ಕನ್ನಡಪ್ರಭ ವಾರ್ತೆ ಹಿರಿಯೂರು

ಮಾಜಿ ಸಚಿವರ ಡಿ.ಸುಧಾಕರ್ ಅವರು ರಾಜಕೀಯಕ್ಕೆ ಬರುವ ಮೊದಲಿನಿಂದ ಇಲ್ಲಿಯವರೆಗೆ ಬಡವರಿಗೆ ದೀನ ದಲಿತರಿಗೆ ಮಹಿಳೆಯರಿಗೆ ಮಕ್ಕಳಿಗೆ ವಿದ್ಯಾರ್ಥಿಗಳಿಗೆ ದಾನಧರ್ಮ ಮಾಡುವ ಮೂಲಕ ಸಮಾಜ ಸೇವೆ ಹಾಗೂ ರಾಜಕೀಯ ಸೇವೆಯಲ್ಲಿ ಅಜರಾಮರವಾಗಿ ಉಳಿದಿದ್ದಾರೆ ಎಂದು ನಗರಸಭೆ ಮಾಜಿ ಸದಸ್ಯ ಜಿ.ಪ್ರೇಮ್ ಕುಮಾರ್ ಅಭಿಪ್ರಾಯ ಪಟ್ಟರು.

ನಗರದ ಲಕ್ಷ್ಮಮ್ಮ ಬಡಾವಣೆಯಲ್ಲಿರುವ ಯಾಜ್ಞವಲ್ಕ್ಯ ಪಬ್ಲಿಕ್ ಶಾಲೆಯ ಆವರಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಮಾಜಿ ಸಚಿವ ಡಿ.ಸುಧಾಕರ್ ಹಾಗೂ ಹಿರಿಯ ಪತ್ರಕರ್ತ ಜಿ.ಎಸ್.ಉಜ್ಜಿನಪ್ಪರವರಿಗೆ ಆಯೋಜಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ಜಾತಿಯ ಸೋಂಕು ಇಲ್ಲದ ಡಿ.ಸುಧಾಕರ್ ಅವರು ತಾಲೂಕಿನಲ್ಲಿ ಮೂರು ಬಾರಿ ಶಾಸಕರಾಗಿ ಎರಡು ಬಾರಿ ಮಂತ್ರಿಗಳಾಗಿ ಮಾಡಿದಂತಹ ಸೇವೆ ಅನನ್ಯವಾಗಿದೆ. ಅವರು ಯಾವುದೇ ಧರ್ಮ ಜಾತಿ ಬುಡಕಟ್ಟು ಎನ್ನದೆ ಎಲ್ಲರಿಗೂ ಪ್ರೀತಿ ವಿಶ್ವಾಸದಿಂದ ಕೆಲಸ ಮಾಡಿ ಕೊಡುತ್ತಿದ್ದರು. ಪ್ರಬಲ ಜಾತಿಗಳ ಮಧ್ಯೆ ದ್ವೇಷ ಅಸೂಯೆ ಇಲ್ಲದಂತಹ ಆಡಳಿತ ನಿರ್ವಹಣೆ ಮಾಡಿ ಸರ್ವ ಜನಾಂಗದ ನಾಯಕರಾಗಿ ಬೆಳೆದರು. ತಾಲೂಕಿನಲ್ಲಿ ಸಮಾನತೆಯ ಸಮಾಜವನ್ನು ಕಟ್ಟುವಲ್ಲಿ ಡಿ.ಸುಧಾಕರ್ ರವರ ಪಾತ್ರ ದೊಡ್ಡದು ಎಂದರು.

ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಎಸ್.ಜಿ.ರಂಗಸ್ವಾಮಿ ಸಕ್ಕರ

ಮಾತನಾಡಿ, ತಾಲೂಕಿನ ಗೌನಳ್ಳಿ ಗ್ರಾಮದ ಮಾನವೀಯ ಮೌಲ್ಯ ಪ್ರೀತಿ ವಿಶ್ವಾಸದ ನಿಜ ಸಂತರಾಗಿದ್ದ ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಜಿ.ಎಸ್.ಉಜ್ಜಿನಪ್ಪ ನವರ ಸಾವು ದೊಡ್ಡ ಆಘಾತ ತಂದಿದೆ. ಜಯಲಕ್ಷ್ಮಿ ಮಿಲ್ಲಿನಲ್ಲಿ ಕಾರ್ಮಿಕರಾಗಿ, ಆಫೀಸರ್ ಆಗಿ ಬದುಕು ಆರಂಭಿಸಿದ ಉಜ್ಜಿನಪ್ಪನವರು ಓದು ಮತ್ತು ಬರವಣಿಗೆಗೆ ಹೆಚ್ಚು ಆದ್ಯತೆ ನೀಡಿದರು. ಬಯಲು ಸೀಮೆಯ ಶೈಲಿಯಲ್ಲಿದ್ದ ಅವರ ಬರವಣಿಗೆ ಎಲ್ಲರನ್ನು ಸೆಳೆಯುತ್ತಿತ್ತು. ತಾವು ಹುಟ್ಟಿ ಬೆಳೆದ ಗೌನಳ್ಳಿ ಗ್ರಾಮದ ಕುರಿತು ಗೌನಳ್ಳೇರು ಎಂಬ ಕೃತಿಯನ್ನು ನಾಡಿಗೆ ನೀಡಿದ್ದಾರೆ. ಜೊತೆಗೆ ಕವನ ಸಂಕಲನ ,ಕಾದಂಬರಿ ಬರೆದು ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ್ದಾರೆ. ಹಾಗೆ ಸುಮಾರು 35 ವರ್ಷಗಳ ಕಾಲ ಇಂಗ್ಲಿಷ್ ಪತ್ರಿಕೆಯ ಜಿಲ್ಲಾ ವರದಿಗಾರರಾಗಿ ಕೆಲಸ ಮಾಡಿದ್ದಾರೆ. ಚಿತ್ರದುರ್ಗದ ಮುರುಘ ಮಠದ ಒಡನಾಡಿಯಾಗಿ ಮಾಡಿದಂತಹ ಸೇವೆ ಅನನ್ಯವಾಗಿದೆ. ಅನೇಕ ಪಿಎಚ್.ಡಿ ಸಂಶೋಧಕರಿಗೆ, ಕಿರಿಯ ಪತ್ರಕರ್ತರಿಗೆ, ವಿದ್ಯಾರ್ಥಿಗಳಿಗೆ ಮಾರ್ಗದರ್ಶಿಯಾಗಿ ಸಲಹೆ ಸಹಕಾರ ನೀಡಿದ ಕೀರ್ತಿ ಅವರದ್ದು ಎಂದರು.


ಈ ವೇಳೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ.ರಾಮಚಂದ್ರಪ್ಪ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಮಹಮ್ಮದ್ ಫಕ್ರುದ್ದೀನ್, ನಗರಸಭೆ ಮಾಜಿ ಉಪಾಧ್ಯಕ್ಷ ಆರ್, ರವಿಚಂದ್ರ ನಾಯ್ಕ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹರ್ತಿಕೋಟೆ ಮಹಾಸ್ವಾಮಿ, ಗೌರವ ಕಾರ್ಯದರ್ಶಿ ಜೆ. ನಿಜಲಿಂಗಪ್ಪ, ಐಮಂಗಲ ಹೋಬಳಿ ಕಸಾಪ ಘಟಕದ ಅಧ್ಯಕ್ಷ ಪಿ. ತಿಪ್ಪೇಸ್ವಾಮಿ, ಎಚ್.ವೇದಪುಷ್ಪ, ಶಿಕ್ಷಕ ಎಚ್.ಆರ್.ಶಂಕರ್, ರಂಗಭೂಮಿ ಕಲಾವಿದ ರಂಗಪ್ಪ, ಡಿ ಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು.