ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಒಂಬತ್ತನೇ ಸಾಹಿತ್ಯ ಸಮ್ಮೇಳನ ಫೆಬ್ರವರಿ ಎರಡನೇ ವಾರ ನಗರದಲ್ಲಿ ನಡೆಸಲು ಶಿರಸಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿಣಿ ಸಭೆಯಲ್ಲಿ ನಿರ್ಧರಿಸಲಾಗಿದೆ.
ಕನ್ನಡಪ್ರಭ ವಾರ್ತೆ ಶಿರಸಿ
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಒಂಬತ್ತನೇ ಸಾಹಿತ್ಯ ಸಮ್ಮೇಳನ ಫೆಬ್ರವರಿ ಎರಡನೇ ವಾರ ನಗರದಲ್ಲಿ ನಡೆಸಲು ಶಿರಸಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿಣಿ ಸಭೆಯಲ್ಲಿ ನಿರ್ಧರಿಸಲಾಗಿದೆ.ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ, ಚಿಂತಕ ಡಿ.ಎಸ್. ನಾಯ್ಕ ಅವರನ್ನು ಶಿರಸಿ ಕಸಾಪ ಅಧ್ಯಕ್ಷ ಜಿ. ಸುಬ್ರಾಯ ಬಕ್ಕಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ.
ಸರ್ವಾಧ್ಯಕ್ಷರ ಕಿರು ಪರಿಚಯ:ದುರ್ಗಪ್ಪ ಸಣ್ಣತಮ್ಮ ನಾಯ್ಕ ಡಿ.ಎಸ್ ನಾಯ್ಕ ಎಂದೇ ಚಿರಪರಿಚಿತರು. ಹೊನ್ನಾವರ ತಾಲೂಕಿನ ಶಿರಾಲಿಯಲ್ಲಿ ಜೂನ್ 13, 1945ರಂದು ಜನಿಸಿದ ಇವರು, ಶಿರಸಿಯಲ್ಲೇ ನೆಲೆ ನಿಂತರು. ನ್ಯಾಯಾಲಯದಲ್ಲಿ ಗುಮಾಸ್ತರಾಗಿ ಸುದೀರ್ಘ ಅವಧಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದಾರೆ.
ಎಸ್ಎಸ್ಎಲ್‌ಸಿ ಮುಗಿಯುವುದರೊಳಗೆ ಕನ್ನಡದ ಎಲ್ಲ ಶ್ರೇಷ್ಠ ಕಾದಂಬರಿಕಾರರ ಕೃತಿಗಳನ್ನು ಓದಿ ಮುಗಿಸಿದ್ದ ಇವರು, ಶಿವರಾಮ ಕಾರಂತರ ಕಾದಂಬರಿಗಳು ಇವರ ಮೇಲೆ ಗಾಢವಾದ ಪರಿಣಾಮವನ್ನುಂಟು ಮಾಡಿದ್ದವು. ನಿವೃತ್ತಿ ನಂತರ ಹೆಚ್ಚಿನ ರೀತಿಯಲ್ಲಿ ಬರವಣಿಗೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಇವರು, ಮೂರು ವಾರಪತ್ರಿಕೆಗಳನ್ನು ಪ್ರಕಟಿಸಿದ್ದರು. ಸ್ಥಳೀಯ ಹಾಗೂ ರಾಜ್ಯ ಮಟ್ಟದ ಹಲವು ಪತ್ರಿಕೆಗಳಲ್ಲಿ ಇವರ ಸಾಕಷ್ಟು ಲೇಖನಗಳು ಪ್ರಕಟವಾಗಿವೆ. ಕಥಾ ಸಂಕಲನ, ವ್ಯಕ್ತಿಚಿತ್ರಣ, ಅನುಭವ ಕಥನ ಮತ್ತು ಶೀಲದ ಸೆಲೆ ಎಂಬ ಹೆಸರಿನ ಒಂದು ಕಾದಂಬರಿ ಪ್ರಕಟಗೊಂಡಿವೆ. ಇದು ವರೆಗೆ ಒಟ್ಟು 13 ಕೃತಿಗಳು ಪ್ರಕಟಗೊಂಡಿವೆ.ಕಳೆದ ಎರಡು ವರ್ಷಗಳಿಂದ ಲೋಕಧ್ವನಿಯಲ್ಲಿ ವಿಹಾರಿ ಶೀರ್ಷಿಕೆ ಅಡಿ ಪುಸ್ತಕ ಅವಲೋಕನ ಬರೆಯುತ್ತಿದ್ದಾರೆ. 1982 ರಲ್ಲಿ ಕಲಾರಂಗ ಸಾಂಸ್ಕೃತಿಕ ವೇದಿಕೆ ಸ್ಥಾಪಿಸಿ ದಿ. ಪೆನ್ನು ಮೋಹನ ಭಟ್ಟರೊಡನೆ ಸಾಹಿತ್ತಿಕ ಚಟುವಟಿಕೆಗಳನ್ನೂ ಯಶಸ್ವಿಯಾಗಿ ನಡೆಸಿದ್ದಾರೆ. ನಾಟಕದ ಅಭಿನಯ ಇವರ ಹವ್ಯಾಸವಾಗಿತ್ತು. ಮಕ್ಕಳ ನಾಟಕ ಬರೆದು ಮಕ್ಕಳಿಂದ ನಾಟಕವನ್ನೂ ಆಡಿಸಿದವರಾಗಿದ್ದಾರೆ. ಉತ್ತಮ ಬರಹಗಾರರಾದ ಇವರನ್ನು ಶಿರಸಿ ಕಸಾಪ 9ನೇ ತಾಲೂಕು ಸಮ್ಮೇಳನದ ಸರ್ವಾಧ್ಯಕ್ಷನನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಿದೆ.
ಸಭೆಯಲ್ಲಿ ಕಸಾಪ ಪದಾಧಿಕಾರಿಗಳಾದ ವಾಸುದೇವ ಶಾನಭಾಗ, ಕೆ.ಎನ್. ಹೊಸ್ಮನೆ, ಕೆ. ಮಹೇಶ ರಾಜೇಶ ದೇಶಭಾಗ, ಕೃಷ್ಣಪದಕಿ, ವಿಮಲಾ ಭಾಗ್ವತ್, ಆರ್.ಡಿ. ಹೆಗಡೆ ಆಲ್ಮನೆ, ಪುಷ್ಪಾ ನಾಯ್ಕ, ಡಿ. ಬಂಗಾರಪ್ಪ, ಕೇಶವ ಪಾಲೇಕರ್ ಸೇರಿದಂತೆ ಎಲ್ಲ ಸದಸ್ಯರು ಇದ್ದರು.