ಸಾರಾಂಶ
ಸಿಲಿಂಡರ್ ಸೋರಿಕೆಯಾಗಿ ನಡೆದ ಅಗ್ನಿ ಅವಘಡದಲ್ಲಿ 9 ಮಂದಿ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಗಾಯಗೊಂಡಿದ್ದರು. ಎಲ್ಲ ಗಾಯಾಳುಗಳಿಗೆ ಇಲ್ಲಿನ ಕೆಎಂಸಿಆರ್‌ಐನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಇದೀಗ ಒಟ್ಟು ನಾಲ್ವರು ಮಾಲಾಧಾರಿಗಳು ಮೃತಪಟ್ಟಿದ್ದಾರೆ.
ಹುಬ್ಬಳ್ಳಿ:
ಸಿಲಿಂಡರ್ ಸೋರಿಕೆಯಿಂದ ನಡೆದ ಅಗ್ನಿ ಅವಘಡದಲ್ಲಿ ತೀವ್ರವಾಗಿ ಗಾಯಗೊಂಡು ಇಲ್ಲಿನ ಕೆಎಂಸಿಆರ್‌ಐನಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರಲ್ಲಿ ಶುಕ್ರವಾರ ಮತ್ತಿಬ್ಬರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ನಾಲ್ಕಕ್ಕೇರಿದೆ. ಇನ್ನುಳಿದ ಐವರಿಗೆ ಚಿಕಿತ್ಸೆ ಮುಂದುವರಿದಿದೆ.ಉಣಕಲ್ ಹತ್ತಿರದ ಸಾಯಿನಗರದಲ್ಲಿ ಸೋಮವಾರ ಬೆಳಗಿನ ಜಾವ ಸಿಲಿಂಡರ್ ಸೋರಿಕೆಯಾಗಿ ನಡೆದ ಅಗ್ನಿ ಅವಘಡದಲ್ಲಿ 9 ಮಂದಿ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಗಾಯಗೊಂಡಿದ್ದರು. ಎಲ್ಲ ಗಾಯಾಳುಗಳಿಗೆ ಇಲ್ಲಿನ ಕೆಎಂಸಿಆರ್‌ಐನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಇದೀಗ ಒಟ್ಟು ನಾಲ್ವರು ಮಾಲಾಧಾರಿಗಳು ಮೃತಪಟ್ಟಿದ್ದಾರೆ.
ಶುಕ್ರವಾರ ಬೆಳಗ್ಗೆ ರಾಜು ಮೂಗೇರಿ (21) ಹಾಗೂ ಸಂಜೆ ಲಿಂಗರಾಜ ಬೀರನೂರ (19) ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಗುರುವಾರ ಇಬ್ಬರು ಮೃತರಾಗಿದ್ದರು. ಈ ಘಟನೆಯಲ್ಲಿ ಗಾಯಗೊಂಡಿದ್ದ ಇನ್ನುಳಿದ ಐವರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ವಿನಾಯಕ ಎಂಬ ಬಾಲಕ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಆತನನ್ನು ಬೇರೆ ವಾರ್ಡ್‌ಗೆ ಶಿಫ್ಟ್ ಮಾಡಲಾಗಿದೆ. ಸಂಪೂರ್ಣವಾಗಿ ಗುಣಮುಖನಾಗುವ ವಿಶ್ವಾಸ ಹೊಂದಿರುವುದಾಗಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಆಸ್ಪತ್ರೆಯ ಎದುರು ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಶಾಸಕ ಮಹೇಶ ಟೆಂಗಿನಕಾಯಿ, ಜಿಲ್ಲಾಧಿಕಾರಿ ದಿವ್ಯಪ್ರಭು ಸೇರಿದಂತೆ ಹಲವರು ಆಗಮಿಸಿ ಮೃತರ ಕುಟುಂಬದರಿಗೆ ಸಾಂತ್ವನ ಹೇಳಿದರು.ಮಾಹಿತಿ ಪಡೆದ ಸಚಿವ
ಈ ಘಟನೆಯ ಕುರಿತಂತೆ ಶುಕ್ರವಾರ ಬೆಳಗ್ಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ ಪಾಟೀಲ್ ಕೆಎಂಸಿಆರ್‌ಐನ ನಿರ್ದೇಶಕ ಡಾ. ಎಸ್.ಎಫ್. ಕಮ್ಮಾರ ಅವರನ್ನು ಇಲ್ಲಿನ ವಿಮಾನ ನಿಲ್ದಾಣಕ್ಕೆ ಕರೆಸಿ ಗಾಯಾಳುಗಳಿಗೆ ನೀಡುತ್ತಿರುವ ಚಿಕಿತ್ಸಾ ಕ್ರಮಗಳ ಕುರಿತು ಮಾಹಿತಿ ಪಡೆದರು. ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇದ್ದರೆ ಬೇರಡೆಯಿಂದ ನುರಿತ ತಜ್ಞ ವೈದ್ಯರನ್ನು ಕರೆಯಿಸಿ ಚಿಕಿತ್ಸೆ ನೀಡುವಂತೆ ಸಲಹೆ ನೀಡಿದರು.ಈ ವೇಳೆ ಕಿಮ್ಸ್ ನಿರ್ದೇಶಕ ಡಾ. ಎಸ್.ಎಫ್. ಕಮ್ಮಾರ ಮಾತನಾಡಿ, ಎಲ್ಲ ಗಾಯಾಳುಗಳನ್ನು ಚಿಕಿತ್ಸೆ ನೀಡಿ ಬದುಕುಳಿಸಲು ಸಾಕಷ್ಟು ಶ್ರಮಿಸಿದ್ದೆವು. ಆದರೆ, ಅದು ಸಾಧ್ಯ ಆಗಲಿಲ್ಲ. ಇನ್ನುಳಿದವರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ. ನಮ್ಮ ಪ್ರಯತ್ನಕ್ಕೆ ದೇವರು ಫಲ ನೀಡಬಹುದು ಎಂಬ ವಿಶ್ವಾಸವಿದೆ ಎಂದರು.