ಶಕ್ತಿ ಪ್ರದರ್ಶನದೊಂದಿಗೆ ನಾಮಪತ್ರ ಸಲ್ಲಿಸಿದ ಪದ್ಮರಾಜ್

| Published : Apr 04 2024, 01:05 AM IST

ಶಕ್ತಿ ಪ್ರದರ್ಶನದೊಂದಿಗೆ ನಾಮಪತ್ರ ಸಲ್ಲಿಸಿದ ಪದ್ಮರಾಜ್
Share this Article
  • FB
  • TW
  • Linkdin
  • Email

ಸಾರಾಂಶ

ಕೇರಳ ಚಂಡೆ, ಗೊಂಬೆ ಕುಣಿತ, ಕೊಂಬು ಕಹಳೆಯ ಮೆರುಗಿನೊಂದಿಗೆ ಸಾವಿರಾರು ಕಾಂಗ್ರೆಸ್‌ ಕಾರ್ಯಕರ್ತರು ಪಕ್ಷದ ಟೋಪಿ, ಶಾಲು ಹಾಕಿ, ಪಕ್ಷದ ಧ್ವಜ ಹಿಡಿದುಕೊಂಡು ಘೋಷಣೆಗಳನ್ನು ಕೂಗುತ್ತಾ ಪಾದಯಾತ್ರೆಯಲ್ಲಿ ಪಾಲ್ಗೊಂಡರು.

ಕನ್ನಡಪ್ರಭ ವಾರ್ತೆ ಮಂಗಳೂರು

ಕುದ್ರೋಳಿ ಶ್ರೀ ಗೋಕರ್ಣನಾಥ ದೇವಾಲಯದಿಂದ ಸಾವಿರಾರು ಕಾರ್ಯಕರ್ತರ ಮೆರವಣಿಗೆಯೊಂದಿಗೆ ಬೃಹತ್‌ ಶಕ್ತಿ ಪ್ರದರ್ಶನ ಮಾಡುವ ಮೂಲಕ ದ.ಕ. ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಆರ್‌. ಪದ್ಮರಾಜ್‌ ಬುಧವಾರ ನಾಮಪತ್ರ ಸಲ್ಲಿಸಿದರು.

ಕುದ್ರೋಳಿ ಕ್ಷೇತ್ರದಲ್ಲಿ ಶ್ರೀ ನಾರಾಯಣ ಗುರುಗಳ ಪ್ರತಿಮೆಗೆ ಹಾಗೂ ಗೋಕರ್ಣನಾಥ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಪದ್ಮರಾಜ್‌, ಬಳಿಕ ವಿಶೇಷ ಅಲಂಕೃತ ತೆರೆದ ವಾಹನದಲ್ಲಿ ಪಕ್ಷದ ಹಿರಿಯ ಮುಖಂಡರು, ಕಾರ್ಯಕರ್ತರೊಂದಿಗೆ ಮೆರವಣಿಗೆ ಹೊರಟರು. ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ಮೆರವಣಿಗೆಗೆ ಚಾಲನೆ ನೀಡಿ ಶುಭ ಹಾರೈಸಿದರು.

ಚಂಡೆ ಕಹಳೆ ಮೆರುಗು:

ಕೇರಳ ಚಂಡೆ, ಗೊಂಬೆ ಕುಣಿತ, ಕೊಂಬು ಕಹಳೆಯ ಮೆರುಗಿನೊಂದಿಗೆ ಸಾವಿರಾರು ಕಾಂಗ್ರೆಸ್‌ ಕಾರ್ಯಕರ್ತರು ಪಕ್ಷದ ಟೋಪಿ, ಶಾಲು ಹಾಕಿ, ಪಕ್ಷದ ಧ್ವಜ ಹಿಡಿದುಕೊಂಡು ಘೋಷಣೆಗಳನ್ನು ಕೂಗುತ್ತಾ ಪಾದಯಾತ್ರೆಯಲ್ಲಿ ಪಾಲ್ಗೊಂಡರು. ವಿಶೇಷ ಅಲಂಕೃತ ವಾಹನದಲ್ಲಿ ಅಭ್ಯರ್ಥಿ ಪದ್ಮರಾಜ್‌ ಜತೆ ರಾಜ್ಯ, ಜಿಲ್ಲೆಯ ಹಿರಿಯ ಮುಖಂಡರು ಇದ್ದರು.

ಕುದ್ರೋಳಿಯಿಂದ ಹೊರಟ ಮೆರವಣಿಗೆಯು ಅಳಕೆ- ನ್ಯೂಚಿತ್ರಾ ಟಾಕೀಸ್‌- ಟೆಂಪಲ್‌ ಸ್ಕ್ವಾರ್‌- ಗಣಪತಿ ಸ್ಕೂಲ್‌ ರಸ್ತೆ- ವಿವಿ ಕಾಲೇಜು- ಕ್ಲಾಕ್‌ ಟವರ್‌ ಮೂಲಕ ಎ.ಬಿ. ಶೆಟ್ಟಿ ವೃತ್ತದಲ್ಲಿ ಸಮಾವೇಶಗೊಂಡಿತು. ಹಿರಿಯ ಮುಖಂಡರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. 33 ವರ್ಷಗಳ ಹಿಂದಿನ ಕಾಂಗ್ರೆಸ್‌ ವೈಭವವನ್ನು ಮರಳಿ ಜಿಲ್ಲೆಯಲ್ಲಿ ಜಾರಿಗೆ ತರಲು ಕಾರ್ಯಕರ್ತರು ಶ್ರಮ ವಹಿಸುವಂತೆ ನಾಯಕರು ಕರೆ ನೀಡಿದರು. ಮೆರವಣಿಗೆಯುದ್ದಕ್ಕೂ ಬಿಗಿ ಪೊಲೀಸ್‌ ಭದ್ರತೆ ಒದಗಿಸಲಾಗಿತ್ತು.

ಮೆರವಣಿಗೆಯಲ್ಲಿ ಕಾಂಗ್ರೆಸ್‌ ಧ್ವಜದೊಂದಿಗೆ ತುಳುನಾಡ ಧ್ವಜವೂ ರಾರಾಜಿಸುತ್ತಿತ್ತು. ಮಧ್ಯಾಹ್ನದ ಉರಿ ಬಿಸಿಲನ್ನೂ ಲೆಕ್ಕಿಸದೆ ಸಾವಿರಾರು ಕಾರ್ಯಕರ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡರು.

ನೀತಿಸಂಹಿತೆ ಮಾರ್ಗಸೂಚಿಯಂತೆ ಬೆರಳೆಣಿಕೆಯ ಹಿರಿಯ ನಾಯಕರೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಆರ್‌. ಪದ್ಮರಾಜ್‌, ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಎಂ.ಪಿ. ಅವರಿಗೆ ನಾಮಪತ್ರ ಸಲ್ಲಿಸಿದರು.

ಟೆಂಪಲ್‌ ರನ್‌: ನಾಮಪತ್ರ ಸಲ್ಲಿಕೆಗೆ ಮೊದಲು ಬೆಳಗ್ಗೆ ಅಭ್ಯರ್ಥಿ ಪದ್ಮರಾಜ್‌ ಅವರು ಶರವು ಶ್ರೀ ಮಹಾಗಣಪತಿ ದೇವಸ್ಥಾನ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಕಂಕನಾಡಿ ಶ್ರೀ ಬ್ರಹ್ಮಬೈದರ್ಕಳ ಗರೋಡಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಮೆರವಣಿಗೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್‌ ಭಂಡಾರಿ, ಜಿಲ್ಲಾ ಚುನಾವಣಾ ಉಸ್ತುವಾರಿ ಬಿ. ರಮಾನಾಥ ರೈ, ವಿಧಾನ ಪರಿಷತ್‌ ಸದಸ್ಯರಾದ ಬಿ.ಕೆ. ಹರಿಪ್ರಸಾದ್‌, ಹರೀಶ್‌ ಕುಮಾರ್‌, ಶಾಸಕ ಅಶೋಕ್‌ ಕುಮಾರ್‌ ರೈ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಕೆಪಿಸಿಸಿ ಉಪಾಧ್ಯಕ್ಷ ಐವನ್‌ ಡಿಸೋಜ, ಮಾಜಿ ಸಚಿವ ಅಭಯಚಂದ್ರ ಜೈನ್‌, ಮಾಜಿ ಶಾಸಕರಾದ ವಿಜಯಕುಮಾರ್‌ ಶೆಟ್ಟಿ, ಶಕುಂತಳಾ ಶೆಟ್ಟಿ, ಜೆ.ಆರ್‌. ಲೋಬೊ, ಮುಖಂಡರಾದ ಡಾ. ರಘು, ಮಿಥುನ್‌ ರೈ, ಇನಾಯತ್‌ ಆಲಿ, ರಕ್ಷಿತ್‌ ಶಿವರಾಮ್‌ ಮತ್ತಿತರರು ಇದ್ದರು.