ದಕ್ಷಿಣ ಅಯೋಧ್ಯಾ ಮೂರ್ತಿ ಕೆತ್ತನೆಯ ಚಾಲನೆ ರದ್ದು

| N/A | Published : May 24 2025, 12:01 AM IST / Updated: May 24 2025, 11:56 AM IST

ಸಾರಾಂಶ

ಮೈಸೂರು ತಾಲೂಕು ಹಾರೋಹಳ್ಳಿ ಬಳಿಯ ಗುಜ್ಜೇಗೌಡನಪುರದಲ್ಲಿ ಬಾಲರಾಮ ಶಿಲೋದ್ಭವ ಕ್ಷೇತ್ರ ಚಾರಿಟಬಲ್ ಟ್ರಸ್ಟ್ ಶುಕ್ರವಾರ ಆಯೋಜಿಸಿದ್ದ ಬಾಲರಾಮನ ಮೂರ್ತಿ ಕೆತ್ತನೆ ಚಾಲನೆ ಕಾರ್ಯಕ್ರಮವನ್ನು ರದ್ದುಗೊಳಿಸಿದೆ.

  ಮೈಸೂರು : ಮೈಸೂರು ತಾಲೂಕು ಹಾರೋಹಳ್ಳಿ ಬಳಿಯ ಗುಜ್ಜೇಗೌಡನಪುರದಲ್ಲಿ ಬಾಲರಾಮ ಶಿಲೋದ್ಭವ ಕ್ಷೇತ್ರ ಚಾರಿಟಬಲ್ ಟ್ರಸ್ಟ್ ಶುಕ್ರವಾರ ಆಯೋಜಿಸಿದ್ದ ಬಾಲರಾಮನ ಮೂರ್ತಿ ಕೆತ್ತನೆ ಚಾಲನೆ ಕಾರ್ಯಕ್ರಮವನ್ನು ರದ್ದುಗೊಳಿಸಿದೆ.

ದಕ್ಷಿಣ ಅಯೋಧ್ಯಾ ಮಂದಿರ ನಿರ್ಮಾಣಕ್ಕೆ ದಲಿತ ಸಂಘಟನೆಯವರು ವಿರೋಧ ವ್ಯಕ್ತಪಡಿಸಿ, ಶುಕ್ರವಾರ ಹಾರೋಹಳ್ಳಿಯಲ್ಲಿ ಪ್ರತಿಭಟಿಸಿದರು. ಅಲ್ಲದೆ, ಕಾರ್ಯಕ್ರಮ ನಡೆಯಲು ಬಿಡುವುದಿಲ್ಲ ಎಂದು ಎಚ್ಚರಿಸಿದರು. ಹೀಗಾಗಿ, ಆಯೋಜಕರು ಕಾರ್ಯಕ್ರಮ ರದ್ದುಗೊಳಿಸಿದ್ದಾರೆ.

ಹಾರೋಹಳ್ಳಿ ಗ್ರಾಮದ ಡಾ.ಬಿ.ಆರ್. ಅಂಬೇಡ್ಕರ್ ಯುವಕರ ಸಂಘಟನೆಗಳ ನೇತೃತ್ವದಲ್ಲಿ ಹಾರೋಹಳ್ಳಿ ರಸ್ತೆ ಮಾರ್ಗವಾಗಿ ಬುದ್ದ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ಮೂರ್ತಿಯೊಂದಿಗೆ ಮೆರವಣಿಗೆ ನಡೆಸಿ, ರಾಮನ ವಿಗ್ರಹ ಸ್ಥಾಪಿಸಿದ ಪಕ್ಕದ ಜಾಗದಲ್ಲಿಯೇ ಬುದ್ಧ ಮತ್ತು ಅಂಬೇಡ್ಕರ್ ಮೂರ್ತಿ ನಿಲ್ಲಿಸಿ ವಿರೋಧ ವ್ಯಕ್ತಪಡಿಸಿದರು.

ಈ ವೇಳೆ ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ಹಾರೋಹಳ್ಳಿ ಗ್ರಾಮದ ಇತಿಹಾಸವನ್ನು ಬದಲು ಮಾಡಬೇಕೆಂದು ಮನುವಾದಿಗಳು ಮುಂದಾಗಿದ್ದು, ಅಂಬೇಡ್ಕರ್ ಅನುಯಾಯಿಗಳು ಅದನ್ನು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದೇವೆ. ಹಾರೋಹಳ್ಳಿ ಗ್ರಾಮದಲ್ಲಿ ಬ್ರಾಹ್ಮಣಶಾಹಿಗಳು ಕೇಸರಿಕರಣ ಮಾಡಲು, ದಕ್ಷಿಣ ಮಂದಿರ ಕಟ್ಟಿ ಸೌಹಾರ್ದತೆಯ ಜೀವನವನ್ನು ಹಾಳು ಮಾಡುವ ಹುನ್ನಾರ ತಡೆದಿದ್ದೇವೆ ಎಂದರು.

ಹಾರೋಹಳ್ಳಿ ಸುರೇಶ್ ಮಾತನಾಡಿ, ಹಾರೋಹಳ್ಳಿ ಗ್ರಾಮದ ಜನರು ಸೌಹಾರ್ದತೆಯಿಂದ ಬದುಕುತ್ತಿದ್ದೇವೆ. ರಾಜಕೀಯ ಕುತಂತ್ರಕ್ಕೆ ನಮ್ಮ ಸಮುದಾಯವನ್ನು ಒಡೆಯುವ ಕೆಲಸವನ್ನು ಮಾಡುತ್ತಿದ್ದಾರೆ. ನಾವು ನಮ್ಮ ಗ್ರಾಮವನ್ನು ಯಾವುದೇ ಕಾರಣಕ್ಕೂ ಕೇಸರಿಕರಣ ಮಾಡುವುದಕ್ಕೂ ಬಿಡುವುದಿಲ್ಲ. ಈಗಾಗಲೇ ಕಲ್ಲು ಸಿಕ್ಕಿದ್ದ ಪಕ್ಕದ ಸ್ಥಳದಲ್ಲಿಯೇ ಬುದ್ಧ ಮಂದಿರ ನಿರ್ಮಾಣ ಮಾಡುವ ಕುರಿತು ಚರ್ಚಿಸಿದ್ದು, ಸ್ವಂತ ಜಮೀನನ್ನೇ ನೀಡುತ್ತೇವೆ ಎಂದು ಹೇಳಿದರು.

ಮುಖಂಡರಾದ ಹಾರೋಹಳ್ಳಿ ಸುರೇಶ್‌ ಕುಮಾರ್, ನಟರಾಜು, ಮಹದೇವ್, ದೀಪಕ್ ಕಿರಣ್, ತುಂಬಲ ರಾಮಣ್ಣ, ವಿಷ್ಣು, ಗುರುರಾಜ, ಅನಿಲ್ ಚಂದ್ರಣ್ಣ, ರಾಜೇಶ್, ಶಿವರಾಜ್, ಕಾನ್ಯ ರಾಜೇಶ್, ಸೋಮ, ದೇವ, ಸೂರೇಶ್, ಕಲ್ಲಹಳ್ಳಿ ಕುಮಾರ್ ಇದ್ದರು.

Read more Articles on