ಸಾರಾಂಶ
ಮಂಗಳೂರು: ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜತೆಗೆ ಕ್ರೀಡೆಯಲ್ಲೂ ಸಾಧನೆ ಮೆರೆದಾಗ ಪರಿಪೂರ್ಣವಾದ ವ್ಯಕ್ತಿತ್ವ ರೂಪಿಸಲು ಸಾಧ್ಯವಿದೆ. ಕ್ರೀಡೆಯಲ್ಲಿ ವಿಶೇಷ ಸಾಧನೆ ಸಾಧಿಸಿದವರಿಗೆ ನಾನಾ ಸರ್ಕಾರಿ ಇಲಾಖೆಯ ನೌಕರಿಯಲ್ಲಿ ಮೀಸಲಾತಿ ಇದೆ. ಇದನ್ನು ಬಳಸಿಕೊಳ್ಳುವ ವ್ಯವಸ್ಥೆಯಾಗಬೇಕು. ಎಂದು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್ ಹೇಳಿದರು.ಭಾನುವಾರ ನಗರದ ಮಂಗಳ ಕ್ರೀಡಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ, ಮೈ ಭಾರತ್ ದಕ್ಷಿಣ ಕನ್ನಡ, ಜಿಲ್ಲಾ ಯುವಜನ ಒಕ್ಕೂಟ ಹಾಗೂ ನಾನಾ ಸಂಘಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ 2025-26 ಉದ್ಘಾಟಿಸಿ ಮಾತನಾಡಿದರು.
ಕ್ರೀಡಾ ಜ್ಯೋತಿಯನ್ನು ಸ್ವೀಕರಿಸಿ ಮಾತನಾಡಿದ ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಕ್ರೀಡೆಯಿಂದ ದೈಹಿಕ, ಶಾರೀರಿಕ ಹಾಗೂ ಮಾನಸಿಕವಾಗಿಯೂ ಚಟುವಟಿಕೆಯಿಂದ ಇರಲು ಸಾಧ್ಯ ಎಂದರು.ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ದ.ಕ. ಜಿಲ್ಲಾ ಅಧ್ಯಕ್ಷ ಭರತ್ ಮುಂಡೋಡಿ ಮಾತನಾಡಿ, ಕ್ರೀಡಾಪಟುಗಳಿಗೆ ನಾನಾ ಇಲಾಖೆಯಲ್ಲಿ ಇರುವ ಶೇ.2 ರಷ್ಟುಮೀಸಲಾತಿ ಕಡ್ಡಾಯವಾಗಿ ಅನುಷ್ಠಾನಕ್ಕೆ ಬರಬೇಕು. ಈ ಮೂಲಕ ಮತ್ತಷ್ಟು ಕ್ರೀಡೆಯ ಜತೆಯಲ್ಲಿ ಕ್ರೀಡಾಪಟುಗಳಿಗೂ ಪ್ರೋತ್ಸಾಹ ಸಿಕ್ಕಿದಂತಾಗುತ್ತದೆ ಎಂದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರದೀಪ್ ಡಿಸೋಜಾ ಪ್ರಾಸ್ತಾವಿಕದಲ್ಲಿ, ಜಿಲ್ಲಾ ಮಟ್ಟದ ವಿಜೇತರು ಸೆ.೧೩ ಮತ್ತು ೧೪ ರಂದು ನಡೆಯುವ ವಿಭಾಗ ಮಟ್ಟದ ಕ್ರೀಡಾಕೂಟಕ್ಕೆ ಅಯ್ಕೆಯಾಗುತ್ತಾರೆ. ಅದರಲ್ಲಿ ವಿಜೇತರಾದವರು ಸೆ.೨೨ ರಿಂದ ೨೫ರ ವರೆಗೆ ಮೈಸೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಸ್ಪರ್ಧಿಸಲಿದ್ದಾರೆ ಎಂದರು.
ಹ್ಯಾಂಡ್ ಬಾಲ್ ಎಸೋಸಿಯೇಶನ್ ಅಧ್ಯಕ್ಷ ಧನರಾಜ್, ಬ್ಯಾಡ್ಮಿಂಟನ್ ಎಸೋಸಿಯೇಶನ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಫುಟ್ ಬಾಲ್ ಎಸೋಸಿಯೇಶನ್ ಅಧ್ಯಕ್ಷ ಡಿ.ಎಂ. ಅಸ್ಲಾಂ, ಪವರ್ ಲಿಫ್ಟಿಂಗ್ ಎಸೋಸಿಯೇಶನ್ ಅಧ್ಯಕ್ಷ ಉಮೇಶ್, ಅಥ್ಲೆಟಿಕ್ ಎಸೋಸಿಯೇಶನ್ ಉಪಾಧ್ಯಕ್ಷ ಕರುಣಾಕರ ಶೆಟ್ಟಿ, ಕಬಡ್ಡಿ ಎಸೋಸಿಯೇಶನ್ ಕಾರ್ಯದರ್ಶಿ ರತನ್ ಶೆಟ್ಟಿ, ವಾಲಿಬಾಲ್ ಎಸೋಸಿಯೇಶನ್ ಅಧ್ಯಕ್ಷ ಶಂಕರ್ ಶೆಟ್ಟಿ, ಮಂಗಳೂರು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಹೊಳ್ಳ ಮತ್ತಿತರರಿದ್ದರು.