ದ.ಕ. ತೆಂಗು ರೈತ ಉತ್ಪಾದಕರ ಕಂಪೆನಿ ಷೇರು ಬಿಡುಗಡೆ

| Published : Mar 19 2024, 12:57 AM IST

ಸಾರಾಂಶ

15 ಸಾವಿರಕ್ಕೂ ಅಧಿಕ ಸದಸ್ಯರನ್ನು ಹೊಂದಿರುವ ತೆಂಗು ಬೆಳೆಗಾರರ ಕಂಪೆನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ತೆಂಗು ಬೆಳೆಗಾರರೇ ಸ್ಥಾಪನೆ ಮಾಡಿ ಮುನ್ನಡೆಸುತ್ತಿರುವ ದೇಶದ ಅತಿ ದೊಡ್ಡ ಸಂಸ್ಥೆ ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಕಂಪೆನಿ ಇದೀಗ 300 ಕೋಟಿ ರು. ಮೌಲ್ಯದ ವಿಸ್ತೃತ ಯೋಜನೆ ಕೈಗೆತ್ತಿಕೊಂಡಿದೆ. ಮೊದಲ ಹಂತದಲ್ಲಿ 50 ಕೋಟಿ ರು. ಮೌಲ್ಯದ ಷೇರು ಸಂಗ್ರಹಿಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ತೆಂಗು ಬೆಳೆಗಾರರೇ ಸ್ಥಾಪನೆ ಮಾಡಿ ಮುನ್ನಡೆಸುತ್ತಿರುವ ದೇಶದ ಅತಿ ದೊಡ್ಡ ಸಂಸ್ಥೆ ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಕಂಪೆನಿಯು ತನ್ನ ಕಾರ್ಯವ್ಯಾಪ್ತಿ ಹಾಗೂ ಮಾರುಕಟ್ಟೆ ವಿಸ್ತರಣೆಗಾಗಿ ಸಾರ್ವಜನಿಕರಿಂದ ಷೇರು ಸಂಗ್ರಹಕ್ಕೆ ಮುಂದಾಗಿದೆ ಎಂದು ಕಂಪೆನಿಯ ಅಧ್ಯಕ್ಷ ಚೇತನ್‌ ಎ. ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, 15 ಸಾವಿರಕ್ಕೂ ಅಧಿಕ ಸದಸ್ಯರನ್ನು ಹೊಂದಿರುವ ತೆಂಗು ಬೆಳೆಗಾರರ ಕಂಪೆನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಸಂಸ್ಥೆ ಇದೀಗ 300 ಕೋಟಿ ರು. ಮೌಲ್ಯದ ವಿಸ್ತೃತ ಯೋಜನೆ ಕೈಗೆತ್ತಿಕೊಂಡಿದೆ. ಮೊದಲ ಹಂತದಲ್ಲಿ 50 ಕೋಟಿ ರು. ಮೌಲ್ಯದ ಷೇರು ಸಂಗ್ರಹಿಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ತಿಳಿಸಿದರು.ಸಾವಿರ ರು. ಷೇರು ಮೌಲ್ಯ: ಸಂಸ್ಥೆಯ ಆಡಳಿತ ನಿರ್ದೇಶಕ ಕುಸುಮಾಧರ ಎಸ್‌.ಕೆ. ಮಾತನಾಡಿ, ಪ್ರತಿ ಷೇರಿನ ಮೌಲ್ಯ 1000 ರುಪಾಯಿ. ಕನಿಷ್ಠ ಐದು ಷೇರು ಹಾಗೂ ಗರಿಷ್ಠ 200 ಷೇರು ಖರೀದಿ ಮಾಡಿ ಹೂಡಿಕೆ ಮಾಡಬಹುದಾಗಿದೆ. 5 ಸಾವಿರ ರು.ನಿಂದ ಎರಡು ಲಕ್ಷ ರು.ವರೆಗಿನ ಮೊತ್ತವನ್ನು ಷೇರು ಮೂಲಕ ಹೂಡಿಕೆ ಮಾಡಬಹುದು ಎಂದು ಹೇಳಿದರು.ಠೇವಣಿ ಸಂಗ್ರಹಕ್ಕೆ ಬೆಂಬಲ: ಜೂನ್‌ ತಿಂಗಳಲ್ಲಿ ಸಂಸ್ಥೆಯು ಠೇವಣಿ ಸಂಗ್ರಹ ಮಾಡುವ ಕಲ್ಪ ಸಮೃದ್ಧಿ ಯೋಜನೆ ಆರಂಭಿಸಿದ್ದು, ಸಾರ್ವಜನಿಕರಿಂದ ಉತ್ತಮ ಬೆಂಬಲ ವ್ಯಕ್ತವಾಗಿದೆ. ಈ ಮೂಲಕ ಆರು ತಿಂಗಳಿನಲ್ಲಿ ಸಂಸ್ಥೆಯ ಒಟ್ಟು ವ್ಯವಹಾರ ಹತ್ತು ಪಟ್ಟು ಹೆಚ್ಚಾಗಿದೆ. ಇದೀಗ ಬೇಡಿಕೆಗೆ ತಕ್ಕಂತೆ ಹೆಚ್ಚಿನ ತೆಂಗಿನ ಉತ್ಪನ್ನಗಳನ್ನು ಮಾರುಕಟ್ಟೆಗೆ ಪೂರೈಕೆ ಮಾಡುವ ಉದ್ದೇಶದಿಂದ ಹೊಸ ವಿಸ್ತೃತ ಘಟಕ ಆರಂಭಿಸಲು ಬಂಡವಾಳವಾಗಿ ಷೇರನ್ನು ಬಿಡುಗಡೆಗೊಳಿಸಲಾಗಿದೆ ಎಂದರು.ಉದ್ಯೋಗ ಸೃಷ್ಟಿ: ಪ್ರಥಮ ಹಂತದ ಯೋಜನೆ ಪೂರ್ಣಗೊಂಡ ಬಳಿಕ 300 ಮಂದಿಗೆ ನೇರ ಹಾಗೂ 600ಕ್ಕೂಅಧಿಕ ಮಂದಿಗೆ ಪರೋಕ್ಷವಾಗಿ ಉದ್ಯೋಗ ದೊರೆಯಲಿದೆ. ಸಂಸ್ಥೆಯ ವಿವಿಧ ತಯಾರಿಕಾ ಘಟಕಗಳು ಜಿಲ್ಲೆಯ ನಾನಾ ಭಾಗದಲ್ಲಿದ್ದು, ಎಲ್ಲ ಘಟಕಗಳನ್ನು ಒಂದೇ ಸೂರಿನಡಿ ತರುವ ಗುರಿ ಇಟ್ಟುಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿ 20 ಎಕರೆ ಭೂಮಿ ಖರೀದಿಸಿ, ಆರಂಭಿಕ ನೆಲೆಯಲ್ಲಿ 50 ಕೋಟಿ ರು. ಮೊತ್ತವನ್ನು ಬಂಡವಾಳವಾಗಿ ಹೂಡಲಾಗುವುದು. 20 ಎಕರೆ ಪ್ರದೇಶದಲ್ಲಿ ಆಹಾರ ಉತ್ಪನ್ನ, ರಸಗೊಬ್ಬರ, ಕರಕುಶಲ ಉತ್ಪನ್ನ ಸೇರಿದಂತೆ ತೆಂಗಿನ ಮರದ ಎಲ್ಲ ಭಾಗದಿಂದ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕಾ ಘಟಕ ಒಂದೇ ಸೂರಿನಡಿ ನಿರ್ಮಾಣವಾಗಲಿದೆ. ಈ ಯೋಜನೆಯು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡರೆ ದೇಶದ ಮೊದಲ ತೆಂಗು ರೈತರ ಶೂನ್ಯ ತ್ಯಾಜ್ಯ ಘಟಕ ಎಂಬ ಖ್ಯಾತಿಗೆ ಪಾತ್ರವಾಗಲಿದೆ ಎಂದು ಕುಸುಮಾಧರ್‌ ವಿವರಿಸಿದರು.ಲಕ್ಷ ಮಹಿಳೆಯರಿಗೆ ಸ್ವಉದ್ಯೋಗ ಗುರಿ: ಗ್ರಾಮೀಣ ಭಾಗದ ಮಹಿಳೆಯರ ಸ್ವಾವಲಂಬಿ ಬದುಕಿಗೆ ‘ಕ್ರಿಯೇಟಿವ್‌ ಹೌಸ್‌’ ಮೂಲಕ ತೆಂಗಿನ ಗೆರಟೆಯ ಕಲಾಕೃತಿಗಳ ರಚನೆಗೆ ವಿಶೇಷ ತರಬೇತಿ ನೀಡಿ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಪುಷ್ಟಿನೀಡಿದೆ. ಕರಾವಳಿಯ 140ಕ್ಕೂ ಅಧಿಕ ಮಹಿಳೆಯರು ತರಬೇತಿ ಪಡೆದು, 12 ರಿಂದ 25 ಸಾವಿರ ರು.ವರೆಗೆ ಮಾಸಿಕ ಆದಾಯ ಗಳಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ವಿವಿಧ ಭಾಗದ ಒಂದು ಲಕ್ಷ ಮಹಿಳೆಯರಿಗೆ ತರಬೇತಿ ನೀಡಿ ಸ್ವ ಉದ್ಯೋಗ ಕಲ್ಪಿಸುವ ಗುರಿ ಇದೆ ಎಂದರು.ಸಂಸ್ಥೆಯ ಮಾಧ್ಯಮ ಸಲಹೆಗಾರ ಕುಮಾರ್‌ ಪೆರ್ನಾಜೆ, ನಿರ್ದೇಶಕರಾದ ಲತಾ ಪಿ. ಮತ್ತು ಗಿರಿಧರ ಸ್ಕಂದ ಇದ್ದರು.