ಸಾರಾಂಶ
ತಿಪಟೂರು: ಇತ್ತೀಚೆಗೆ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತಿಪಟೂರಿನ ಡಿ. ಗುಣಸಾಗರ್ ವಿಜ್ಞಾನ ವಿಭಾಗದಲ್ಲಿ 600 ಅಂಕಗಳಿಗೆ 597 ಅಂಕ ಪಡೆದು ರಾಜ್ಯಕ್ಕೆ ಎರಡನೇ ರ‍್ಯಾಂಕ್ ಗಳಿಸಿ ತಾಲೂಕಿಗೆ ಕೀರ್ತಿ ತಂದಿದ್ದಾನೆ ಎಂದು ಅಕ್ಕಮಹಾದೇವಿ ಸಮಾಜದ ಅಧ್ಯಕ್ಷೆ ನಾಗರತ್ನ ಹೇಳಿದರು. ನಗರದ ಪಿಜಿಎಂ ಕಲ್ಯಾಣ ಮಂಟಪದಲ್ಲಿ ಅಕ್ಕಮಹಾದೇವಿ ಸಮಾಜದಿಂದ ಆಯೋಜಿಸಿದ್ದ ಅಕ್ಕಮಹಾದೇವಿ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜ್ಯಕ್ಕೆ ಎರಡನೇ ರ‍್ಯಾಂಕ್ ಗಳಿಸಿದ ಡಿ. ಗುಣಸಾಗರ್ ಸಾಧನೆ ಇತರರಿಗೆ ಮಾದರಿಯಾಗಿದೆ. ಗಣಿತ, ಭೌತಶಾಸ್ತ್ರ, ರಾಸಾಯನ ಶಾಸ್ತ್ರ, ಕಂಪ್ಯೂಟರ್ ಸೈನ್ಸ್ ಹಾಗೂ ಸಂಸ್ಕ್ರೃತದಲ್ಲಿ ನೂರಕ್ಕೆ ನೂರು ಅಂಕಗಳನ್ನು ಗಳಿಸಿರುವುದು ಅಸಾಮಾನ್ಯವಾಗಿದೆ. ಇಂಗ್ಲೀಷ್‌ನಲ್ಲಿ ಮಾತ್ರ 97 ಅಂಕಗಳನ್ನು ಗಳಿಸಿದ್ದು ಕೇವಲ ಒಂದು ಅಂಕದಿಂದ ಮೊದಲನೇ ರ‍್ಯಾಂಕ್ ಕೈತಪ್ಪಿದೆ. ಇವರ ಮುಂದಿನ ವಿದ್ಯಾಭ್ಯಾಸ ಉಜ್ಜಲವಾಗಿರಲಿ ಎಂದರು. ಅಕ್ಕಮಹಾದೇವಿ ಸಮಾಜದ ಎಲ್ಲ ಮಹಿಳೆಯರು ಸೇರಿ ಅದ್ದೂರಿಯಾಗಿ ಅಕ್ಕಮಹಾದೇವಿ ಜಯಂತಿ ಆಚರಿಸಿ ರುದ್ರಾಭಿಷೇಕ ಹಾಗೂ ವಿಶೇಷ ಪೂಜೆ ಏರ್ಪಡಿಸಿದ್ದರು. ಅಕ್ಕಮಹಾದೇವಿ ಸಮಾಜದ ಉಪಾಧ್ಯಕ್ಷ ಶೋಭ ಮಂಜುನಾಥ್, ಸುಮಂಗಲ, ಜಯಶೀಲಾ, ಖಜಾಂಚಿ ಮುಕ್ತಾ ತಿಪ್ಪೇಶ್, ಕಾರ್ಯದರ್ಶಿಗಳಾದ ಜಿ.ಕೆ.ವೇದ, ಸುಮ ಪ್ರಭು, ಸದಸ್ಯರು ಭಾಗವಹಿಸಿದ್ದರು.