ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರುಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ತುರ್ತು ಪರಿಸ್ಥಿತಿ ಹೆಸರಿನಲ್ಲಿ ಬಿಜೆಪಿ ನಾಯಕರು ಕರಾಳ ದಿನ ಆಚರಿಸುವ ಮೂಲಕ ಅವಮಾನ ಮಾಡುತ್ತಿದ್ದಾರೆ. ಬಿಜೆಪಿಯ ವಿರೋಧ ರಾಜಕೀಯ ಪ್ರೇರಿತವಾಗಿದ್ದು, ದ.ಕ. ಜಿಲ್ಲೆಯ ಯಾವೊಬ್ಬ ಬಡವರೂ ತುರ್ತು ಪರಿಸ್ಥಿತಿಯಿಂದ ತೊಂದರೆಯಾಗಿಲ್ಲ. ಅದರ ಬದಲು ದುರ್ಬಲ ವರ್ಗಗಳ ಏಳಿಗೆಗೆ ಶ್ರಮಿಸಿದ ಕಾರಣ ದ.ಕ. ಜಿಲ್ಲೆಯ ಜನರಿಗೆ ಇಂದಿರಾ ಗಾಂಧಿಯ ಋುಣವಿದೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.ಅವರು ಶುಕ್ರವಾರ ಮಂಗಳೂರಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿದರೂ ಅದರ ಬದಲು ಇಂದಿರಾ ಗಾಂಧಿಯ ಅಭಿವೃದ್ಧಿ ಕಾರ್ಯಕ್ರಮ, ಕೊಡುಗೆಗಳನ್ನು ಮನನ ಮಾಡಬೇಕು ಎಂದರು. ತುರ್ತು ಪರಿಸ್ಥಿತಿಯಿಂದ ವಿಪಕ್ಷದವರಿಗೆ ತೊಂದರೆ ಆಗಿರಬಹುದು. ಆದರೆ ದುರ್ಬಲ ವರ್ಗದವರಿಗೆ ಯಾರಿಗೂ ತೊಂದರೆ ಆಗಿಲ್ಲ. ಜೀತಪದ್ಧತಿ, ಋುಣಭಾರ ಮುಕ್ತಿ ಸೇರಿದಂತೆ ಹಲವು ಜನಪರ ಕಾರ್ಯಕ್ರಮಗಳ ಫಲಾನುಭವಿಗಳು ದ.ಕ. ಜಿಲ್ಲೆಯವರು ಎಂಬುದು ವಾಸ್ತವ ಎಂದರು.ಇಂದಿರಾ ಗಾಂಧಿಯವರ ಭೂ ಮಸೂದೆ ಕಾನೂನು ದ.ಕ.ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನವಾಗಿದೆ. ಬ್ಯಾಂಕ್‌ಗಳ ರಾಷ್ಟ್ರೀಕರಣದಿಂದಲೂ ಲಾಭವಾಗಿದ್ದು ಜಿಲ್ಲೆಯ ಜನರಿಗೆ. 20 ಅಂಶಗಳ ಕಾರ್ಯಕ್ರಮಗಳು, ನಿವೇಶನ, ದಖಾಸ್ತು ಭೂಮಿ ಹೀಗೆ ಬಡವರ ಸಬಲೀಕರಣದ ಕಾರ್ಯಕ್ರಮ ಇಂದಿರಾಗಾಂಧಿ ಕಾಲದಲ್ಲಿ ಆಗಿದೆ ಎಂಬುದನ್ನು ತುರ್ತು ಪರಿಸ್ಥಿತಿಯ ಬಗ್ಗೆ ಮಾತನಾಡುವವರಿಗೆ ನೆನಪಿಸಬೇಕಾಗಿದೆ. ತುರ್ತು ಪರಿಸ್ಥಿತಿಯ ಬಳಿಕವೂ ದ.ಕ. ಜಿಲ್ಲೆಯಲ್ಲಿ ಕಾಂಗ್ರೆಸ್ ಭಾರೀ ಮತಗಳಿಂದ ಜಯ ಗಳಿಸಿದೆ. ಇದು ಇಂದಿರಾಗಾಂಧಿಯವರು ಮಾಡಿದ ಜನಪರ ಕಾರ್ಯಗಳನ್ನು ಜಿಲ್ಲೆಯ ಜನತೆ ಒಪ್ಪಕೊಂಡ ಕಾರಣದಿಂದ. ದೇಶದ ಸಮಗ್ರತೆಗಾಗಿ ಪ್ರಾಣ ಕೊಟ್ಟವರನ್ನು ಅವಮಾನಿಸುವ ಕಾರ್ಯ ಬಿಜೆಪಿಯಿಂದ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಓರ್ವ ಕಾರ್ಯಕರ್ತನಾಗಿ ಇಂದಿರಾಗಾಂಧಿಯವರ ಪ್ರಗತಿಪರ ಕಾರ್ಯಕ್ರಮಗಳನ್ನು ನೆನಪಿಸಿಕೊಳ್ಳುವುದು ನನ್ನ ಜವಾಬ್ದಾರಿ ಎಂದರು.ವಸತಿ ಯೋಜನೆಯ ಭ್ರಷ್ಟಾಚಾರ ಆರೋಪದ ಕುರಿತಂತೆ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಮಾನಾಥ ರೈ, ಈ ಬಗ್ಗೆ ಸತ್ಯಾಸತ್ಯತೆಯ ವಿಮರ್ಶೆ ಆಗಿಲ್ಲ. ಆ ಬಗ್ಗೆ ಪ್ರತಿಕ್ರಿಯಿಸುವ ಉತ್ತರದಾಯಿತ್ವ ನನಗಿಲ್ಲ ಎಂದರು.
ಮುಖಂಡರಾದ ಶಶಿಧರ ಹೆಗ್ಡೆ, ನವೀನ್ ಡಿಸೋಜಾ, ಅಪ್ಪಿಲತಾ, ಪೃಥ್ವಿರಾಜ್, ಅಶೋಕ್ ಡಿ.ಕೆ., ಅಬ್ಬಾಸ್ ಅಲಿ, ಜಯಶೀಲ ಅಡ್ಯಂತಾಯ, ಜೆ. ಸಲೀಂ, ಇಬ್ರಾಹಿಂ ನವಾಜ್, ಸುಹಾನ್ ಆಳ್ವ, ದಿನೇಶ್‌ಕುಮಾರ್, ನಿತ್ಯಾನಂದ ಶೆಟ್ಟಿ, ಶಬೀರ್, ಸುನಿಲ್ ಬಜಿಲಕೇರಿ, ಪ್ರಕಾಶ್ ಸಾಲಿಯಾನ್ ಮೊದಲಾದವರು ಉಪಸ್ಥಿತರಿದ್ದರು.