ಸಾರಾಂಶ
ಆತ್ಮಭೂಷಣ್
ಕನ್ನಡಪ್ರಭ ವಾರ್ತೆ ಮಂಗಳೂರುದ.ಕ. ಜಿಲ್ಲೆಗೆ ಸಂಬಂಧಿಸಿ ಪ್ರತಿ ಬಾರಿಯ ಲೋಕಸಭೆ, ಅಸೆಂಬ್ಲಿ ಅಥವಾ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಮತದಾರರ ಪಟ್ಟಿಯನ್ನು ಅವಲೋಕಿಸಿದರೆ ಪುರುಷರಿಗಿಂತ ಮಹಿಳಾ ಮತದಾರರೇ ಅತ್ಯಧಿಕ ಸಂಖ್ಯೆಯಲ್ಲಿದ್ದಾರೆ. ಹಾಗೆಂದು ಚುನಾವಣೆಯಲ್ಲಿ ಸ್ಪರ್ಧಿಸುವುದರಿಂದ ಮಾತ್ರ ನಾರಿಶಕ್ತಿ ದೂರ.
ದ.ಕ. ಲೋಕಸಭಾ ಕ್ಷೇತ್ರದ ಈ ವರೆಗಿನ ಇತಿಹಾಸದಲ್ಲಿ ಜೆಡಿಎಸ್ ಹೊರತುಪಡಿಸಿದರೆ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲೇ ಇಲ್ಲ! ಪಕ್ಷೇತರರರಾಗಿ ಮಹಿಳಾ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಆದರೆ ಯಾರೊಬ್ಬರೂ ಇಲ್ಲಿ ಗೆಲವು ಕಂಡಿಲ್ಲ. ಹಾಗಾಗಿ ಇಷ್ಟು ವರ್ಷಗಳಿಂದ ಇಲ್ಲಿ ಮಹಿಳಾ ಸಂಸದರು ಇಲ್ಲ.ಜೆಡಿಎಸ್‌ನಿಂದ ಮಾತ್ರ ಸ್ಪರ್ಧೆ: ೧೯೫೧ರಿಂದ ೨೦೧೯ರ ವರೆಗೆ ಸೌತ್ ಕೆನರಾ-ಮಂಗಳೂರು ಕ್ಷೇತ್ರದಲ್ಲಿ ನಡೆದ ಚುನಾವಣೆಗಳಲ್ಲಿ ರಾಷ್ಟ್ರೀಯ ಪಕ್ಷಗಳಿಂದ ಮಹಿಳಾ ಸ್ಪರ್ಧಿಗಳೇ ಇರಲಿಲ್ಲ. ೧೯೯೯ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಲೋಕೇಶ್ವರಿ ವಿನಯಚಂದ್ರ ಅವರನ್ನು ಹೊರತುಪಡಿಸಿದರೆ ಬೇರೆ ಯಾವ ವರ್ಷವೂ ಪ್ರಮುಖ ರಾಜಕೀಯ ಪಕ್ಷಗಳು ಮಹಿಳೆಯರಿಗೆ ಟಿಕೆಟ್ ನೀಡಿಲ್ಲ. ರಾಜಕೀಯ ಪಕ್ಷಗಳ ಹಿನ್ನೆಲೆಯಲ್ಲಿ ನೋಡಿದಾಗ ಇದುವರೆಗೆ ಸ್ಪರ್ಧಿಸಿದ ಏಕೈಕ ಮಹಿಳಾ ಸ್ಪರ್ಧಿ ಲೋಕೇಶ್ವರಿ ವಿನಯಚಂದ್ರ ಮಾತ್ರ ಎಂಬುದು ಅಚ್ಚರಿಯ ಸಂಗತಿ.
೧೯೯೯ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಲೋಕೇಶ್ವರಿ ವಿನಯಚಂದ್ರ ತೀವ್ರ ಪೈಪೋಟಿ ನೀಡಿದ್ದರು. ಇವರ ಸ್ಪರ್ಧೆಯೇ ಕಾಂಗ್ರೆಸ್ ಸೋಲಿಗೆ ಪ್ರಧಾನ ಕಾರಣವಾಗಿತ್ತು. ಆಗ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಲೋಕೇಶ್ವರಿ ಅವರು ೨೦,೯೮೦ ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ವೀರಪ್ಪ ಮೊಯಿಲಿ ೩,೪೫,೦೬೭ ಮತಗಳನ್ನು ಪಡೆದುಕೊಂಡಿದ್ದರು. ಧನಂಜಯ ಕುಮಾರ್ ೩,೫೩,೫೩೬ ಮತಗಳನ್ನು ಪಡೆದು ನಾಲ್ಕನೇ ಬಾರಿ ಲೋಕಸಭೆ ಪ್ರವೇಶಿಸಿದ್ದರು. ೮,೪೬೯ ಮತಗಳ ಅಂತರದಿಂದ ವೀರಪ್ಪ ಮೊಯ್ಲಿ ಅವರನ್ನು ಧನಂಜಯ ಕುಮಾರ್ ಮಣಿಸಿದ್ದರು. ಮರು ಎಣಿಕೆ ನಡೆದರೂ ಪ್ರಯೋಜನವಾಗಲಿಲ್ಲ. ೨೦ ಸಾವಿರಕ್ಕೂ ಅಧಿಕ ಮತ ಪಡೆದ ಲೋಕೇಶ್ವರಿ ವಿನಯಚಂದ್ರ ಸ್ಪರ್ಧಿಸದೇ ಇದ್ದಿದ್ದರೆ ಆ ಚುನಾವಣೆಯ ಫಲಿತಾಂಶವೇ ಬದಲಾಗುವ ಸಾಧ್ಯತೆ ಇತ್ತು.ಪಕ್ಷೇತರರಾಗಿ ಸ್ಪರ್ಧೆ:
೧೯೮೯ರ ಚುನಾವಣೆಯಲ್ಲಿ ಪಕ್ಷೇತರರಾಗಿ ಗರ್ಟಿ ಸುವರ್ಣ ಮತ್ತು ಫ್ಲೋಸಿ ವಿ.ಪಿರೇರಾ ಅವರು ಸ್ಪರ್ಧಿಸಿದ್ದರು. ಅದನ್ನು ಹೊರತುಪಡಿಸಿದರೆ ಬೇರೆ ಯಾವ ವರ್ಷವೂ ಮಹಿಳೆಯರ ಸ್ಪರ್ಧೆಯನ್ನು ಮಂಗಳೂರು ಲೋಕಸಭಾ ಕ್ಷೇತ್ರ ಕಂಡಿಲ್ಲ ಎಂಬುದು ಸೋಜಿಗವಾದರೂ ಸತ್ಯ. ೧೯೫೧ರಿಂದ ೨೦೧೯ರ ವರೆಗೆ ಒಟ್ಟು ೧೧೪ ಮಂದಿ ಅಭ್ಯರ್ಥಿಗಳು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಈ ಪೈಕಿ ಮೂರು ಮಂದಿ ಮಾತ್ರ ಮಹಿಳೆಯರು. ಇನ್ನುಳಿದ ೧೧೧ ಮಂದಿ ಪುರುಷ ಅಭ್ಯರ್ಥಿಗಳು. ಆದ್ದರಿಂದ ಮಹಿಳಾ ಮತದಾರರು ಅಧಿಕವಾಗಿದ್ದರೂ ಮಹಿಳೆಯರಿಗೆ ಅವಕಾಶಗಳು ಸಿಕ್ಕಿದ್ದು ಮಾತ್ರ ಇಲ್ಲವೆಂದೇ ಹೇಳಬಹುದು. ೨೦೧೪ರಲ್ಲಿ ೧೪ ಮಂದಿ ಮತ್ತು ೨೦೧೯ರ ಚುನಾವಣೆಯಲ್ಲಿ ಒಟ್ಟು ೧೩ ಮಂದಿ ಕಣದಲ್ಲಿದ್ದರೂ ಒಬ್ಬರೇ ಒಬ್ಬರು ಮಹಿಳಾ ಅಭ್ಯರ್ಥಿಗಳಿರಲಿಲ್ಲ ಎಂಬುದು ಗಮನಿಸಬೇಕಾದ ಅಂಶ.ಈ ಬಾರಿಯೂ ಮಹಿಳಾ ಮತದಾರರೇ ಪ್ರಾಬಲ್ಯ!2019ರ ಚುನಾವಣೆಯಲ್ಲಿ ದ.ಕ. ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 17,24,469 ಮತದಾರರಿದ್ದರು. ಈ ಪೈಕಿ 8,79,186 ಮಹಿಳೆ ಮತ್ತು 8,45,283 ಪುರುಷ ಮತದಾರರು. ಈ ಬಾರಿ 2024ರಲ್ಲಿ ಒಟ್ಟು 18,03,008 ಮತದಾರರಿದ್ದಾರೆ. ಈ ಪೈಕಿ 9,22,645 ಮಹಿಳೆ ಮತ್ತು 8,80,363 ಪುರುಷ ಮತದಾರರು. 2019ರ ಚುನಾವಣೆಗಿಂತ ಈ ಬಾರಿ ಒಟ್ಟು 78,539ರಷ್ಟು ಮತದಾರರು ಹೆಚ್ಚಳವಾಗಿದ್ದಾರೆ. ಈ ಬಾರಿ 43,459 ಮಂದಿ ಮಹಿಳಾ ಮತದಾರರು ಹೆಚ್ಚುವರಿ ಸೇರ್ಪಡೆಯಾಗಿದ್ದಾರೆ. ವದಂತಿಗೇ ಸೀಮಿತ!
ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ದ.ಕ.ಜಿಲ್ಲೆಯಿಂದ ಬಿಜೆಪಿ ಮೊದಲ ಬಾರಿಗೆ ಮಹಿಳೆಯೊಬ್ಬರನ್ನು ಕಣಕ್ಕೆ ಇಳಿಸಲಿದೆ ಎಂಬ ಸುದ್ದಿ ವ್ಯಾಪಕವಾಗಿ ಹಬ್ಬಿತ್ತು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ದ.ಕ.ದಿಂದಲೇ ಕಣಕ್ಕೆ ಇಳಿಸುವ ಸಿದ್ಧತೆ ನಡೆದಿದೆ. ಈ ಬಾರಿ ಹಾಲಿ ಸಂಸದರನ್ನು ಬದಲಾಯಿಸಿ ಮಹಿಳಾ ಪ್ರಾತಿನಿಧ್ಯಕ್ಕೆ ಅವಕಾಶ ನೀಡುತ್ತಾರೆ ಎಂದೇ ಹೇಳಲಾಗಿತ್ತು. ಕೊನೆಗೂ ಬಿಜೆಪಿ ಮಹಿಳೆಯರಿಗೆ ಟಿಕೆಟ್ ನೀಡಲೇ ಇಲ್ಲ. ಕಾಂಗ್ರೆಸ್ ಮಹಿಳೆಯರಿಗೆ ಟಿಕೆಟ್ ನೀಡುವ ಬಗ್ಗೆ ಪ್ರಯತ್ನವನ್ನೇ ನಡೆಸಿಲ್ಲ.