ಡಿ.ಕೆ. ಶಿವಕುಮಾರ ಹಾಡಿ ಹೊಗಳಿದ ಎಚ್‌.ಕೆ. ಪಾಟೀಲ

| Published : Jan 19 2025, 02:15 AM IST

ಡಿ.ಕೆ. ಶಿವಕುಮಾರ ಹಾಡಿ ಹೊಗಳಿದ ಎಚ್‌.ಕೆ. ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಪಸ್ಥಿತಿಯಲ್ಲಿ ನಡೆದ ಈ ಸಭೆಯಲ್ಲಿ ಸುಮಾರು 22 ನಿಮಿಷ ಮಾತನಾಡಿದ ಸಚಿವ ಎಚ್‌.ಕೆ.ಪಾಟೀಲ್‌ ತಮ್ಮ ಭಾಷಣದ ಹೆಚ್ಚು ಸಮಯವನ್ನು ಡಿಕೆಶಿ ಹೊಗಳಲು ವ್ಯಯಿಸಿದ್ದು ಸಭೆಯಲ್ಲಿ ಭಾಗವಹಿಸಿದ್ದವರನ್ನು ಹುಬ್ಬೇರಿಸುವಂತೆ ಮಾಡಿತು.

ಹುಬ್ಬಳ್ಳಿ:ಕಾಂಗ್ರೆಸ್‌ ಹಿರಿಯ ಮುಖಂಡ, ಸಚಿವ ಎಚ್‌.ಕೆ.ಪಾಟೀಲ್‌ ಸುಮ್ಮಸುಮ್ಮನೇ ಯಾರನ್ನೂ ಅತಿಯಾಗಿ ಹೊಗಳುವುದಿಲ್ಲ. ಆದರೆ ಶನಿವಾರ ಇಲ್ಲಿನ ನಡೆದ ಬೆಳಗಾವಿ ಕಾಂಗ್ರೆಸ್‌ ಅಧಿವೇಶನದ ಪೂರ್ವಭಾವಿ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ ಅವರನ್ನು ಹಾಡಿಹೊಗಳಿದ್ದು ಹಲವು ಚರ್ಚೆಗಳನ್ನು ಹುಟ್ಟುಹಾಕಿದೆ.

ಅದೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಪಸ್ಥಿತಿಯಲ್ಲಿ ನಡೆದ ಈ ಸಭೆಯಲ್ಲಿ ಸುಮಾರು 22 ನಿಮಿಷ ಮಾತನಾಡಿದ ಸಚಿವ ಎಚ್‌.ಕೆ.ಪಾಟೀಲ್‌ ತಮ್ಮ ಭಾಷಣದ ಹೆಚ್ಚು ಸಮಯವನ್ನು ಡಿಕೆಶಿ ಹೊಗಳಲು ವ್ಯಯಿಸಿದ್ದು ಸಭೆಯಲ್ಲಿ ಭಾಗವಹಿಸಿದ್ದವರನ್ನು ಹುಬ್ಬೇರಿಸುವಂತೆ ಮಾಡಿತು. ಅಧಿಕಾರ ಹಂಚಿಕೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ಮಾತುಗಳು ಕೇಳಿ ಬರುತ್ತಿರುವ ಈ ಸಂದರ್ಭದಲ್ಲಿ ಎಚ್ಕೆ ಹೊಗಳಿಗೆಯನ್ನು ವಿಭಿನ್ನವಾಗಿ ವ್ಯಾಖ್ಯಾನಿಸಲಾಗುತ್ತಿದೆ.

ಹೀಗಿತ್ತು ಎಚ್ಕೆ ಮಾತು: "1924 ರಲ್ಲಿ ಮಹಾತ್ಮಾ ಗಾಂಧೀಜಿ ನೇತೃತ್ವದಲ್ಲಿ ನಡೆದ ಕಾಂಗ್ರೆಸ್‌ ಅಧಿವೇಶನದ ಶತಮಾನೋತ್ಸವ ಸಮಾರಂಭವನ್ನು ಮಾಡಲು ನಾವು ಬೆಳಗಾವಿಯಲ್ಲಿ ಕೆಲವು ಕಟ್ಟಡಗಳನ್ನು ಗುರುತಿಸಿದ್ದೆವು. ಅವುಗಳನ್ನು ನೋಡಿದ ಎಐಸಿಸಿ ಮುಖಂಡರು, ಹಿಂದಿನ ಕಾಂಗ್ರೆಸ್‌ ಅಧಿವೇಶನದ ನೆನಪಿನ ಕಾಂಗ್ರೆಸ್‌ ಬಾವಿ ಬಳಿಯೇ ತುಸು ವೈಭವದ ರೀತಿಯಲ್ಲಿ ಸಿದ್ದತೆ ಮಾಡಿಕೊಳ್ಳಿ ಎಂದಾಗ, ತಮ್ಮ ನಿರೀಕ್ಷೆಗೂ ಮೀರಿ ಸೌಲಭ್ಯ ಕಲ್ಪಿಸುತ್ತೇವೆ ಎಂದು ಡಿ.ಕೆ.ಶಿವಕುಮಾರ ವರಿಷ್ಟರಿಗೆ ಭರವಸೆ ನೀಡಿದರು.

ವಾಸ್ತವದಲ್ಲಿ ಬಾವಿಯ ಸುತ್ತಲಿನ ಪ್ರದೇಶ ಒಂದು ರೀತಿ ಹಾಳುಹಾಳಾಗಿತ್ತು. ಡಿ.ಕೆ.ಶಿವಕುಮಾರ ಅವರ ಕತೃತ್ವಶಕ್ತಿಯ ಫಲವಾಗಿ ಈಗ ಅದು ಯಾರೂ ಊಹಿಸದ ರೀತಿಯಲ್ಲಿ ಬದಲಾಗಿದೆ. ನಮಗೂ ಆ ನಿರೀಕ್ಷೆ ಇರಲಿಲ್ಲ. ಇಂಥ ಭವ್ಯ, ದಿವ್ಯ, ವೈಭವದ ಸಮಾರಂಭವನ್ನಾಗಿ ಮಾಡುವಲ್ಲಿ ಡಿ.ಕೆ.ಶಿವಕುಮಾರ ಅವರ ಕಾಳಜಿ, ಶ್ರಮ ಅಭಿನಂದನಾರ್ಹ. ತಮ್ಮ ಮಕ್ಕಳ ಮದುವೆಯಲ್ಲೂ ಇಷ್ಟೊಂದು ಕಾಳಜಿ, ಕಳಕಳಿ ತೋರಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ಪಕ್ಷ ವಹಿಸಿದ ಕಾರ್ಯವನ್ನು ಅತ್ಯಂತ ಹೃದಯಪೂರ್ವಕವಾಗಿ ಮಾಡಿದ್ದಾರೆ. ಅಧಿವೇಶನದ ಯಶಸ್ಸಿನ ಶ್ರೇಯಸ್ಸಿನಲ್ಲಿ ಶಿವಕುಮಾರ ಅವರ ಪಾಲು ದೊಡ್ಡದಿದೆ ಎಂದು ಎಚ್‌.ಕೆ.ಪಾಟೀಲ್ ಬಾಯ್ತುಂಬ ಕೊಂಡಾಡಿದರು.