ಅರಸು ಜನಾಂಗದ ಅಭಿವೃದ್ಧಿಗೆ ಯುವಕರು ಮುಂದಾಗಬೇಕು

| Published : Aug 26 2024, 01:32 AM IST

ಸಾರಾಂಶ

ಹೊನ್ನಾಯಕನಹಳ್ಳಿಯ ಪೀಠಾಧಿಪತಿ ಶ್ರೀ ವರ್ಚಸ್ವಿ ಶ್ರೀಕಂಠಸಿದ್ದಲಿಂಗರಾಜೇ ಅರಸ್‌ ಸಲಹೆ

ಕನ್ನಡಪ್ರಭ ವಾರ್ತೆ ಮೈಸೂರು

ಮೈಕ್ರೋ ಕೂಡ ಅಲ್ಲದ ನ್ಯಾನೋ ಕಮ್ಯೂನಿಟಿ ಆಗಿರುವ ಅರಸು ಜನಾಂಗದ ಅಭಿವೃದ್ಧಿಗೆ ಯುವಕರು ಮುಂದಾಗಬೇಕು ಎಂದು ಕಪ್ಪಡಿ, ಮಳವಳ್ಳಿ ಹಾಗೂ ಹೊನ್ನಾಯಕನಹಳ್ಳಿಯ ಪೀಠಾಧಿಪತಿ ಶ್ರೀ ವರ್ಚಸ್ವಿ ಶ್ರೀಕಂಠಸಿದ್ದಲಿಂಗರಾಜೇ ಅರಸ್‌ ಕರೆ ನೀಡಿದರು.

ಕರ್ನಾಟಕ ಅರಸು ಮಹಾಮಂಡಲಿ ಚಾರಿಟಬಲ್‌ ಟ್ರಸ್ಟ್ ವತಿಯಿಂದ ತ್ಯಾಗರಾಜ ರಸ್ತೆಯ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನದ ಶ್ರೀ ಚಾಮರಾಜೇಂದ್ರ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಜನ್ಮೋತ್ಸವ, ಯಶೋಗಾಥೆ- ಅರಸು ಜನಾಂಗದ ಸಾಧಕರು ಕೃತಿ ಬಿಡುಗಡೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಅರಸು ಜನಾಂಗದವರು ಬೆಂಗಳೂರು, ಮೈಸೂರು ಎಲ್ಲಾ ಸೇರಿ 50 ರಿಂದ 60 ಸಾವಿರ ಮಂದಿ ಇರಬಹುದು ಅಷ್ಟೇ. ಹೀಗಾಗಿ ನಾವು ಸೂಕ್ಷ್ಮಾತಿಸೂಕ್ಷ್ಮ ವರ್ಗಕ್ಕೂ ಬರುವುದಿಲ್ಲ. ನ್ಯಾನೋ ಕಮ್ಯೂನಿಟಿಯಂತೆ ಇದ್ದೇವೆ. ಇಂತಹ ಜನಾಂಗದ ಬೆಳವಣಿಗೆಗೆ ಡಿ. ದೇವರಾಜ ಅರಸು ಕಾರಣ ಎಂದು ಅವರು ಹೇಳಿದರು.

ಆದರೆ ಇತ್ತೀಚೆಗೆ ಯುವಕರು ಜನಾಂಗದ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿಲ್ಲ.ಇನ್ನು ಮುಂದಾದರೂ ಹಿರಿಯರ ಮಾರ್ಗದರ್ಶನದಲ್ಲಿ ಈ ಕೆಲಸ ಮಾಡಬೇಕು ಎಂದು ಅವರು ಸಲಹೆ ಮಾಡಿದರು.

ಕೇವಲ ಆಸ್ತಿ, ಹಣದಿಂದಲೇ ಎಲ್ಲವೂ ಆಗುವುದಿಲ್ಲ. ಜನಾಂಗದಲ್ಲಿ ಒಗ್ಗಟ್ಟು, ಉತ್ತಮ ಸಂಪರ್ಕ ಮುಖ್ಯ. ಅಮೆರಿಕಾ, ಯುರೋಪ್‌ ಮತ್ತಿತರ ದೇಶಗಳಲ್ಲೂ ಅರಸು ಜನಾಂಗದವರು ಇದ್ದಾರೆ. ಅವರನ್ನು ಸೇರಿದಂತೆ ಎಲ್ಲರನ್ನು ಸಾಮಾಜಿಕ ಜಾಲತಾಣಗಳ ಮೂಲಕ ಸಂಪರ್ಕಿಸಬೇಕು ಎಂದು ಅವರು ಹೇಳಿದರು.

ಸಾಮಾಜಿಕ, ಶೈಕ್ಷಣಿಕ ಯೋಜನೆಗಳ ಜೊತೆಗೆ ಆರೋಗ್ಯಕ್ಕೆ ಸಂಬಂಧಿಸಿದ ಯೋಜನೆಗಳನ್ನು ರೂಪಿಸಬೇಕು. ಯುವ ಘಟಕ ಸ್ಥಾಪಿಸಿ, ಹಾಸ್ಟೆಲ್‌, ವಿದ್ಯಾರ್ಥಿ ವೇತನ ಮತ್ತಿತರ ಸೌಲಭ್ಯ ಕಲ್ಪಿಸಬೇಕು ಎಂದು ಅವರು ಹೇಳಿದರು.

ತಮಿಳುನಾಡು ಬರಗೂರು ಬೆಟ್ಟದ ಶ್ರೀ ಅಶೋಕ ರಾಜೇಂದ್ರಸ್ವಾಮಿ ಮಾತನಾಡಿ, ಯುವಕರು ಸೋಮಾರಿಗಳಾಗಬಾರದು. ಹಿರಿಯರನ್ನು ನೋಡಿ ನಾವು ಎರಡು ಗಂಟೆ ಹೆಚ್ಚಾಗಿ ಕೆಲಸ ಮಾಡಬೇಕು. ಸಂಸ್ಥೆಯ ಬೆಳವಣಿಗೆಯ ಜೊತೆಗೆ ದಾನಧರ್ಮದ ಮೂಲಕ ಸೇವೆ ಮಾಡಬೇಕು. ಪ್ರಮುಖರು ಒಂದೊಂದು ವಿದ್ಯಾರ್ಥಿಯ ವ್ಯಾಸಂಗದ ಉಸ್ತುವಾರಿ ವಹಿಸಬೇಕು ಎಂದರು.

ಟ್ರಸ್ಟ್‌ ಉಪಾಧ್ಯಕ್ಷ ಡಾ. ಎಂಜಿಆರ್‌ ಅರಸು ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರಿಗೆ ಮರಣೋತ್ತರವಾಗಿ ಭಾರತರತ್ನ ನೀಡಬೇಕು ಎಂದು ಆಗ್ರಹಿಸಿದರು.

ರಾಮಕೃಷ್ಣನಗರ ವೃತ್ತದ ಬಳಿ ಅರ್ಧ ಎಕರೆ ಪ್ರದೇಶದಲ್ಲಿ ಡಿ. ದೇವರಾಜ ಅರಸು ಭವನ ಬರಲಿದೆ. ಇದಕ್ಕಾಗಿ ರಾಜ್ಯ ಸರ್ಕಾರ 1.5 ಕೋಟಿ ರು. ಮಂಜೂರು ಮಾಡಿದ್ದು, ಈಗಾಗಲೇ ನಿರ್ಮಿತಿ ಕೇಂದ್ರಕ್ಕೆ 30 ಲಕ್ಷ ರು. ಬಿಡುಗಡೆ ಮಾಡಿದೆ ಎಂದು ಅವರು ಹೇಳಿದರು.

ಟ್ರಸ್ಟಿನ ಗೌರವಾಧ್ಯಕ್ಷ ಎಂ.ಎಲ್‌. ಬಸವರಾಜೇ ಅರಸ್‌ ಮಾತನಾಡಿ, ನಾನು, ಅಮೆರಿಕೆಯಲ್ಲಿರುವ ನನ್ನ ಪುತ್ರಿ ಹಾಗೂ ಮೊಮ್ಮಗಳು ಮೂರು ಲಕ್ಷ ರು.ಗಳನ್ನು ವಿದ್ಯಾರ್ಥಿ ವೇತನಕ್ಕಾಗಿ ನೀಡಿದ್ದೇವೆ. ಇದನ್ನು ಪ್ರತಿ ವರ್ಷವೂ ನೀಡುತ್ತೇವೆ ಎಂದರು.

ಟ್ರಸ್ಟಿನ ಅಧ್ಯಕ್ಷ ಬಿ.ಎಸ್. ಶ್ರೀಧರರಾಜೇ ಅರಸ್‌ ಮಾತನಾಡಿ, ನಾವು ಮಾಡುವ ಕೆಲಸದಲ್ಲಿ ಸ್ವಾರ್ಥ ಇರಬಾರದು. ಅರಸು ಜನಾಂಗ ಜಾತ್ಯತೀತ ಮನೋಭಾವದವರು. ಇತರೆ ಯಾವುದೇ ಜನಾಂಗವನ್ನು ದ್ವೇಷಿಸದೇ ಎಲ್ಲರನ್ನೂ ಜೊತೆಗೆ ಕರೆದುಕೊಂಡು ಹೋಗುವ ಪ್ರಯತ್ನ ಮಾಡುವವರು ಎಂದರು.

ಅವಕಾಶ, ಜವಾಬ್ದಾರಿ ಸಿಕ್ಕಾಗ ಹಿಂದೆ ಸರಿಯಬಾರದು. ಹೊಣೆ ಹೊತ್ತುಕೊಂಡಲ್ಲಿ ನಾಯಕರಾಗಿ ಬೆಳೆಯಬಹುದು. ಇದೇ ರೀತಿ ನಾನು ಹೋದೆಡೆಯೆಲ್ಲಾ ಕಾರ್ಯನಿರ್ವಹಿಸುತ್ತಿದ್ದೇನೆ. ಎಲ್ಲರ ಸಹಕಾರದಿಂದ ಕಾರ್ಯಗಳು ಸುಗಮವಾಗಿ ಸಾಗುತ್ತಿವೆ ಎಂದರು.

ವೇಣುಗೋಪಾಲಸ್ವಾಮಿ ದೇವಸ್ಥಾನ ಆವರಣವನ್ನೂ ಇನ್ನೂ ಸುಸಜ್ಜಿತಗೊಳಿಸಲು ಹಂತ ಹಂತವಾಗಿ ಕ್ರಮವಹಿಸಲಾಗುವುದು ಎಂದರು.

ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್‌. ಶ್ರೀವತ್ಸ ಮಾತನಾಡಿ, ಆಸ್ತಿ, ಹಣ ಎಲ್ಲವೂ ಕಳವಾಗುತ್ತದೆ. ಆದರೆ ವಿದ್ಯೆ ಮಾತ್ರ ಕದಿಯಲಾಗದ ಆಸ್ತಿ. ಆದ್ದರಿಂದ ವಿದ್ಯಾರ್ಥಿಗಳು ಕಷ್ಟಪಟ್ಟು ಓದಿ, ವಿದ್ಯಾವಂತರಾಗಬೇಕು ಎಂದು ಕರೆ ನೀಡಿದರು.

ಯಶೋಗಾಥೆ- ಅರಸು ಜನಾಂಗದ ಸಾಧಕರ ಕೃತಿಯನ್ನು ಬಿಡುಗಡೆ ಮಾಡಿದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಮಾತನಾಡಿ, ಇಲ್ಲಿ 16 ವ್ಯಕ್ತಿಗಳು, ಒಂದು ಸಂಸ್ಥೆಯ ಸಾಧನೆಯನ್ನು ದಾಖಲಿಸಲಾಗಿದೆ. ಅರಸು ಜನಾಂಗ ಸ್ಥೂಲ ನೋಟವೂ ಇದೆ. ಇಂತಹ ಸಾಧಕರ ಸಾಧನೆಗಳನ್ನು ಮುಂದಿನ ಪೀಳಿಗೆಗೆ ದಾಟಿಸಬೇಕು. ಜೊತೆಗೆ ಇದನ್ನು ಓದುವ ಮೂಲಕ ವಿದ್ಯಾರ್ಥಿಗಳು ಸ್ಫೂರ್ತಿ ಪಡೆಯಬೇಕು ಎಂದರು.

ಕೃತಿಯ ಸಂಪಾದಕ ಕೆ.ಪಿ. ಲಕ್ಷ್ಮೀಕಾಂತರಾಜೇ ಅರಸ್‌ ಮಾತನಾಡಿ, ಮುಂದಿನ ಆರು ತಿಂಗಳಲ್ಲಿ ಜನಾಂಗದ ನೂರು ಸಾಧಕರ ಕೃತಿಯನ್ನು ಹೊರತರಲಾಗುವುದು ಎಂದರು.ಮಂಜುಳಾ ಅರಸ್‌ ಪ್ರಾರ್ಥಿಸಿದರು. ಸುಮಾ ಅರಸ್‌ ಮೈಸೂರು ಸಂಸ್ಥಾನದ ಗೀತೆ ಹಾಡಿದರು.

ಟ್ರಸ್ಟ್‌ ಕಾರ್ಯದರ್ಶಿ ವೈ.ಎಂ. ಕಿರಣ್‌ ನಿರೂಪಿಸಿದರು. ಉಪಾಧ್ಯಕ್ಷ ಎಚ್‌ಎಂಟಿ ಲಿಂಗರಾಜೇ ಅರಸ್‌ ಸ್ವಾಗತಿಸಿದರು. ಮತ್ತೊರ್ವ ಉಪಾಧ್ಯಕ್ಷೆ ಇಂದುಕಲಾ ಅರಸ್‌ ವಂದಿಸಿದರು.

ಇದೇ ಸಂದರ್ಭದಲ್ಲಿ ಎಸ್ಎಸ್ಎಲ್‌ಸಿ, ಪಿಯುಸಿ, ಪದವಿ, ಎಂಜಿನಿಯರಿಂಗ್‌, ವೈದ್ಯಕೀಯ. ದಂತ ವೈದ್ಯಕೀ.ಯ, ಸಿಎ ಮತ್ತಿತರ ಕೋರ್ಸುಗಳಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿರುವ 56 ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ, ನಗದು ನೀಡಿ ಪುರಸ್ಕರಿಸಲಾಯಿತು. ದೇವಸ್ಥಾನದ ಪುನರುಜ್ಜೀನ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಕೃಷ್ಣಪ್ಪ ಅವರನ್ನು ಸನ್ಮಾನಿಸಲಾಯಿತು.

ಅನ್ವೇಷಣಾ ಟ್ರಸ್ಟಿನ ಅಧ್ಯಕ್ಷ ಅಮರನಾಥರಾಜೇ ಅರಸ್‌, ಕೆಯುಎಂಸಿ ಟ್ರಸ್ಟಿನ ಪದಾಧಿಕಾರಿಗಳಾದ ಎಂ.ಎ. ಶ್ರೀಕಾಂತರಾಜೇ ಅರಸ್‌, ಎಚ್‌.ವಿ. ಪುಟ್ಟವೀರರಾಜೇ ಅರಸ್‌, ಕಗ್ಗಳ ಬಸವರಾಜೇ ಅರಸ್‌, ಕೆ. ಮನೋಜ್‌ ಅರಸ್‌, ಲಕ್ಷ್ಮೀಕಾಂತರಾಜೇ ಅರಸ್‌, ಪ್ರತಾಪ್‌ ರಾಜೇ ಅರಸ್‌, ನಂಜುಂಡರಾಜೇ ಅರಸ್‌, ಭರತ್‌ ಅರಸ್‌, ಎ.ಆರ್‌. ಮಲ್ಲರಾಜೇ ಅರಸ್‌, ಮೋಹನ್‌ ರಾಜೇ ಅರಸ್‌, ರಾಜೇ ಅರಸ್‌, ಸಿ.ವಿ. ಶ್ರೀಧರ್, ಕೃಷ್ಣೇ ಅರಸ್‌, ಡಾ.ಎಂ.ಆರ್‌. ಭಾರತಿ ಅರಸ್, ಮಾತೃಮಂಡಳಿ ವಿದ್ಯಾಸಂಸ್ತೆ ಅಧ್ಯಕ್ಷೆ ವಿಜಯಾ ಅರಸ್‌ ಮೊದಲಾದವರು ಇದ್ದರು.