್‌ ಸೋರಿಕೆ: ಮತ್ತೋರ್ವ ಮಾಲಾಧಾರಿ ಸಾವು

| Published : Jan 01 2025, 01:01 AM IST

ಸಾರಾಂಶ

ಸಿಲಿಂಡಿರ್ ಸೋರಿಕೆ ಅವಘಡದಲ್ಲಿ ಗಾಯಗೊಂಡಿದ್ದ 9 ಜನ ಅಯ್ಯಪ್ಪಸ್ವಾಮಿ ಮಾಲಾಧಾರಿಗಳ ಪೈಕಿ ಮತ್ತೊಬ್ಬ ಗಾಯಾಳು ಚಿಕಿತ್ಸೆ ಫಲಿಸದೇ ಮಂಗಳವಾರ ಮೃತಪಟ್ಟಿದ್ದಾರೆ.

ಹುಬ್ಬಳ್ಳಿ: ಸಿಲಿಂಡರ್‌ ಸೋರಿಯಿಂದಾಗಿ ಉಂಟಾದ ಅಗ್ನಿ ಅವಘಡದಲ್ಲಿ ತೀವ್ರವಾಗಿ ಗಾಯಗೊಂಡಿದ್ದ 9 ಜನ ಅಯ್ಯಪ್ಪಸ್ವಾಮಿ ಮಾಲಾಧಾರಿಗಳ ಪೈಕಿ ಮತ್ತೊಬ್ಬ ಗಾಯಾಳು ಚಿಕಿತ್ಸೆ ಫಲಿಸದೇ ಮಂಗಳವಾರ ಮೃತಪಟ್ಟಿದ್ದಾರೆ. ಆ ಮೂಲಕ ಸಾವಿನ ಸಂಖ್ಯೆ 8 ಏರಿಕೆಯಾಗಿದ್ದು, ಓರ್ವ ಮಾಲಾಧಾರಿ ಚಿಕಿತ್ಸೆ ಮುಂದುವರಿದಿದೆ.

ಚಿಕಿತ್ಸೆಗೆ ಸ್ಪಂದಿಸದೇ ಪ್ರಕಾಶ ಬಾರಕೇರ (42) ಮಂಗಳವಾರ ಬೆಳಗ್ಗೆ ಮೃತಪಟ್ಟಿದ್ದಾರೆ.

ತಂದೆ ಮಗ ಇಬ್ಬರು ಮಾಲೆ ಧರಿಸಿದ್ದರು. ತಂದೆ ಮೃತಪಟ್ಟಿದ್ದು, ಮಗನಿಗೆ ಚಿಕಿತ್ಸೆ ಮುಂದುವರಿದಿದೆ. ಈ ಘಟನೆಯಲ್ಲಿ ಹಂತ ಹಂತವಾಗಿ 8 ಜನ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಮೃತಪಟ್ಟಿದ್ದಾರೆ. ಇದರಿಂದ ಇಡೀ ಧಾರವಾಡ ಜಿಲ್ಲೆ ತಲ್ಲಣಗೊಂಡಿದ್ದು, ಹೊಸ ವರ್ಷಾಚರಣೆಗೆ ಕಾರ್ಮೋಡ ಕವಿಯುವಂತೆ ಮಾಡಿತು. ಡಿ. 22ರ ತಡರಾತ್ರಿ ಇಲ್ಲಿನ ಸಾಯಿನಗರದಲ್ಲಿ ಸಿಲಿಂಡರ್‌ ಸೋರಿಕೆಯಿಂದಾಗಿ ನಡೆದ ಅಗ್ನಿ ಅವಘಡದಲ್ಲಿ 9 ಜನ ಅಯ್ಯಪ್ಪ ಮಾಲಾಧಾರಿಗಳು ತೀವ್ರವಾಗಿ ಗಾಯಗೊಂಡಿದ್ದರು. ಕೆಎಂಸಿಆರ್‌ಐನಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಇವರಲ್ಲಿ ಚಿಕಿತ್ಸೆ ಫಲಕಾರಿಯಾಗದೆ 8 ಅಯ್ಯಪ್ಪ ಮಾಲಾಧಾರಿ ಮೃತಪಟ್ಟಿದ್ದಾರೆ.

ವಿಷಯ ತಿಳಿದು ಕೆಎಂಸಿಆರ್‌ಐ ಶವಾಗಾರಕ್ಕೆ ದೌಡಾಯಿಸಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಧಾವಿಸಿದ ಶಾಸಕ ಮಹೇಶ ಟೆಂಗಿನಕಾಯಿ, ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಇದಕ್ಕೂ ಪೂರ್ವದಲ್ಲಿ ಬೆಳಗ್ಗೆ ತೇಜಸ್‌ ಸತಾರೆ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಿದರು. ನಂತರ ಪ್ರಕಾಶ ಬಾರಕೇರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಬೆಳಗ್ಗೆ 11.30ರ ಸುಮಾರಿಗೆ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.

ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ:

ಅಯ್ಯಪ್ಪಸ್ವಾಮಿ ಮಾಲಾಧಾರಿ ಪ್ರಕಾಶ ಬಾರಕೇರ ಮೃತರಾಗುತ್ತಿದ್ದಂತೆ ಕೆಎಂಸಿಆರ್‌ಐ ಆವರಣದಲ್ಲಿ ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಶವಾಗಾರ ಬಳಿ ತಾಯಿ-ತಂದೆ, ಪತ್ನಿ, ಸಹೋದರ ಮತ್ತವರ ಸಂಬಂಧಿಗಳ ರೋಧನ ಕಂಡು ಅಲ್ಲಿದ್ದವರ ಕಣ್ಣಂಚಿನಲ್ಲಿ ನೀರು ತರಿಸಿತು.

ನಾಳೆ ಆಸ್ಪತ್ರೆಯಿಂದ ಬಿಡುಗಡೆ

ಈ ದುರ್ಘಟನೆಯಲ್ಲಿ ಶೇ. 25ರಷ್ಟು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಮತ್ತೋರ್ವ ಅಯ್ಯಪ್ಪ ಮಾಲಾಧಾರಿ ವಿನಾಯಕ ಬಾರಕೇರ ಗುಣಮುಖರಾಗಿದ್ದು, ಬುಧವಾರ ಇಲ್ಲವೇ ಗುರುವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುವುದು ಎಂದು ಕೆಎಂಸಿಆರ್‌ಐ ನಿರ್ದೇಶಕ ಡಾ. ಎಸ್‌.ಎಫ್‌. ಕಮ್ಮಾರ ಕನ್ನಡಪ್ರಭಕ್ಕೆ ತಿಳಿಸಿದರು.

ಸರ್ಕಾರ ಹೆಚ್ಚಿನ ಪರಿಹಾರ ನೀಡಲಿ

ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಅಯ್ಯಪ್ಪಸ್ವಾಮಿ ಮಾಲಾಧಾರಿಗಳ ಕುಟುಂಬಸ್ಥರಿಗೆ ರಾಜ್ಯ ಸರ್ಕಾರ ಹೆಚ್ಚಿನ ಪರಿಹಾರ ನೀಡಲಿ ಎಂದು ಶಾಸಕ ಮಹೇಶ ಟೆಂಗಿನಕಾಯಿ ಒತ್ತಾಯಿಸಿದರು.

ಅವರು ಮಂಗಳವಾರ ಕೆಎಂಸಿಆರ್‌ಐ ಶವಗಾರ ಬಳಿ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ರಾಜ್ಯ ಸರ್ಕಾರ ಇದನ್ನು ವಿಶೇಷ ಪ್ರಕರಣವೆಂದು ₹5 ಲಕ್ಷ ಪರಿಹಾರ ಘೋಷಣೆ ಮಾಡಿದೆ. ಆದರೆ, ಮೃತರ ಕುಟುಂಬಸ್ಥರು ತುಂಬಾ ಕಡುಬಡವರಿದ್ದು ಕುಟುಂಬ ನಿರ್ವಹಣೆಗೆ ಈ ಪರಿಹಾರ ಸಾಕಾಗುವುದಿಲ್ಲ. ಇದೊಂದು ವಿಶೇಷ ಪ್ರಕರಣ ಎಂದು ಸರ್ಕಾರ ಪರಿಗಣಿಸಿ ಪರಿಹಾರ ಮೊತ್ತವನ್ನು ₹15 ಲಕ್ಷಕ್ಕೆ ಹೆಚ್ಚಿಸಬೇಕು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವರಿಕೆ ಮಾಡಲಾಗುವುದು. ಇನ್ನೊಂದೆಡೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರೊಂದಿಗೆ ಚರ್ಚಿಸಿ ಕೇಂದ್ರದಿಂದಲೂ ಪರಿಹಾರ ಒದಗಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.