2 ಬಾರಿ ತೀರ್ಥಹಳ್ಳಿ ಶಾಸಕರಾಗಿದ್ದ ಡಿ.ಬಿ.ಚಂದ್ರೇಗೌಡ

| Published : Nov 08 2023, 01:01 AM IST / Updated: Nov 08 2023, 01:02 AM IST

2 ಬಾರಿ ತೀರ್ಥಹಳ್ಳಿ ಶಾಸಕರಾಗಿದ್ದ ಡಿ.ಬಿ.ಚಂದ್ರೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

4 ಬಾರಿ ತೀರ್ಥಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸಿ 2 ಬಾರಿ ಶಾಸಕರಾಗಿ ಆಯ್ಕೆ

ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ ಮಂಗಳವಾರ ಮುಂಜಾನೆ ಚಿಕ್ಕಮಗಳೂರು ಜಿಲ್ಲೆಯ ದಾರದಳ್ಳಿಯ ತಮ್ಮ ಸ್ವಗೃಹದಲ್ಲಿ ನಿಧನರಾದ ಹಿರಿಯ ರಾಜಕಾರಣಿ ಡಿ. ಬಿ. ಚಂದ್ರೇಗೌಡರಿಗೂ ತೀರ್ಥಹಳ್ಳಿಗೂ ಅವಿನಾಭಾವ ಸಂಬಂಧವಿದೆ. 2 ಬಾರಿ ತೀರ್ಥಹಳ್ಳಿ ಶಾಸಕರಾಗಿದ್ದರು. ಅವರ ನಿಧನಕ್ಕೆ ಇಡೀ ತಾಲೂಕಿನಾದ್ಯಂತ ಸಹವರ್ತಿಗಳು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

1971ರ ಲೋಕಸಭಾ ಚುನಾವಣೆಯಲ್ಲಿ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ಚಿಕ್ಕಮಗಳೂರು ಕ್ಷೇತ್ರ ವ್ಯಾಪ್ತಿಗೆ ಸೇರಿದ್ದು, ಆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸಂಸದರಾಗಿ ಸ್ಪರ್ಧಿಸಿದ್ದ ಚಂದ್ರೇಗೌಡ ಅವರಿಗೆ ತೀರ್ಥಹಳ್ಳಿ ಕ್ಷೇತ್ರದಲ್ಲಿ ವ್ಯಾಪಕವಾಗಿ ಉತ್ತಮ ಬೆಂಬಲ ವ್ಯಕ್ತವಾಗಿತ್ತು. ಇದರಿಂದಾಗಿ ಈ ಕ್ಷೇತ್ರದ ಜೊತೆಗಿನ ಸಂಪರ್ಕ ಗಟ್ಟಿಯಾಗಿ ಮುಂದಿನ ಅವರ ರಾಜ್ಯ ರಾಜಕಾರಣಕ್ಕೂ ನಾಂದಿಯಾಗಿತ್ತು. ಆನಂತರದ ವರ್ಷಗಳಲ್ಲಿ 4 ಬಾರಿ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಗೌಡರು ಎರಡು ಬಾರಿ ಶಾಸಕರಾಗಿಯೂ ಚುನಾಯಿತರಾಗಿದ್ದರು.

ಬದಲಾದ ರಾಜಕೀಯ ಬೆಳವಣಿಗೆಯಿಂದಾಗಿ 80ರ ದಶಕದ ಆರಂಭದಲ್ಲಿ ಚಂದ್ರೇಗೌಡ ಕಾಂಗ್ರೆಸ್ ಬಾಂಧವ್ಯವನ್ನು ಕಳಚಿ ಅದರಿಂದ ಹೊರಬಂದು ಕ್ರಾಂತಿರಂಗದಲ್ಲಿ ಗುರುತಿಸಿಕೊಂಡರು. ವಿಧಾನಪರಿಷತ್ತಿಗೆ ಆಯ್ಕೆಯಾಗಿ ಮೇಲ್ಮನೆಯ ವಿರೋಧ ಪಕ್ಷದ ನಾಯಕರಾಗಿದ್ದರು. 1983ರಲ್ಲಿ ತೀರ್ಥಹಳ್ಳಿ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಿ, ಚುನಾಯಿತರಾಗಿ ರಾಮಕೃಷ್ಣ ಹೆಗ್ಡೆ ಅಧಿಕಾರವಧಿಯಲ್ಲಿ ವಿಧಾನಸಭಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.

ಚಂದ್ರೇಗೌಡರ ಎರಡು ಅವಧಿಯ ಅಧಿಕಾರದಲ್ಲಿ ಮುಡುಬಾ ಮತ್ತು ತೀರ್ಥಮತ್ತೂರು ಸೇತುವೆ ನಿರ್ಮಾಣಗೊಂಡಿವೆ. ಸಹ್ಯಾದ್ರಿ ಪಾಲಿಟೆಕ್ನಿಕ್ ಮತ್ತು ಟಿಸಿಎಚ್ ತರಬೇತಿ ಕೇಂದ್ರ (ಟಿಸಿಎಚ್ ಈಗ ಇಲ್ಲ) ಕೂಡ ಅವರ ಅವಧಿಯಲ್ಲಿ ಪ್ರಾರಂಭಗೊಂಡಿದ್ದವು. ರಾಜ್ಯ ರಾಜಕಾರಣದಲ್ಲಿ ಪ್ರಭಾವಿಗಳಾಗಿದ್ದ ಚಂದ್ರೇಗೌಡರು ಆ ನಂತರದ ದಿನಗಳಲ್ಲಿ ಕ್ಷೇತ್ರದ ಸಂಪರ್ಕ ಕಡಿಮೆ ಮಾಡಿದ್ದರು. 1994ರಲ್ಲಿ ಹಾಲಿ ಶಾಸಕ ಆರಗ ಜ್ಞಾನೇಂದ್ರರ ಎದುರು ಪರಾಭವಗೊಂಡ ನಂತರದಲ್ಲಿ ಈ ಕ್ಷೇತ್ರದ ನಂಟನ್ನು ಕಳೆದುಕೊಂಡಿದ್ದರು. ಆದರೆ ಅವರ ಶಿಷ್ಯಂದಿರು, ಬೆಂಬಲಿಗರು ಮುಂದೆ ಈ ಕ್ಷೇತ್ರದಲ್ಲಿ ಪ್ರಭಾವಿಗಳಾಗಿ ಬೆಳೆದರು.

- - -

-ಫೋಟೋ: ಡಿ.ಬಿ. ಚಂದ್ರೇಗೌಡ