ಇಲಾಖೆಯಲ್ಲಿ ೬ ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇದ್ದು, ಚಾಲಕರು, ಕಚೇರಿ ಸಿಬ್ಬಂದಿ, ವೀಕ್ಷಕ ಹುದ್ದೆಗಳಿಗೆ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರನ್ನು ೧೦ ರಿಂದ ೨೦ ವರ್ಷಗಳ ಸೇವಾ ಅನುಭವ ಹೊಂದಿದದವರನ್ನು ಭರ್ತಿ ಮಾಡಬೇಕು.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ರಾಜ್ಯ ಅರಣ್ಯ ಇಲಾಖೆಯ ದಿನಗೂಲಿ ಹೊರಗುತ್ತಿಗೆ ನೌಕರರ ಸಂಘದ ನೇತೃತ್ವದಲ್ಲಿ ದಿನಗೂಲಿ ಹೊರ ಗುತ್ತಿಗೆ ನೌಕರರು ಬಂಡೀಪುರ ಸಫಾರಿ ಕೇಂದ್ರದ ಆವರಣದಲ್ಲಿ ಮುಷ್ಕರ ಆರಂಭಿಸಿದ್ದಾರೆ.ಹೊರ ಗುತ್ತಿಗೆ ನೌಕರರ ಪ್ರಮುಖ ಬೇಡಿಕೆಗಳಾದ ಸಮಾನ ಕೆಲಸಕ್ಕೆ ಸಮಾನ ವೇತನ, ದಿನಗೂಲಿ ಹೊರಗುತ್ತಿಗೆ ನೌಕರರನ್ನು ಜೇಷ್ಠ ಪದ್ಧತಿಯಿಂದ ಮುಕ್ತಗೊಳಿಸಿ, ಸೇವಾ ಭದ್ರತೆ ಸೌಲಭ್ಯ ಹಾಗೂ ನೌಕರರ ಮೂಲಭೂತ ಹಕ್ಕಿಗಾಗಿ ಹೋರಾಟವನ್ನು ಬಂಡೀಪುರ, ನಾಗರಹೊಳೆ, ಎಂ.ಎಂ. ಹಿಲ್ಸ್, ಕಾವೇರಿ ವನ್ಯಜೀವಿ ಧಾಮ, ಭದ್ರ, ಕಾಳಿ, ಮೈಸೂರು ವನ್ಯಜೀವಿ, ಬನ್ನೇರು ಘಟ್ಟದಲ್ಲಿ ಹೊರ ಗುತ್ತಿಗೆ ನೌಕರರು ಆರಂಭಿಸಿದ್ದಾರೆ.
ರಾಜ್ಯ ದಿನಗೂಲಿ ನೌಕರರ ಸಂಘದ ರಾಜ್ಯಾಧ್ಯಕ್ಷ ಎಂ.ನಾಗರಾಜು ಮಾತನಾಡಿ, ಅರಣ್ಯ ಇಲಾಖೆಯಲ್ಲಿ ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿರುವ ದಿನಗೂಲಿ ಹೊರ ಗುತ್ತಿಗೆ ನೌಕರರ ಶೋಷಣೆ ನಿಲ್ಲಬೇಕು ಎಂದು ಆಗ್ರಹಿಸಿದರು.ಅರಣ್ಯ ಇಲಾಖೆಯು ೨೦೧೭ರಲ್ಲಿ ಜಾರಿಗೊಳಿಸಿರುವ ಅವೈಜ್ಞಾನಿಕ ಹಾಗೂ ಕಾನೂನು ಬಾಹಿರ ಹೊರಗುತ್ತಿಗೆ ನಿಯೋಜನೆ ಕೈಬಿಡಬೇಕು.೧೦ ವರ್ಷಗಳಿಗೂ ಹೆಚ್ಚು ಸೇವೆ ಸಲ್ಲಿಸಿರುವ ನೌಕರರಿಗೆ ಸೇವಾ ಭದ್ರತೆ ಒದಗಿಸಬೇಕು. ಕೆಲಸದ ಅವಧಿಗೆ ಅನುಗುಣವಾಗಿ ವೇತನ ನಿಗಧಿಗೊಳಿಸಬೇಕು ಎಂದು ಒತ್ತಾಯಿಸಿದರು.
ನೌಕರರ ಆರೋಗ್ಯ ವಿಮೆ ಕಡ್ಡಾಯಗೊಳಿಸಬೇಕು. ಇಲಾಖೆಯಲ್ಲಿ ತೊಡಗಿಕೊಂಡಿರುವ ನೌಕರರ ಸೇವಾ ಮಾಹಿತಿ ನಿರ್ವಹಣೆ ಮಾಡಬೇಕು. ಕರ್ತವ್ಯದ ವೇಳೆ ನಿಧನ ಹೊಂದಿದ ನೌಕರರ ಕುಟುಂಬಕ್ಕೆ ಕೆಲಸ ಮತ್ತು ಪರಿಹಾರ ನೀಡಬೇಕು. ದಶಕಗಳಿಂದ ಸೇವೆ ಮಾಡುತ್ತಿರುವ ನೌಕರರು ಹಾಗೂ ಇತ್ತೀಚೆಗೆ ಕೆಲಸ ಸೇರಿದ ನೌಕರರಿಗೂ ಒಂದೇ ರೀತಿಯ ವೇತನ ನೀಡುತ್ತಿದ್ದಾರೆ, ಇದು ಸರೀನಾ ಎಂದು ಪ್ರಶ್ನಿಸಿದರು.ರಾಜ್ಯ ಘಟಕದ ಉಪಾಧ್ಯಕ್ಷ ಹರೀಶ್, ಸ್ಥಳೀಯ ನೌಕರರಾದ ಅಬ್ದುಲ್ ಹನೀಪ್, ಅಣ್ಣಯ್ಯಸ್ವಾಮಿ, ಶ್ರೀನಿವಾಸ್, ಕೃಷ್ಣರಾಜು, ಮಹೇಂದ್ರ, ಶ್ರೀಕಾಂತ್, ಮಹೇಶ್ ಸೇರಿ ನೂರಾರು ಮಂದಿ ನೌಕರರು ಇದ್ದರು.
-----ಪ್ರಮುಖ ಬೇಡಿಕೆಗಳು೧.ಅರಣ್ಯ ಇಲಾಖೆಯ ಸುತ್ತೋಲೆ ೨೨.೭.೨೦೧೭ರ ಅವೈಜ್ಞಾನಿಕ ಸುತ್ತೋಲೆ ಪರಿಶೀಲಿಸಬೇಕು. ದಿನಗೂಲಿ ನೌಕರರನ್ನು ದಿನಗೂಲಿ ಮೂಲ ಹುದ್ದೆಯಲ್ಲಿ ಮುಂದುವರಿಸಬೇಕು ಹಾಗೂ ಹೊರಗುತ್ತಿಗೆ ನಿಯೋಜನೆ ರದ್ದುಗೊಳಿಸಬೇಕು.
೨. ಅರಣ್ಯ ಇಲಾಖೆಯಲ್ಲಿ ೧೦ ವರ್ಷಗಳಿಗೂ ಅಧಿಕ ಸೇವೆ ಸಲ್ಲಿಸಿರುವ ಹಾಗೂ ಸೇವೆಯಲ್ಲಿ ಮುಂದುವರಿದ ನೌಕರರಿಗೆ ಸೇವಾ ಭದ್ರತೆ ನೀಡಬೇಕು.೩.ಕಾರ್ಮಿಕ ಕಾಯಿದೆ ಜಾರಿಗೊಳಿಸುವ ಉದ್ದೇಶದಿಂದ ೨೬ ದಿನಗಳಿಗೆ ಮಜೂರಿ ನೀಡುತ್ತಿದ್ದು, ಅದೇ ಕಾರ್ಮಿಕ ಕಾಯಿದೆ ಅಡಿ ೮ ಗಂಟೆಗಳ ಕಾಲ ಕೆಲಸ ಅಥವಾ ಮಹಿನೆ ೩೦ ದಿನಗಳಿಗೆ ಸಂಬಳ ಜಾರಿಗೊಳಿಸಬೇಕು.
೪.ಸೇವಾ ಅವಧಿ ಪರಿಗಣಿಸಿ, ನೌಕರರ ವೇತನ ನಿಗಧಿಗೊಳಿಸಬೇಕು. ಈಗ ಹಾಲಿ ಹೊಸದಾಗಿ ಕೆಲಸಕ್ಕೆ ಸೇರಿದ ನೌಕರರ ಮಜೂರಿ ೧೫ ರಿಂದ ೨೦ ವರ್ಷಗಳಿಂದ ಸೇವೆಯಲ್ಲಿರುವ ನೌಕರರ ವೇತನಕ್ಕೂ ಒಂದೇ ಆಗಿದ್ದು, ನೌಕರರ ಸೇವಾ ಹಿರಿತನದ ಆಧಾರದ ಮೇಲೆ ವೇತನ ನಿಗಧಿಗೊಳಿಸಬೇಕು.೫. ಸರ್ಕಾರದ ಆದೇಶ ೧೧.೬.೨೦೦೯ ಮತ್ತು ೩೧.೭.೨೦೧೨ರಂತೆ ಮಾಸಿಕ ಸಂಭಾವನೆ ಮುಂದುವರಿಸಬೇಕು ಹಾಗೂ ಹಿಂಬಾಕಿ ನೀಡಬೇಕು.
೬.ಕ್ಷೇಮಾಭಿವೃದ್ಧಿ ಅಧಿ ನಿಯಮ ಸೌಲಭ್ಯ ಜಾರಿಗೊಳಿಸುವ ವೇಳೆ ಕೈಬಿಡಲಾದ ಅರ್ಹ ನೌಕರರಿಗೆ ಸೌಲಭ್ಯ ಜಾರಿಗೊಳಿಸಬೇಕು.೭.ಖಾಲಿ ಹುದ್ದೆಗಳ ಭರ್ತಿ: ಇಲಾಖೆಯಲ್ಲಿ ೬ ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇದ್ದು, ಚಾಲಕರು, ಕಚೇರಿ ಸಿಬ್ಬಂದಿ, ವೀಕ್ಷಕ ಹುದ್ದೆಗಳಿಗೆ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರನ್ನು ೧೦ ರಿಂದ ೨೦ ವರ್ಷಗಳ ಸೇವಾ ಅನುಭವ ಹೊಂದಿದದವರನ್ನು ಭರ್ತಿ ಮಾಡಬೇಕು.
೮. ಕೆಲಸ ನಿರ್ವಹಿಸುವ ಎಲ್ಲಾ ನೌಕರರ ಸೇವಾ ಮಾಹಿತಿ ನಿರ್ವಹಣೆ ಆಗಬೇಕು, ನೌಕರರಿಗೆ ಸರ್ಕಾರದಿಂದ ಕಾರ್ಮಿಕ ಕಾಯಿದೆಯಡಿ ಆರೋಗ್ಯ ವಿಮೆ ಕಡ್ಡಾಯ ಜಾರಿಯಾಬೇಕು. ಸೇವೆಯಲ್ಲಿದ್ದಾಗ ನಿಧನ ಹೊಂದಿದ ನೌಕರರ ಕುಟುಂಬಕ್ಕೆ ಪರಿಹಾರ ನೀಡಬೇಕು.9. ಪ್ರಾದೇಶಿಕ ವಲಯಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಬ್ಯಾಂಕ್ ಮೂಲಕ ಸಂಬಳ ಪಾವತಿಸುವಂತೆ ಇಲಾಖೆ ಅಧಿಕಾರಿಗಳ ಆದೇಶವಿದ್ದರೂ ಕೆಲವು ವಿಭಾಗಗಳಲ್ಲಿ ಕೈ ಮುಖೇನ ಸಂಬಳ ಕೊಡುವುದು ನಿಲ್ಲಬೇಕು. ನೌಕರರಿಗೆ ಕಡಿಮೆ ಮಜೂರಿ ಪಾವತಿಸಲಾಗುತ್ತಿದೆ, ನೆಡುತೋಪು ಕಾವಲು ವೀಕ್ಷಕ, ಸಸ್ಯಕ್ಷೇತ್ರ ನೌಕರರಿಗೆ ೨೦೧೭-೧೮ ರಿಂದ ಹೊರಗುತ್ತಿಗೆ ಜಾರಿಯಾದ ನಂತರದಲ್ಲಿ ಕರ್ನಾಟಕ ಭವಿಷ್ಯನಿಧಿ ಕರ್ನಾಟಕ ಆರೋಗ್ಯ ವಿಮೆ,(ಇಪಿಎಫ್ ಮತ್ತು ಇಎಸ್ಐ) ಸೌಲಭ್ಯ ನೀಡದೇ ವಂಚಿಸಲಾಗಿದೆ. ಈ ಸೌಲಭ್ಯ ಜಾರಿಯಾಗಬೇಕು.