ಇನ್ನೇನು ಕೆಲವೇ ದಿನಗಳಲ್ಲಿ ಮಳೆ ಆರಂಭವಾಗಲಿದ್ದು, ಮಳೆಗಾಲವನ್ನು ಎದುರಿಸಲು ಆಡಳಿತ ವರ್ಗ ಸಿದ್ಧತೆಗಳನ್ನು ಆರಂಭಿಸಿದ್ದು, ಅದರಂತೆ ದಕ್ಷಿಣ ಕನ್ನಡ ಜಿಲ್ಲೆಯ 93 ಗ್ರಾ.ಪಂ. ವ್ಯಾಪ್ತಿಯಲ್ಲಿ ಪ್ರವಾಹ ಮತ್ತು ಭೂ ಕುಸಿತಕ್ಕೆ ಒಳಗಾಗುವ ಸಾಧ್ಯತೆ ಇರುವ ಪ್ರದೇಶಗಳು ಎಂದು ಗುರುತಿಸಿ ಆ ಭಾಗದಲ್ಲಿ ಮುಂಜಾಗ್ರತಾ ಕ್ರಮಕೈಗೊಳ್ಳಲು ಯೋಜನೆಗಳನ್ನು ಹಾಕಿಕೊಂಡಿದೆ.
ದಯಾನಂದ ಕಲ್ನಾರ್
ಕನ್ನಡಪ್ರಭ ವಾರ್ತೆ ಮಂಗಳೂರುಇನ್ನೇನು ಕೆಲವೇ ದಿನಗಳಲ್ಲಿ ಮಳೆ ಆರಂಭವಾಗಲಿದ್ದು, ಮಳೆಗಾಲವನ್ನು ಎದುರಿಸಲು ಆಡಳಿತ ವರ್ಗ ಸಿದ್ಧತೆಗಳನ್ನು ಆರಂಭಿಸಿದ್ದು, ಅದರಂತೆ ದಕ್ಷಿಣ ಕನ್ನಡ ಜಿಲ್ಲೆಯ 93 ಗ್ರಾ.ಪಂ. ವ್ಯಾಪ್ತಿಯಲ್ಲಿ ಪ್ರವಾಹ ಮತ್ತು ಭೂ ಕುಸಿತಕ್ಕೆ ಒಳಗಾಗುವ ಸಾಧ್ಯತೆ ಇರುವ ಪ್ರದೇಶಗಳು ಎಂದು ಗುರುತಿಸಿ ಆ ಭಾಗದಲ್ಲಿ ಮುಂಜಾಗ್ರತಾ ಕ್ರಮಕೈಗೊಳ್ಳಲು ಯೋಜನೆಗಳನ್ನು ಹಾಕಿಕೊಂಡಿದೆ.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತೀ ವರ್ಷ ಮಳೆಗಾಲ ಎದುರಿಸಲು ಎಷ್ಟೇ ಸಿದ್ಧತೆ, ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರೂ ಪ್ರತಿ ವರ್ಷ ಪ್ರಾಕೃತಿಕ ವಿಕೋಪದಿಂದ ಅವಘಡಗಳು, ಜೀವ ಹಾನಿಗಳು ಸಂಭವಿಸುತ್ತಲೇ ಇದೆ. ಈ ಹಿನ್ನಲೆಯಲ್ಲಿ ಪ್ರತೀ ವರ್ಷ ಪ್ರವಾಹ ಪೀಡಿತ, ಭೂ ಕುಸಿತ ಪ್ರದೇಶಗಳ ಸಂಖ್ಯೆ ಹೆಚ್ಚಳವಾಗುತ್ತಲೇ ಇರುತ್ತದೆ.
93 ಗ್ರಾ.ಪಂ.ಗಳಲ್ಲಿ ಪ್ರವಾಹ, ಭೂಕುಸಿತ ಭೀತಿ !: ದಕ್ಷಿಣ ಕನ್ನಡ ಜಿಲ್ಲೆಯ 93 ಗ್ರಾ.ಪಂ. ವ್ಯಾಪ್ತಿಯಲ್ಲಿ ಮತ್ತು ಮಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಸಂಬಂಧಿಸಿತ ಇಲಾಖೆಗಳ ಸಹಯೋಗದಲ್ಲಿ ಪ್ರವಾಹ ಪೀಡಿತ ಹಾಗೂ ಭೂಕುಸಿತ ಪೀಡಿತ ಪ್ರದೇಶಗಳನ್ನು ಗುರುತು ಮಾಡಿದೆ. ಅದರಂತೆ ಬಂಟ್ವಾಳ ತಾಲೂಕಿನ 15 ಗ್ರಾ.ಪಂ. ವ್ಯಾಪ್ತಿಯ 11 ಕಡೆಗಳಲ್ಲಿ ಪ್ರವಾಹ ಪೀಡಿತ ಮತ್ತು 8 ಕಡೆಗಳಲ್ಲಿ ಭೂಕುಸಿತ ಪೀಡಿತ ಪ್ರದೇಶಗಳೆಂದು ಗುರುತಿಸಲಾಗಿದೆ. ಮಂಗಳೂರು ತಾಲೂಕಿನ 9 ಗ್ರಾ.ಪಂ. ವ್ಯಾಪ್ತಿಯ 8 ಕಡೆ ಪ್ರವಾಹ ಪೀಡಿತ, 5 ಕಡೆ ಭೂಕುಸಿತ ಪೀಡಿತ, ಮೂಲ್ಕಿ ತಾಲೂಕಿನ 9 ಗ್ರಾ.ಪಂ. ವ್ಯಾಪ್ತಿಯ 9 ಕಡೆ ಪ್ರವಾಹ ಪೀಡಿತ, ಸುಳ್ಯ ತಾಲೂಕಿನ 6 ಗ್ರಾ.ಪಂ. ವ್ಯಾಪ್ತಿಯ 2 ಕಡೆ ಪ್ರವಾಹ ಪೀಡಿತ, 6 ಕಡೆ ಭೂಕುಸಿತ ಪೀಡಿತ, ಕಡಬ ತಾಲೂಕಿನ 5 ಗ್ರಾ.ಪಂ. ವ್ಯಾಪ್ತಿಯ 3 ಕಡೆ ಪ್ರವಾಹ ಪೀಡಿತ, 4 ಕಡೆ ಭೂಕುಸಿತ ಪೀಡಿತ, ಪುತ್ತೂರು ತಾಲೂಕಿನ 6 ಗ್ರಾ.ಪಂ.ವ್ಯಾಪ್ತಿಯ 5 ಕಡೆ ಪ್ರವಾಹ ಪೀಡಿತ, 3 ಕಡೆ ಭೂಕುಸಿತ ಪೀಡಿತ, ಬೆಳ್ತಂಗಡಿ ತಾಲೂಕಿನ 23 ಗ್ರಾ.ಪಂ. ವ್ಯಾಪ್ತಿಯ 19 ಕಡೆ ಪ್ರವಾಹ ಪೀಡಿತ, 22 ಕಡೆ ಭೂಕುಸಿತ ಪೀಡಿತ, ಉಳ್ಳಾಲ ತಾಲೂಕಿನ 14 ಗ್ರಾ.ಪಂ. ವ್ಯಾಪ್ತಿಯ 3 ಕಡೆ ಪ್ರವಾಹ ಪೀಡಿತ, 13 ಕಡೆ ಭೂಕುಸಿತ ಪೀಡಿತ, ಮೂಡುಬಿದಿರೆ ತಾಲೂಕಿನ 6 ಗ್ರಾ.ಪಂ. ವ್ಯಾಪ್ತಿಯ 6 ಕಡೆ ಭೂಕುಸಿತ ಪೀಡಿತ, ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 18 ಕಡೆಗಳಲ್ಲಿ ಪ್ರವಾಹ ಪೀಡಿತ ಸಾಧ್ಯತೆ ಇರುವ ಪ್ರದೇಶಗಳೆಂದು ಜಿಲ್ಲಾಡಳಿತ ಗುರುತಿಸಿದೆ. ಗುರುತಿಸಲಾದ ಗ್ರಾ.ಪಂ. ವ್ಯಾಪ್ತಿಯಲ್ಲಿ ತಾತ್ಕಲಿಕ ಪರಿಹಾರ ಕೇಂದ್ರಗಳನ್ನು ತೆರೆಯಲಾಗುತ್ತದೆ.ಜಿಲ್ಲೆಯ ಬೆಳ್ತಂಗಡಿ ಹಾಗೂ ಸುಳ್ಯ ತಾಲೂಕಿನಲ್ಲಿ ಈ ವರೆಗೆ ಹೆಚ್ಚಿನ ಪ್ರಮಾಣದ ಭೂಕುಸಿತ ಸಹಿತ ಪ್ರಾಕೃತಿ ವಿಕೋಪ ಘಟನೆಗಳು ಸಂಭವಿಸಿ ಅಪಾರ ಹಾನಿ ಸಂಭವಿಸಿದ ಘಟನೆ ನಡೆದಿದೆ. ಆದ್ದರಿಂದ ಈ ತಾಲೂಕಿನ ಜನತೆ ಪ್ರತಿ ಮಳೆಗಾಲದಲ್ಲೂ ಭಾರಿ ಮಳೆ ಸಂದರ್ಭದಲ್ಲಿ ಆತಂಕ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ.ಮುಂಜಾಗ್ರತಾ ಕ್ರಮ: ಜಿಲ್ಲೆಯಲ್ಲಿ ಗುರುತಿಸಲಾದ ಪ್ರವಾಹ ಪೀಡಿತ, ಭೂಕುಸಿತ ಪೀಡಿತ ಪ್ರದೇಶಗಳಲ್ಲಿ ಮಳೆಗಾಲದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಜೀವಹಾನಿ ಸಂಭವಿಸದಂತೆ ಎಚ್ಚರ ವಹಿಸಲಾಗಿದೆ. ತಗ್ಗು ಪ್ರದೇಶಗಳಲ್ಲಿ, ಭೂಕುಸಿತ ಪ್ರದೇಶಗಳಲ್ಲಿ ವಾಸಿಸುವವರನ್ನು ಮಳೆಗಾಲದ ಸಂದರ್ಭದಲ್ಲಿ ಸುರಕ್ಷಿತ ಸ್ಥಳಗಳಿಗೆ ಅಥವಾ ತಾತ್ಕಲಿಕ ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲು ಸಿದ್ಧತೆ ನಡೆಸಲಾಗಿದೆ. ಶಿಥಿಲಾವಸ್ಥೆಯ ಕಟ್ಟಡ, ಶಿಥಿಲ ಸೇತುವೆ, ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಿ ಪರ್ಯಾಯ ವ್ಯವಸ್ಥೆ ಮಾಡಲಾಗುತ್ತದೆ. ಪ್ರವಾಹ ಪೀಡಿತ ಪ್ರದೇಶಗಳಿಗೆ ರಕ್ಷಣಾ ಕಾರ್ಯಾಚರಣೆಗೆ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸಲಾಗುತ್ತದೆ. ಗ್ರಾಮಗಳಿಗೆ ನೋಡೆಲ್ ಅಧಿಕಾರಿಗಳನ್ನು ನಿಯೋಜಿಸಲಾಗಿರುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಾಲುವೆ, ಚರಂಡಿಗಳ ಹೂಳು ತೆರವು, ಸೇತುವೆಗಳ ಪರಿಶೀಲನೆ, ಇತರೆ ಸುರಕ್ಷತಾ ಕ್ರಮಗಳ ಬಗ್ಗೆಯೂ ಗಮನ ವಹಿಸಲಾಗುತ್ತಿದೆ. ಈ ಮೂಲಕ ಎಲ್ಲ ರೀತಯ್ಲ್ಲಿ ಮಳೆಗಾದಲ್ಲಿ ಸಂಭವಿಸುವ ಅನಾಹುತ ಎದುರಿಸಲು ಮುಂಜಾಗ್ರತೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಅವೈಜ್ಞಾನಿಕ ಕಾಮಗಾರಿಗಳೂ ಕಾರಣ!ಇತ್ತೀಚಿನ ವರ್ಷಗಳಲ್ಲಿ ಸಂಭವಿಸಿದ ಹೆಚ್ಚಿನ ದುರಂತಗಳು ಮಾನವ ನಿರ್ಮಿತ ಕಾಮಗಾರಿಗಳಿಂದ, ಅವೈಜ್ಞಾನಿಕ ಕಾಮಗಾರಿಗಳನ್ನು ನಡೆಸಿದ್ದರ ಪರಿಣಾಮವಾಗಿಯೇ ಸಂಭವಿಸುತ್ತಿವೆ. ಮನೆಗಳ ಸಮೀಪ ಭಾರೀ ಎತ್ತರದಲ್ಲಿ ಮಣ್ಣು ಅಗೆದು ಹಾಕಿರುವುದು, ಮನೆ ಬಳಿ ಅವೈಜ್ಞಾನಿಕ ತಡೆಗೋಡೆ ನಿರ್ಮಾಣ, ರಸ್ತೆಗೆ ಅವೈಜ್ಞಾನಿಕ ತಡೆಗೋಡೆ ನಿರ್ಮಾಣ, ಮಳೆ ನೀರು ಹರಿದು ಹೋಗಲು ವ್ಯವಸ್ಥೆ ಮಾಡದೇ ಇರುವುದು ಮುಂತಾದ ಘಟನೆಗಳೂ ದುರಂತಕ್ಕೆ ಕಾರಣವಾಗುತ್ತಿದೆ ಎನ್ನುವುದನ್ನು ಪರಿಸರ ವಿಜ್ಞಾನಿಗಳು ಕಂಡುಕೊಂಡಿದ್ದಾರೆ. 8 ವರ್ಷದಲ್ಲಿ 83 ಸಾವು: 2018ರಿಂದ 2025ರ ಏಪ್ರಿಲ್‌ವರೆಗಿನ ಇಲಾಖಾ ಅಂಕಿ-ಅಂಶ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದಿಂದ 83 ಮಂದಿ ಮೃತರಾಗಿದ್ದಾರೆ. 2025ರಲ್ಲಿ 8ಮಂದಿ, 2024ರಲ್ಲಿ 12ಮಂದಿ, 2023ರಲ್ಲಿ 7 ಮಂದಿ, 2022ರಲ್ಲಿ 11 ಮಂದಿ, 2021ರಲ್ಲಿ 7 ಮಂದಿ, 2020ರಲ್ಲಿ 8 ಮಂದಿ, 2019ರಲ್ಲಿ 16 ಮಂದಿ, 2018ರಲ್ಲಿ 14 ಮಂದಿ ಸೇರಿದಂತೆ ಒಟ್ಟು 83 ಮಂದಿ ಪ್ರಾಕೃತಿಕ ವಿಕೋಪದ ವಿವಿಧ ಘಟನೆಗಳಿಂದ ಮೃತರಾಗಿದ್ದಾರೆ. ಮಳೆಗಾಲದಲ್ಲಿ ಮಣ್ಣು ಕುಸಿದು, ತಡೆಗೋಡೆ ಕುಸಿದು, ನೀರಿನಲ್ಲಿ ಮುಳುಗಿ, ವಿದ್ಯುತ್ ಶಾಕ್ ತಗುಲಿ, ಮರ ಬಿದ್ದು, ಸಿಡಿಲು ಬಡಿದು ಮುಂತಾದ ಕಾರಣಗಳಿಂದ ಸಾವುಗಳು ಸಂಭವಿಸುತ್ತಿದೆ. ಮಳೆಗಾಲ ಎದುರಿಸಲು ಜಿಲ್ಲಾಡಳಿತದ ವತಿಯಿಂದ ಕ್ರಮಕೈಗೊಳ್ಳಲಾಗುತ್ತಿದೆ. ಈಗಾಗಲೇ ಕಾಲುವೆ, ಚರಂಡಿಗಳ ಹೂಳು ತೆರವಿಗೆ ಕ್ರಮ ವಹಿಸಲಾಗಿದೆ. ಸೇತುವೆಗಳ ಪರೀಕ್ಷೆ ನಡೆಸಲಾಗುತ್ತಿದೆ. ಪ್ರತಿ ಮಳೆಗಾಲದಂತೆ ಕೈಗೊಳ್ಳುವ ಮುಂಜಾಗ್ರತಾ ಕ್ರಮಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲಾಗುವುದು.
-ದರ್ಶನ್ ಎಚ್.ವಿ., ಜಿಲ್ಲಾಧಿಕಾರಿ ದಕ್ಷಿಣ ಕನ್ನಡ