ಸಾರಾಂಶ
ಅಡಕೆಗೆ ಕೊಳೆ ರೋಗ, ಹಳದಿ ರೋಗ, ಎಲೆಚುಕ್ಕಿ ರೋಗದಂಥ ಸಮಸ್ಯೆ ಇರುವ ಕಾಲಘಟ್ಟದಲ್ಲಿ ಬೆಳೆ ವಿಮೆಯ ದೊಡ್ಡ ಮೊತ್ತ ಸಿಕ್ಕಿರುವುದು ರೈತರ ಪಾಲಿಗೆ ತುಂಬಾ ಅನುಕೂಲವಾಗಿದೆ ಎಂದರು.
ಕನ್ನಡಪ್ರಭ ವಾರ್ತೆ ಪುತ್ತೂರು
ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯ ಅಡಿಯಲ್ಲಿ ದ.ಕ. ಜಿಲ್ಲೆಗೆ ರಾಜ್ಯದಲ್ಲಿಯೇ ಅತೀ ಹೆಚ್ಚು ವಿಮೆ ರೈತರ ಖಾತೆಗೆ ಪಾವತಿಯಾಗಿದೆ. ಜಿಲ್ಲೆಯಲ್ಲಿ ಈ ಬಾರಿ ಹಮಾಮಾನ ಆಧರಿತ ಬೆಳೆ ವಿಮೆ ಯೋಜನೆಯಲ್ಲಿ ಒಟ್ಟು ೧೫೭,೦೦,೩೬,೩೧೬ ರು. ಕ್ಲೇಮ್ ಆಗಿದ್ದು, ಈ ಪೈಕಿ ೬೯,೪೪,೧೦,೮೪೦ ರುಪಾಯಿ ರೈತರ ಖಾತೆಗೆ ಜಮೆಯಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.ಅವರು ಮಂಗಳವಾರ ಶಾಸಕರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ವರ್ಷ ಸರಕಾರ ರಾಜ್ಯದ ಬೆಳೆ ವಿಮೆಯ ಪಟ್ಟಿಯಿಂದ ಅಡಕೆಯನ್ನು ಹೊರಗಿಡಲು ಮುಂದಾಗಿತ್ತು. ಅಡಕೆ ವಾಣಿಜ್ಯ ಬೆಳೆಯೆಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಾಗಿತ್ತು. ಅಡಕೆ ಬೆಳೆಗಾರರ ಪರವಾಗಿ ಮುಖ್ಯಮಂತ್ರಿಗಳಲ್ಲಿ ವಿನಂತಿ ಮಾಡಿಕೊಂಡ ಕಾರಣ ಕೊನೆ ಕ್ಷಣದಲ್ಲಿ ಅಡಕೆ ಸೇರಿಸಲಾಗಿತ್ತು. ಅಡಕೆಗೆ ಕೊಳೆ ರೋಗ, ಹಳದಿ ರೋಗ, ಎಲೆಚುಕ್ಕಿ ರೋಗದಂಥ ಸಮಸ್ಯೆ ಇರುವ ಕಾಲಘಟ್ಟದಲ್ಲಿ ಬೆಳೆ ವಿಮೆಯ ದೊಡ್ಡ ಮೊತ್ತ ಸಿಕ್ಕಿರುವುದು ರೈತರ ಪಾಲಿಗೆ ತುಂಬಾ ಅನುಕೂಲವಾಗಿದೆ ಎಂದರು.
ಪ್ರತೀ ವರ್ಷ ರಾಜ್ಯ ಸರಕಾರ ಹವಾಮಾನ ಆಧರಿತ ಬೆಳೆ ವಿಮೆ ಯೋಜನೆಯನ್ನು ಪರಿಶೀಲಿಸಿ, ಪರಿಷ್ಕರಿಸುವ ಕೆಲಸ ಮಾಡುತ್ತದೆ. ಬಜೆಟ್‌ನಲ್ಲಿ ಸೇರಿಸಿದರೆ ಮಾತ್ರ ಅದು ವಿಮಾ ವ್ಯಾಪ್ತಿಗೆ ಬರುತ್ತದೆ. ಇದುವರೆಗೆ ಅಡಕೆಯನ್ನು ಸೇರಿಸುವ ಕಾರ್ಯ ನಡೆದಿದೆ. ಪ್ರದೇಶದಿಂದ ಪ್ರದೇಶಕ್ಕೆ ಹವಾಮಾನದಲ್ಲಿ ಆಗುವ ವ್ಯತ್ಯಾಸಗಳನ್ನು ಆಯಾ ಪ್ರದೇಶದಲ್ಲೇ ಅಧ್ಯಯನ ಮಾಡಿ ಸಲ್ಲಿಸಿದ ವರದಿ ಆಧಾರದಲ್ಲಿ ವಿಮಾ ಕಂಪನಿ ಪರಿಹಾರ ಮೊತ್ತ ನಿರ್ಧರಿಸಿ ರೈತರಿಗೆ ನೀಡುತ್ತದೆ ಎಂದು ಮಾಹಿತಿ ನೀಡಿದರು.