ಸಾರಾಂಶ
ಕನ್ನಡಪ್ರಭ ವಾರ್ತೆ ಬಂಟ್ವಾಳ
ಅದು ಸರ್ಕಾರಿ ಶಾಲೆಯಂತಿರಲಿಲ್ಲ.. ಅದೊಂದು ವಿದ್ಯಾಮಂದಿರದಂತೆ ಕಾಣುತ್ತಿತ್ತು. ಹೊರೆಕಾಣಿಕೆ ಮೆರವಣಿಗೆಯೊಂದಿಗೆ ಶುಕ್ರವಾರ ನಡೆದ ದಡ್ಡಲಕಾಡು ಸರ್ಕಾರಿ ಆಂಗ್ಲಮಾಧ್ಯಮ ಪ್ರೌಢಶಾಲೆಯ ಶಾಲಾಪ್ರಾರಂಭೋತ್ಸವದಲ್ಲಿ ಕಂಡುಬಂದ ಸನ್ನಿವೇಶವಿದು.ಆರಂಭದಲ್ಲಿ ದಡ್ಡಲಕಾಡುವಿನ ಶ್ರೀ ಜಗದಾಂಬಿಕ ಭಜನಾ ಮಂದಿರದಲ್ಲಿ ಪ್ರಾರ್ಥಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಪಾಲಕರೊಂದಿಗೆ ಮಕ್ಕಳು ಶಾಲೆಯತ್ತ ಹೆಜ್ಜೆ ಹಾಕಿದರು. ಹೊಸ ವಿದ್ಯಾರ್ಥಿಗಳನ್ನು ಶಿಕ್ಷಕರು ಪುಷ್ಪಾರ್ಚನೆಯ ಜೊತೆ ಪನ್ನೀರು ಸಿಂಪಡಿಸಿ ಸ್ವಾಗತಿಸಲಾಯಿತು.
ಶಾಲೆಯನ್ನು ಹಸಿರು ಎಳೆಗಳ ತಳಿರು ತೋರಣ, ಬಂಟಿಂಗ್ಸ್‌ಗಳಿಂದ ಅಲಂಕರಿಸಲಾಗಿತ್ತು. ಈ ಸಂದರ್ಭ ವಿದ್ಯಾರ್ಥಿಗಳ ಪಾಲಕರು ದೊಡ್ಡ ಪ್ರಮಾಣದಲ್ಲಿ ಹಸಿರುವಾಣಿ ಹೊರೆಕಾಣಿಕೆಯನ್ನು ಶಾಲೆಗೆ ಸಮರ್ಪಿಸಿದರು.ತೊಂಡೆ, ಬೆಂಡೆ, ಸೌತೆಕಾಯಿ, ಬಸಳೆ, ಕುಂಬಳ, ಬಟಾಟೆ, ಈರುಳ್ಳಿ, ತೆಂಗಿನಕಾಯಿ ಮೊದಲಾದ ಕಾಯಿ ಪಲ್ಲೆಗಳು ಸೇರಿದಂತೆ ಲೋಟ, ಬಟ್ಟಲು, ಕತ್ತಿ, ಹಾರೆ, ತೆಂಗಿನಕಾಯಿ ಸುಲಿಯವ ಸಾಧನ ಮೊದಲಾದ ಉಪಯುಕ್ತ ಸಾಮಗ್ರಿಗಳು ಶಾಲೆಗೆ ಸಂದಾಯವಾಯಿತು.
ಬಳಿಕ ಶಾಲಾ ಸಭಾಭವನದಲ್ಲಿ ಪೋಷಕರ ಸಭೆಯನ್ನು ಶ್ರೀದುರ್ಗಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಅಂಚನ್ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ನೇತೃತ್ವದಲ್ಲಿ ಶಿಕ್ಷಕರು ಹಾಗೂ ಪೋಷಕರ ಸಹಕಾರದಿಂದ ಶಾಲೆ ಉತ್ತಮವಾಗಿ ನಡೆಯುತ್ತಿದ್ದು ಇದೇ ಆವರಣದಲ್ಲಿ ಪಿಯುಸಿ ತರಗತಿಗಳನ್ನು ಆರಂಭಿಸಲು ಪ್ರಯತ್ನ ನಡೆಸಲಾಗುತ್ತಿದೆ. ಈ ಬಾರಿ ಎಸ್‌ಎಸ್‌ಎಲ್‌ಸಿಯಲ್ಲಿಯೂ ಉತ್ತಮ ಫಲಿತಾಂಶ ಬಂದಿದ್ದು ಮುಂದಿನ ವರ್ಷದಿಂದ ಶೇ. ೧೦೦ ಫಲಿತಾಂಶ ಪಡೆಯಲು ಪ್ರಯತ್ನಿಸಲಾಗುವುದು. ಅದರ ಜೊತೆಗೆ ಗುಣಮಟ್ಟದ ಶಿಕ್ಷಣವನ್ನು ನೀಡಲಾಗುವುದು ಎಂದರು.ಪ್ರಾಥಮಿಕ ಶಾಲಾ ಸಹಶಿಕ್ಷಕಿ ಹಿಲ್ಡಾ ಫರ್ನಾಂಡಿಸ್ ಹಾಗೂ ಪ್ರೌಢಶಾಲಾ ವಿಭಾಗದ ಎಸ್‌ಡಿಎಂಸಿ ಕಾರ್ಯಾಧ್ಯಕ್ಷ ಪುರುಷೋತ್ತಮ ಅಂಚನ್ ಪೂರಕ ಮಾಹಿತಿ ನೀಡಿದರು. ಈ ಸಂದರ್ಭ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಸಮವಸ್ತ್ರ ಹಾಗೂ ಪುಸ್ತಕ ವಿತರಿಸಲಾಯಿತು. ವೇದಿಕೆಯಲ್ಲಿ ಟ್ರಸ್ಟಿ ರಾಮಚಂದ್ರ ಪೂಜಾರಿ ಕರೆಂಕಿ, ಶಿಕ್ಷಕರಾದ ಅನಿತಾ, ಕವಿತಾ ಉಪಸ್ಥಿತರಿದ್ದರು. ಪ್ರೌಢಶಾಲಾ ಮುಖ್ಯ ಶಿಕ್ಷಕ ರಮಾನಂದ ಸ್ವಾಗತಿಸಿದರು. ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ವಿನ್ನಿ ಸಿಂಥಿಯಾ ವಂದಿಸಿದರು. ಶಿಕ್ಷಕಿ ಜಯಶ್ರೀ ಕಾರ್ಯಕ್ರಮ ನಿರೂಪಿಸಿದರು.