ಸಾರಾಂಶ
ವಿಶೇಷ ವರದಿ
ಕನ್ನಡಪ್ರಭ ವಾರ್ತೆ ಮಂಗಳೂರುಸ್ಮಾರ್ಟ್ ಸಿಟಿಯ ಪರಿಕಲ್ಪನೆಗೆ ಪೂರಕವಾಗಿ ಮಂಗಳೂರು ನಗರದಲ್ಲಿ ಮೂರು ಬಹುಮಹಡಿ ಮಾರುಕಟ್ಟೆ ಕಟ್ಟಡಗಳನ್ನು ನಿರ್ಮಾಣ ಮಾಡಿ ವರ್ಷಗಳು ಕಳೆದರೂ ಇನ್ನೂ ಪಾಳುಬಿದ್ದ ಸ್ಥಿತಿಯಲ್ಲಿದ್ದು, ಆಡಳಿತದ ಬೇಜವಾಬ್ದಾರಿಗೆ ಕೈಗನ್ನಡಿಯಾಗಿದೆ. ಕೋಟ್ಯಂತರ ರು. ಖರ್ಚು ಮಾಡಿ ಕಟ್ಟಿದ ಕಟ್ಟಡಗಳು ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ.
ನಾಲ್ಕು ವರ್ಷಗಳ ಹಿಂದೆ ಪೂರ್ಣಗೊಂಡ ಅಳಕೆ ಮಾರುಕಟ್ಟೆಗೆ ಇನ್ನೂ ಪ್ರವೇಶ ಭಾಗ್ಯವೇ ದೊರೆತಿಲ್ಲ. ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರವು 12.29 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿದ ಉರ್ವ ಮಾರುಕಟ್ಟೆ ಮತ್ತು ವಾಣಿಜ್ಯ ಸಂಕೀರ್ಣವು ಬಹುತೇಕ ಖಾಲಿ ಬಿದ್ದಿದೆ. ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ (ಕೆಯುಐಡಿಎಫ್‌ಸಿ) ಮತ್ತು ಮಹಾನಗರ ಪಾಲಿಕೆ ನಿಧಿಯಿಂದ 12.3 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾದ ಕದ್ರಿ- ಮಲ್ಲಿಕಟ್ಟೆ ಮಾರುಕಟ್ಟೆಯು ಪೂರ್ಣಗೊಂಡು ಒಂದು ವರ್ಷ ಕಳೆದರೂ ಉದ್ಘಾಟನೆ ಭಾಗ್ಯಕ್ಕಾಗಿ ಕಾಯುತ್ತಲೇ ಇದೆ.ಇನ್ನು ಕಂಕನಾಡಿ ಮಾರುಕಟ್ಟೆಯ ಕೆಲಸ ನಿಧಾನಗತಿಯಲ್ಲಿ ನಡೆಯುತ್ತಿದ್ದು, ಅದು ಕೂಡ ಉಳಿದ ಮೂರು ಮಾರುಕಟ್ಟೆಯ ಸಾಲಿಗೇ ಸೇರುವ ಸಾಧ್ಯತೆಗಳೇ ಹೆಚ್ಚು!
ಮೂರೂ ಮಾರುಕಟ್ಟೆಗಳ ಕಾರ್ಯಾರಂಭಕ್ಕೆ ಪೂರಕ ಕೆಲಸಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿರುವ ಮೇಯರ್ ಮನೋಜ್ ಕುಮಾರ್, ಅಳಕೆ ಮಾರುಕಟ್ಟೆಯಲ್ಲಿ ಮಾಂಸ ಮಾರಾಟದ ನಾಲ್ಕೈದು ಮಳಿಗೆಗಳಿಗೆ ಗ್ರಾಹಕರ ಕೊರತೆ ಮತ್ತಿತರ ಸಮಸ್ಯೆಗಳಿದ್ದವು. ಹಾಗಾಗಿ ಮಾರಾಟ ಮಳಿಗೆಗಳಿಗೆ ಸೂಕ್ತ ಜಾಗದ ವ್ಯವಸ್ಥೆ ಮಾಡಿದ ನಂತರ ಮಾರುಕಟ್ಟೆ ಕಟ್ಟಡದೊಳಗಿನ 25 ಮಳಿಗೆಗಳನ್ನು ಹಂಚಿಕೆ ಮಾಡುವುದಾಗಿ ಹೇಳಿದರು.ಕದ್ರಿ ಮಲ್ಲಿಕಟ್ಟೆ ಮಾರುಕಟ್ಟೆಯಲ್ಲಿನ 36 ಅಂಗಡಿಗಳಲ್ಲಿ 16 ಅಂಗಡಿಗಳನ್ನು ಹಳೆ ಮಾರುಕಟ್ಟೆಯಲ್ಲಿ ಇದ್ದ ವ್ಯಾಪಾರಿಗಳಿಗೆ ಹಂಚಿಕೆ ಮಾಡಲಾಗಿದೆ. ಟೆಂಡರ್ ಪ್ರಕ್ರಿಯೆಗೆ ಒಲವು ತೋರದ ಕಾರಣ ಅವರಿಗೆ ಒಪ್ಪಂದ ಪತ್ರದ ಮೂಲಕ ಮಳಿಗೆಗಳನ್ನು ನೀಡಲಾಗಿದೆ. ಮಾರುಕಟ್ಟೆಯ ಇನ್ನೂ ಎರಡು ಮಹಡಿಗಳಿಗೆ ಟೆಂಡರ್ ಮಾಡಲಾಗಿದ್ದು, ಬಿಡ್‌ದಾರರು ಠೇವಣಿ ಪಾವತಿಸಿದ್ದಾರೆ. ಉರ್ವ ಮಾರುಕಟ್ಟೆಯಲ್ಲೂ ಮಳಿಗೆಗಳಿಗೆ ಸೂಕ್ತ ಬದಲಾವಣೆ ಮಾಡಿಕೊಟ್ಟು ಶೀಘ್ರ ಕಾರ್ಯಾರಂಭ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಮುಗಿಯದ ಕಂಕನಾಡಿ ಮಾರುಕಟ್ಟೆ:ಕಂಕನಾಡಿ ಮಾರುಕಟ್ಟೆಗೆ 2019ರಲ್ಲಿ ಅಡಿಪಾಯ ಹಾಕಲಾಗಿದ್ದು, ಇನ್ನೂ ಪೂರ್ಣಗೊಂಡಿಲ್ಲ. 2021ರಲ್ಲಿ ರಾಜ್ಯ ಸಚಿವ ಸಂಪುಟವು 41.50 ಕೋಟಿ ರು.ಗಳ ಪರಿಷ್ಕೃತ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಇನ್ನೂ ಕೆಲಸ ಕುಂಟುತ್ತಲೇ ಸಾಗಿದೆ.
ನಗರದಲ್ಲಿ ಮಾರುಕಟ್ಟೆ ಮತ್ತು ವಾಣಿಜ್ಯ ಸಂಕೀರ್ಣ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಮೊದಲು ಮಹಾನಗರ ಪಾಲಿಕೆಯು ವಿವರವಾದ ಯೋಜನೆ ರೂಪಿಸಬೇಕಿತ್ತು ಎಂದು ವಿರೋಧ ಪಕ್ಷದ ಸದಸ್ಯರು ಆರೋಪಿಸುತ್ತಾರೆ...............ಕೇಂದ್ರ ಮಾರುಕಟ್ಟೆ ಶೀಘ್ರ ಪೂರ್ಣ
ಪ್ರಸ್ತುತ ಕೇಂದ್ರ ಮಾರುಕಟ್ಟೆಯನ್ನು ಸರ್ಕಾರಿ- ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು, ಇನ್ನು ಐದು ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಒಪ್ಪಂದದ ಪ್ರಕಾರ ಒಟ್ಟು 5 ಲಕ್ಷ ಚದರ ಅಡಿ ವಿಸ್ತೀರ್ಣದ ಈ ಮಾರುಕಟ್ಟೆಯಲ್ಲಿ 1.5 ಲಕ್ಷ ಚದರ ಅಡಿ ವಿಸ್ತೀರ್ಣವನ್ನು ಮಹಾನಗರ ಪಾಲಿಕೆ ಪಡೆದುಕೊಂಡರೆ, ಉಳಿದ 3.5 ಲಕ್ಷ ಚದರ ಅಡಿ ವಿಸ್ತೀರ್ಣವನ್ನು ಮಾರುಕಟ್ಟೆ ಕಟ್ಟಡದ ನಿರ್ಮಾಣಕಾರರಿಗೆ ನೀಡಲಾಗುತ್ತದೆ. ಇದು ಸುದೀರ್ಘ 30 ವರ್ಷಗಳ ಒಪ್ಪಂದವಾಗಿದೆ.