ಹಾವೇರಿ: ಇರಾನ್‌- ಇಸ್ರೇಲ್‌ ಯುದ್ಧದ ಪರಿಣಾಮ ಹೆಚ್ಚುತ್ತಿದ್ದು, ವಾಣಿಜ್ಯ ಬಳಕೆಯ ಅಡುಗೆ ಅನಿಲ ಸಿಲಿಂಡರ್ ಪೂರೈಕೆಯಲ್ಲಿ ತೀವ್ರ ಸಮಸ್ಯೆ ಎದುರಾಗುತ್ತಿದೆ. ಹೋಟೆಲ್‌, ವಸತಿ ಶಾಲೆಗಳು ಹಾಗೂ ಕಲ್ಯಾಣ ಮಂಟಪಗಳಿಗೂ ತಟ್ಟುತ್ತಿದೆ. ಶಾಲೆಗಳ ಮಧ್ನಾಹ್ನದ ಬಿಸಿಯೂಟಕ್ಕೂ ತೊಂದರೆಯಾಗುವ ಆತಂಕ ಎದುರಾಗಿದೆ.

ನಗರದ ಪ್ರಮುಖ ಹೋಟೆಲ್‌ಗಳಲ್ಲಿ ಸಿಲಿಂಡರ್ ದಾಸ್ತಾನು ಖಾಲಿಯಾಗುತ್ತಿದ್ದು, ಅಡುಗೆ ತಯಾರಿಕೆಗೆ ಅಡ್ಡಿಯಾಗಿದೆ. ಗ್ಯಾಸ್ ಉಳಿತಾಯಕ್ಕಾಗಿ ಕೆಲವು ಹೋಟೆಲ್‌ಗಳು ತಮ್ಮ ಕಾರ್ಯವೈಖರಿಯಲ್ಲಿ ಬದಲಾವಣೆ ಮುಂದಾಗಿವೆ. ಹೆಚ್ಚು ಇಂಧನ ಬಳಸುವ ಪದಾರ್ಥಗಳನ್ನು ತಾತ್ಕಾಲಿಕವಾಗಿ ಮೆನುವಿನಿಂದ ಕೈಬಿಟ್ಟಿವೆ. ಜತೆಗೆ ಚೈನೀಸ್, ಉತ್ತರ ಭಾರತ ಶೈಲಿ ಸೇರಿದಂತೆ ವಿವಿಧ ಶೈಲಿಯ ಆಹಾರಗಳಿಗೂ ಕಡಿವಾಣ ಹಾಕಿ ಕಡಿಮೆ ಗ್ಯಾಸ್‌ನಲ್ಲಿ ಮಾಡಬಹುದಾದ ಹಾಗೂ ಜನರಿಗೆ ತೀರಾ ಅವಶ್ಯಕ ಆಹಾರ ಪದಾರ್ಥಗಳನ್ನು ಮಾತ್ರ ಮಾಡಲು ಹೋಟೆಲ್ ಮಾಲೀಕರು ಚಿಂತಿಸುತ್ತಿದ್ದಾರೆ. ಪಿಜಿಗಳಲ್ಲಿರುವ ವಿದ್ಯಾರ್ಥಿಗಳಿಗೆ ಅಡುಗೆ ಮಾಡಲು ಅಗತ್ಯಕ್ಕೆ ತಕ್ಕಷ್ಟು ಗ್ಯಾಸ್ ಇಲ್ಲದೇ ಇರುವುದು ಮಾಲೀಕರನ್ನು ಕಂಗಾಲಾಗುವಂತೆ ಮಾಡಿದೆ.

ಜಿಲ್ಲೆಯಲ್ಲಿ ಪ್ರತಿದಿನ ಅಂದಾಜು 2800ರಿಂದ 3000 ವಾಣಿಜ್ಯ ಸಿಲಿಂಡರ್‌ಗಳ ಬೇಡಿಕೆ ಇದೆ. ಕೇವಲ 1500ರಿಂದ 1800 ಸಿಲಿಂಡರ್‌ಗಳು ಮಾತ್ರ ವಿತರಣೆಯಾಗಿವೆ. ಶೇ. 35-40ರಷ್ಟು ಪೂರೈಕೆ ಕೊರತೆ ಕಂಡುಬಂದಿದೆ.

ಸದ್ಯಕ್ಕೆ ಗೃಹ ಬಳಕೆ ಸಿಲಿಂಡರ್‌ಗಳ ವಿತರಣೆಯಲ್ಲಿ ದೊಡ್ಡ ಮಟ್ಟದ ವ್ಯತ್ಯಯ ಕಂಡುಬಂದಿಲ್ಲ. ಆದರೆ ದರ ಹೆಚ್ಚಳದ ಬಿಸಿ ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿದೆ. ಆದರೂ ಗ್ರಾಹಕರು ಮುನ್ನೆಚ್ಚರಿಕೆಯಾಗಿ ರಿಫಿಲ್ ಬುಕಿಂಗ್ ಮಾಡುತ್ತಿರುವುದರಿಂದ ಕಾಯುವಿಕೆಯ ದಿನಗಳು ಒಂದುವಾರದ ವರೆಗೆ ಏರಿಕೆಯಾಗಿದೆ. ಸಕಾಲಕ್ಕೆ ಸಿಲಿಂಡರ್ ಸಿಗದೇ ಕೆಲವರು ಮತ್ತೆ ಹಳೆಯ ಸೌದೆ ಒಲೆ ವ್ಯವಸ್ಥೆಯತ್ತ ಮುಖ ಮಾಡುತ್ತಿದ್ದಾರೆ.

ಶುಭ ಸಮಾರಂಭಗಳಿಗೂ ತಟ್ಟುತ್ತಿರುವ ಬಿಸಿ: ಪ್ರಸ್ತುತ ಶುಭ ಸಮಾರಂಭಗಳ ಹಂಗಾಮು ಆಗಿರುವುದರಿಂದ ಕಲ್ಯಾಣ ಮಂಟಪಗಳಲ್ಲಿ ಬೇಡಿಕೆ ಹೆಚ್ಚಿದೆ. ಆದರೆ, ಗ್ಯಾಸ್ ಪೂರೈಕೆ ಇಲ್ಲದೇ ಇರುವುದರಿಂದ ಕಲ್ಯಾಣ ಮಂಟಪದ ಅಡುಗೆ ತಯಾರಕರು ಅಡುಗೆಗೆ ಅಗತ್ಯ ಗ್ಯಾಸ್ ಸಿಲಿಂಡರ್‌ಗಳನ್ನು ಮದುವೆಗೆ ಸಂಬಂಧಿಸಿದವರೇ ವ್ಯವಸ್ಥೆ ಮಾಡಿಕೊಡಲು ಸೂಚಿಸುತ್ತಿದ್ದಾರೆ. ಹೀಗಾಗಿ ಮದುವೆ ಮಂಟಪಕ್ಕೂ ಗ್ಯಾಸ್ ಬಿಸಿ ತಟ್ಟುವಂತಾಗಿದೆ. ಜಿಲ್ಲೆಯ ಗ್ರಾಮಾಂತರ ಭಾಗದ ವಸತಿ ಶಾಲೆಗಳಲ್ಲಿ ಮತ್ತು ಮಠಗಳಲ್ಲಿ ಅಡುಗೆಗೆ ಕಟ್ಟಿಗೆ ಒಲೆಗಳ ಮೊರೆ ಹೋಗುವ ಅನಿವಾರ್ಯತೆ ಎದುರಾಗಿದೆ.ಕಾಳಸಂತೆಯಲ್ಲಿ ದುಪ್ಪಟ್ಟು ದರಕ್ಕೆ ಮಾರಾಟ: ಗ್ಯಾಸ್ ಅಭಾವದ ಲಾಭ ಪಡೆದು ವಾಣಿಜ್ಯ ಸಿಲಿಂಡರ್‌ಗಳನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವುದು ಕಂಡು ಬರುತ್ತಿದೆ. ಹೋಟೆಲ್ ಮಾಲೀಕರು, ಗೂಡಂಗಡಿಯವರು ಸಿಲಿಂಡರ್ ಸಿಗದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ದುಪ್ಪಟ್ಟು ಹಣ ಕೊಟ್ಟು ಸಿಲಿಂಡರ್ ಖರೀದಿಸುವಂತಾಗಿದೆ. ಇದನ್ನೇ ಕೆಲವರು ದಂಧೆಯಾಗಿ ಮಾಡುತ್ತಿದ್ದರಿಂದ ಕಾಳಸಂತೆಯಲ್ಲಿ ಸಿಲಿಂಡರ್ ಮಾರಾಟ ಜಾಲ ಹೆಚ್ಚುತ್ತಿದೆ. ಇದಕ್ಕೆ ನಿಯಂತ್ರಣ ಹಾಕಲು ಜಿಲ್ಲಾಡಳಿತ ಕಠಿಣ ಕ್ರಮ ವಹಿಸುವ ಅಗತ್ಯವಿದೆ. ಜಿಲ್ಲೆಯಲ್ಲಿ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್‌ಗಳಲ್ಲಿ ಮುಂದಿನ 8-10 ದಿನಗಳ ವರೆಗೆ ಯಾವುದೇ ಕೊರತೆ ಆಗುವುದಿಲ್ಲ ಎಂದು ಗ್ಯಾಸ್ ಡೀಲರ್‌ಗಳು ಭರವಸೆ ನೀಡಿದ್ದಾರೆ. ನಿನ್ನೆಯವರೆಗೂ ₹1,860 ಇದ್ದ ದರ ಇಂದು ₹2000ಕ್ಕೆ ಏರಿಕೆಯಾಗಿದೆ. ಅನಿವಾರ್ಯವಾಗಿ ಹೇಳಿದ ದರ ನೀಡಿ ಖರೀದಿ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಪೆಟ್ರೋಲ್, ಡೀಸೆಲ್‌ ದರ ಹೆಚ್ಚಳವಾದರೆ, ಅಗತ್ಯ ವಸ್ತುಗಳು ದುಬಾರಿಯಾಗುತ್ತವೆ. ಆಗ ಹೋಟೆಲ್ ಗ್ರಾಹಕರಿಗೂ ದರ ಬಿಸಿ ತಟ್ಟುತ್ತದೆ ಎಂದು ಹಾವೇರಿ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪ್ರಕಾಶ ಶೆಟ್ಟಿ ಹೇಳಿದರು.