ಸ್ವಾಭಿಮಾನದ ಬದುಕಿಗೆ ಆಧಾರವಾದ ಹೈನುಗಾರಿಕೆ ಉದ್ಯಮ

| Published : Feb 13 2025, 12:47 AM IST

ಸಾರಾಂಶ

Dairy farming industry as a basis for a self-respecting life

-ಯಡ್ರಾವಿ ತಾಲೂಕಿನ ಮಳ್ಳಿ ಗ್ರಾಮದ ಮಂಜು.ಜಗನ್ನಾಥ ಅವರ ಯಶೋಗಾಥೆ

---

ಕನ್ನಡಪ್ರಭ ವಾರ್ತೆ ಯಡ್ರಾಮಿ:

ಸಾಧಿಸುವ ಛಲವಿದ್ದರೆ ಎಂತಹ ಸವಾಲುಗಳನ್ನೂ ಜಯಿಸಿ ಗುರಿ ಮುಟ್ಟಬಹುದು ಎಂಬುದಕ್ಕೆ ಮಳ್ಳಿ ಗ್ರಾಮದ ಮಂಜು ತಂದೆ ಜಗನ್ನಾಥ ಯಾದಗಿರಿ ಸಾಕ್ಷಿಯಾಗಿದ್ದಾರೆ.

ಉಡುಪಿ ಜಿಲ್ಲೆಯ ಮಣಿಪಾಲ ವಿಶ್ವವಿದ್ಯಾಲಯದಲ್ಲಿ 2020ರಲ್ಲಿ ಡಿಪ್ಲೋಮಾ ಸಿವಿಲ್ ಕೋರ್ಸ್ ಮುಗಿದ ಮೇಲೆ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿದರು. ಆದರೆ, ವೇತನ ಕಡಿಮೆಯೆಂಬ ಕಾರಣದಿಂದ ಆ ಕೆಲಸವನ್ನು ಬಿಟ್ಟು ತನ್ನ ಒಂದು ಎಕರೆ ಜಮೀನಿನಲ್ಲಿ ನಾಲ್ಕು ಹಸುಗಳಿಂದ ಹೈನೋದ್ಯಮ ಆರಂಭಿಸಿದ ಯುವಕ. ಈಗ ಹೈನೋದ್ಯಮದಲ್ಲಿ ಯಶಸ್ವಿಯಾಗಿರುವ ಮಂಜು ನಿರುದ್ಯೋಗಿ ಯುವಕರಿಗೆ ಮಾದರಿ. 33ರಾಸುಗಳನ್ನು ಸಾಕಿರುವ ಮಂಜು ಪ್ರತಿದಿನ 110ಕ್ಕೂ ಹೆಚ್ಚು ಲೀಟರ್‌ ಹಾಲು ಕರೆಯುತ್ತಿದ್ದು, ಪ್ರತಿತಿಂಗಳು ₹2.3 ಲಕ್ಷ ಸಂಪಾದನೆ ಮಾಡುತ್ತಿದ್ದಾರೆ. ಪ್ರತಿದಿನ ಮುಂಜಾನೆ ನಾಲ್ಕು ಗಂಟೆಗೆ ಎದ್ದು ಹಸುಗಳ ಮೈತೊಳೆದು ಹಾಲು ಕರೆದು 10 ಗಂಟೆಯವರೆಗೆ ಹಸುಗಳು ಮೆಲುಕು ಹಾಕಲು ಕಟ್ಟಲಾಗುತ್ತದೆ. ಬಳಿಕ ಹಸುಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿ ಕಬ್ಬಿನ ಸ್ವಾಗಿ, ಮೇವು ಹಾಕಲಾಗುವುದು. ಹಾಲು ಕರೆಯಲು ಹಾಗೂ ಕೊಟ್ಟಿಗೆಯನ್ನು ಸ್ವಚ್ಛ ಮಾಡಲು ಒಬ್ಬ ಕೂಲಿಕಾರ ಇದ್ದಾನೆ ಎನ್ನುತ್ತಾರೆ ಮಂಜು.

ಹಸುಗಳಿಗೆ ಆರೋಗ್ಯದಲ್ಲಿ ಏರುಪೇರಾದರೆ ತಕ್ಷಣ ಪ್ರಾಥಮಿಕ ಚಿಕಿತ್ಸಾ ವಿಧಾನ ಕಲಿತಿದ್ದೇನೆ. ಕಾಯಿಲೆ ಗಂಭೀರವಾಗಿದ್ದರೆ ಪಶುವೈದ್ಯರನ್ನು ಕರೆಸಲಾಗುವುದು. ಕಳೆದೆರಡು ವರ್ಷಗಳಿಂದ ಹಸುಗಳಿಗೆ ರೋಗಗಳ ಬಾಧೆ ಕಾಡಿಲ್ಲ. ಸಣ್ಣ ಅನಾರೋಗ್ಯಕ್ಕೆ ಸ್ವಚಿಕಿತ್ಸಾ ವಿಧಾನ ಅನುಸರಿಸುತ್ತಿದ್ದೇನೆ ಎಂದು ಮಂಜು ತಿಳಿಸಿದರು.

ಸರ್ಕಾರದ ಯೋಜನೆಗಳು ದೊರೆತರೆ ಮುಂದೆ ಹೆಚ್ಚಿನ ರಾಸುಗಳನ್ನು ಖರೀದಿಸಿ ಸಾಕುವ ಆಸೆ ಇದೆ. ಹೈನೋದ್ಯಮ ಕಾರ್ಯಕ್ಕೆ ಕುಟುಂಬದ ಪ್ರೇರಣೆಯಿಂದ ಹೈನುಗಾರಿಕೆಯಲ್ಲಿ ಯಶಸ್ಸು ದೊರೆತಿದೆ ಎನ್ನುತ್ತಾರೆ ಅವರು.

ಗ್ರಾಮದಲ್ಲಿ ಕೃಷಿ ಜಮೀನಿದ್ದರೂ ಹಣ ಸಂಪಾದಿಸಲು ವಲಸೆ ಹೋಗುತ್ತಿದ್ದಾರೆ. ಕೃಷಿಯ ಜೊತೆಗೆ ಹೈನುಗಾರಿಕೆ ಮಾಡಿಕೊಂಡರೆ ಉತ್ತಮ ಆದಾಯಗಳಿಸಬಹುದು. ನಾಲ್ಕು ಹಸುಗಳನ್ನು ಕಟ್ಟಿದರೆ ಪ್ರತಿ ತಿಂಗಳು ₹ 25,000 ಆದಾಯಗಳಿಸಬಹುದು ಎಂದು ಮಂಜುನಾಥ್‌ ಸಲಹೆ ನೀಡಿದ್ದಾರೆ.

ಯುವಕರು ಸ್ವಉದ್ಯೋಗದತ್ತ ಒಲವು ತೋರಿಸಬೇಕು, ಯಾವ ಕೆಲಸವನ್ನೂ ಆಗುವುದಿಲ್ಲ ಎಂದು ಹಿಂದೆ ಸರಿಯಬಾರದು. ಎಲ್ಲವೂ ಸಾಧ್ಯ ಎಂಬ ದೃಢ ಮನಸ್ಸಿನಿಂದ ಮುನ್ನುಗ್ಗಿದರೆ ಖಂಡಿತ ಯಶಸ್ಸು ದೊರೆಯುತ್ತದೆ. ಉದ್ಯಮ ಯಶಸ್ಸಿನಲ್ಲಿ ಧೈರ್ಯ, ದೃಢ ಮನಸ್ಸು ಹಾಗೂ ಬದ್ಧತೆಯ ಕೆಲಸ ಹೆಚ್ಚು ಮುಖ್ಯವಾಗುತ್ತದೆ ಎನ್ನುತ್ತಾರೆ ಮಂಜು.