ಡಿ.ವಿ. ಗುಂಡಪ್ಪ ಹೃದಯವಂತ, ಧೀಮಂತರು: ಬಿ.ಸಿ. ಹನುಮಂತಗೌಡ್ರು

| Published : Mar 19 2024, 12:51 AM IST

ಡಿ.ವಿ. ಗುಂಡಪ್ಪ ಹೃದಯವಂತ, ಧೀಮಂತರು: ಬಿ.ಸಿ. ಹನುಮಂತಗೌಡ್ರು
Share this Article
  • FB
  • TW
  • Linkdin
  • Email

ಸಾರಾಂಶ

ನರಗುಂದ ಪಟ್ಟಣದ ಶ್ರೀ ಯಡೆಯೂರ ಸಿದ್ದಲಿಂಗೇಶ್ವರ ಶಿಕ್ಷಣ ಮಹಾವಿದ್ಯಾಲಯ ಆಶ್ರಯದಲ್ಲಿ ಕನ್ನಡ ಸಂಘದ ಉದ್ಘಾಟನೆ ಹಾಗೂ ಕವಿ ಜಯಂತಿ ಕಾರ್ಯಕ್ರಮ ನಡೆಯಿತು.

ನರಗುಂದ: ಡಿ.ವಿ. ಗುಂಡಪ್ಪ ಅವರನ್ನು ಆಧುನಿಕ ಕನ್ನಡ ಸಾಹಿತ್ಯದ ನವರತ್ನಗಳಲ್ಲಿ ಒಬ್ಬರೆಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಸಿ. ಹನುಮಂತಗೌಡ್ರು ಹೇಳಿದರು.

ಸೋಮವಾರ ಪಟ್ಟಣದ ಶ್ರೀ ಯಡೆಯೂರ ಸಿದ್ದಲಿಂಗೇಶ್ವರ ಶಿಕ್ಷಣ ಮಹಾವಿದ್ಯಾಲಯ ಆಶ್ರಯದಲ್ಲಿ ನಡೆದ ಕನ್ನಡ ಸಂಘದ ಉದ್ಘಾಟನೆ ಹಾಗೂ ಕವಿ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.ಡಿವಿಜಿ ವ್ಯಕ್ತಿತ್ವ ಎಲ್ಲರೊಡನೆ ಬೆರೆಯುವಂಥದು. ಭಾರತ ಸ್ವಾತಂತ್ರ್ಯಕ್ಕಾಗಿ ಅವರು ಹೋರಾಡಿದರು. ಪೋಲೆಪಲ್ಲಿ ಚಿನ್ನಪ್ಪಶೆಟ್ಟಿ, ಸೊಣ್ಣೇಗೌಡ, ಕಾಷ್ಠಿ ಹೈದರ್‌ಸಾಬ್ ಅವರೊಂದಿಗೆ ಬೆರೆತಂತೆಯೇ ಮಿರ್ಜಾ ಇಸ್ಮಾಯಿಲ್, ಸರ್. ಎಂ.ವಿ. ರೈಟ್, ಶ್ರೀನಿವಾಸ ಶಾಸ್ತ್ರಿ ಮೊದಲಾದವರೊಂದಿಗೆ ಚರ್ಚೆ ನಡೆಸುವ ಸಂವಾದ ಕುಶಲಿಗಳಾಗಿದ್ದರು. ತಾವು ತರುತ್ತಿದ್ದ ಒಂದು ಪತ್ರಿಕೆಗೆ ಸಾರ್ವಜನಿಕ ಎಂದೇ ಹೆಸರಿಟ್ಟಿದ್ದರು. ಡಿವಿಜಿ ಉಲ್ಲಾಸವಂತರಾದ ಶಿಷ್ಯರನ್ನೂ ಗೆಳೆಯರನ್ನೂ ಚಿಂತಕರನ್ನೂ ತಯಾರು ಮಾಡಿದ್ದರು ಎಂದು ಡಿವಿಜಿಯವರ ಬದುಕು ಬರಹ ಎಂಬ ವಿಶೇಷ ಉಪನ್ಯಾಸದಲ್ಲಿ ತಿಳಿಸಿದರು.ಸಂಸ್ಥೆಯ ಕಾರ್ಯದರ್ಶಿ ಎಂ.ವಿ. ಪಾಟೀಲ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಶಾಲಾ-ಕಾಲೇಜುಗಳಲ್ಲಿ ಕನ್ನಡ ಸಂಘಗಳ ರಚನೆ ಹಾಗೂ ಅವುಗಳ ಕಾರ್ಯಾಚರಣೆ ತೀರಾ ವಿರಳವಾಗುತ್ತಿವೆ. ಇಂತಹ ಸಂದರ್ಭದಲ್ಲಿ ಇಂದು ಕನ್ನಡ ಸಂಘದ ಉದ್ಘಾಟನೆ ಅವಿಸ್ಮರಣೀಯ. ಡಿವಿಜಿಯವರು ಆಧುನಿಕ ಕನ್ನಡದ ಸರ್ವಜ್ಞ ಎಂದೇ ಪ್ರಖ್ಯಾತರಾದವರು. ಅಂತಹವರ ಬದುಕು ನಮಗೆಲ್ಲರಿಗೂ ಆದರ್ಶ ಎಂದು ಹೇಳಿದರು.

ಗ್ರಂಥ ಪಾಲಕರಾದ ವಿ.ಎಸ್. ಪಾರ್ವತಿ ಮಾತನಾಡಿ, ಕನ್ನಡ ಸಂಘ ಹಾಗೂ ಕವಿ ಜಯಂತಿಗಳು ಶೈಕ್ಷಣಿಕವಾಗಿ ಪಠ್ಯಪೂರಕ ಚಟುವಟಿಕೆಯಾಗಿದ್ದು, ಇಂತಹ ಚಟುವಟಿಕೆಗಳನ್ನು ಭಾವಿ ಶಿಕ್ಷಕರಾಗುವ ವಿದ್ಯಾರ್ಥಿಗಳು ಕಲಿತುಕೊಂಡು ಮಕ್ಕಳಿಗೂ ಅದರ ಉದ್ದೇಶಗಳನ್ನು ತಿಳಿಸಬೇಕು ಎಂದು ಹೇಳಿದರು.

ಸೌಭಾಗ್ಯ ಮಾನಣ್ಣವರ್ ಹಾಗೂ ತೇಜಸ್ವಿನಿ ದುಂಡೂರ್ ಕವಿ ಡಿವಿಜಿಯವರ ಪರಿಚಯ ಮಾಡಿಕೊಟ್ಟರು.ಕಾಲೇಜಿನ ಕನ್ನಡ ಉಪನ್ಯಾಸಕ ಎಂ.ಪಿ. ಕ್ಯಾತನಗೌಡ್ರ ಮಾತನಾಡಿ, ಡಿವಿಜಿ ಬುದ್ಧಿವಂತರ ಜಾತಿ ಮತ್ತು ಹೃದಯವಂತರ ಜಾತಿಗಳನ್ನು ಗುರುತಿಸಿದ್ದರು. ಆದರೆ, ಇದರಲ್ಲಿ ಹೃದಯವಂತರೇ ನಿರ್ಣಾಯಕ ಎಂದು ಅವರು ತೀರ್ಮಾನಿಸಿದ್ದರು. ಏಕೆಂದರೆ ಅವರ ದೃಷ್ಟಿಯಲ್ಲಿ ವಿದ್ವತ್ತೆಂದರೆ ಪುಸ್ತಕ ಪಾಂಡಿತ್ಯ, ಸಂಸ್ಕೃತಿ ಎಂದರೆ ಜೀವನದ ಅಂತರಂಗದ ಸೊಗಸು. ಮನುಷ್ಯನಿಗೆ ಸಮಾಜದೊಂದಿಗೆ ಸಂಪರ್ಕವಿರಬೇಕೆನ್ನುವುದು ಡಿವಿಜಿ ಪ್ರತಿಪಾದಿಸಿದ ಮಹಾ ತತ್ವ. ಹಾಗಿಲ್ಲದಿದ್ದರೆ ಬದುಕು ವ್ಯರ್ಥವೆಂದು ಅವರು ಬಗೆದಿದ್ದರು. ಇದಕ್ಕೆ ಅವರ ‘ಮಂಕುತಿಮ್ಮನ ಕಗ್ಗ’ದ ತೊಲಗೆಲವೊ ಮನೆಯಿಂದ ಮನವು ಬರಡಾದಂದೆ । ಹೊಲಸ ತೊಳೆಯಲು ತೋಳ್ಗೆ ಬಲ ಕುಗ್ಗಿದಂದೆ ।।

ತೊಲಗು ಜಗದಿಂ ದೂರ, ಇಳೆಗಾಗದಿರು ಭಾರ । ತೊಲಗಿ ನೀಂ ಮರೆಯಾಗು – ಮಂಕುತಿಮ್ಮ ।। ಎನ್ನುವ ಒಂದು ಪದ್ಯವನ್ನು ನೋಡಬಹುದು ಎಂದರು.ಇದೇ ಸಂದರ್ಭದಲ್ಲಿ ಕನ್ನಡ ಸಂಘ ಉದ್ಘಾಟನೆ ಮಾಡಿ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಮಲ್ಲಮ್ಮ ಹಳೆಮನಿ, ಮೇಘಾ ಪಾಟೀಲ್, ಪವಿತ್ರ ಕಿತ್ತೂರ, ಮಲ್ಲಿಕಾರ್ಜುನ ನೇಕಾರ, ಪ್ರೇಮಾ ವಾಲ್ಮೀಕಿ, ಈಶ್ವರ್ ತಳಗಡಿ, ಕಾಲೇಜಿನ ಪ್ರಾಚಾರ್ಯರರು ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.