ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತ್ಯಧಿಕ 41.4 ಡಿ.ಸೆ. ಉಷ್ಣಾಂಶ!

| Published : Mar 12 2025, 12:50 AM IST

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತ್ಯಧಿಕ 41.4 ಡಿ.ಸೆ. ಉಷ್ಣಾಂಶ!
Share this Article
  • FB
  • TW
  • Linkdin
  • Email

ಸಾರಾಂಶ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗಿನಿಂದ ಮಂಗಳವಾರ ಬೆಳಗ್ಗಿನವರೆಗೆ ರಾಜ್ಯದಲ್ಲೇ ಅತ್ಯಧಿಕ ಉಷ್ಣಾಂಶ 41.4 ಡಿ.ಸೆಲ್ಸಿಯಸ್‌ ದಾಖಲಾಗಿದೆ. ಜಿಲ್ಲೆಯ ಮಟ್ಟಿಗೆ ಈ ವರ್ಷ ಮೊದಲ ಬಾರಿಗೆ ದಾಖಲಾದ ಅತ್ಯಧಿಕ ಉಷ್ಣಾಂಶ ಇದು. ಮುಂದಿನ ಎರಡು ದಿನಗಳ ಕಾಲ ಭಾರೀ ತಾಪಮಾನದ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಕಳೆದ ಕೆಲವು ದಿನಗಳಿಂದ ಹೀಟ್‌ ವೇವ್‌ನಿಂದ ಕಂಗೆಟ್ಟಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗಿನಿಂದ ಮಂಗಳವಾರ ಬೆಳಗ್ಗಿನವರೆಗೆ ರಾಜ್ಯದಲ್ಲೇ ಅತ್ಯಧಿಕ ಉಷ್ಣಾಂಶ 41.4 ಡಿ.ಸೆಲ್ಸಿಯಸ್‌ ದಾಖಲಾಗಿದೆ. ಜಿಲ್ಲೆಯ ಮಟ್ಟಿಗೆ ಈ ವರ್ಷ ಮೊದಲ ಬಾರಿಗೆ ದಾಖಲಾದ ಅತ್ಯಧಿಕ ಉಷ್ಣಾಂಶ ಇದು. ಮುಂದಿನ ಎರಡು ದಿನಗಳ ಕಾಲ ಭಾರೀ ತಾಪಮಾನದ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಮಾರ್ಚ್ 10ರ ಬೆಳಗ್ಗೆ 8.30ರಿಂದ ಮಾ.11ರ ಬೆಳಗ್ಗೆ 8.30ರವರೆಗೆ ಸುಳ್ಯ ಹೋಬಳಿಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು 41.4 ಡಿ.ಸೆ. ತಾಪಮಾನ ದಾಖಲಾಗಿದೆ. ಜಿಲ್ಲೆಯ ಇತರ ಪ್ರದೇಶಗಳಲ್ಲೂ 38 ಡಿ.ಸೆ. ಮತ್ತು ಅದಕ್ಕಿಂತ ಹೆಚ್ಚಿನ ಗರಿಷ್ಠ ತಾಪಮಾನ ಇತ್ತು.

ಎಲ್ಲೆಲ್ಲಿ ಎಷ್ಟೆಷ್ಟು?:

ಪಾಣೆಮಂಗಳೂರಿನಲ್ಲಿ 40.5 ಡಿ.ಸೆ., ಮೂಡುಬಿದಿರೆಯಲ್ಲಿ 39 ಡಿ.ಸೆ., ಕೊಕ್ಕಡದಲ್ಲಿ 40.3 ಡಿ.ಸೆ., ಪುತ್ತೂರಿನಲ್ಲಿ 40.2 ಡಿ.ಸೆ., ಬಂಟ್ವಾಳ 38 ಡಿ.ಸೆ., ಬೆಳ್ತಂಗಡಿ 38.8 ಡಿ.ಸೆ., ಕಡಬ 40.4 ಡಿ.ಸೆ., ವಿಟ್ಲ 38.6 ಡಿ.ಸೆ., ಉಪ್ಪಿನಂಗಡಿ 40 ಡಿ.ಸೆ., ಸಂಪಾಜೆಯಲ್ಲಿ 40.7 ಡಿ.ಸೆ. ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಬುಧವಾರ, ಗುರುವಾರ ತಾಪಮಾನದಲ್ಲಿ ತೀವ್ರ ವ್ಯತ್ಯಾಸ ಇರದು ಎಂದು ಹವಾಮಾನ ಇಲಾಖೆ ತಿಳಿಸಿದೆ.

ಜಿಲ್ಲಾಧಿಕಾರಿ ಸಲಹೆ:

ಗರಿಷ್ಠ ಉಷ್ಣಾಂಶ ದಾಖಲಾದ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಜಿಲ್ಲೆಯ ಜನರಿಗೆ ಅನೇಕ ಸಲಹೆಗಳನ್ನು ನೀಡಿದ್ದಾರೆ.

ಮಧ್ಯಾಹ್ನ 12ರಿಂದ 3 ಗಂಟೆಯವರೆಗೆ ಜನರು ಸುಡುವ ಬಿಸಿಲಿನಲ್ಲಿ ಹೊರಗೆ ಹೋಗಬಾರದು, ಬಾಯಾರಿಕೆ ಇಲ್ಲದಿದ್ದರೂ ಸಾಕಷ್ಟು ನೀರು ಕುಡಿಯಬೇಕು. ಹಳೆಯ ಆಹಾರ ಮತ್ತು ಹೆಚ್ಚಿನ ಪ್ರೊಟೀನ್ ಹೊಂದಿರುವ ಆಹಾರವನ್ನು ತಪ್ಪಿಸಿ. ಮಕ್ಕಳು ಮತ್ತು ಸಾಕುಪ್ರಾಣಿಗಳನ್ನು ನಿಲ್ಲಿಸಿದ (ಪಾರ್ಕ್‌ ಮಾಡಿದ) ವಾಹನಗಳಲ್ಲಿ ಬಿಡಬೇಡಿ. ಯಾವುದೇ ಅಸ್ವಸ್ಥತೆ ಉಂಟಾದರೆ ತಕ್ಷಣ ವೈದ್ಯರನ್ನು ಭೇಟಿಯಾಗಿ. ಒಆರ್‌ಎಸ್, ಎಳನೀರು, ನಿಂಬೆ ರಸ ಮತ್ತು ಮಜ್ಜಿಗೆ ಕುಡಿಯಬೇಕು. ಸಾಕು ಪ್ರಾಣಿಗಳನ್ನು ನೆರಳಿನಲ್ಲಿ ಕಟ್ಟಬೇಕು ಮತ್ತು ಅವುಗಳಿಗೆ ಸಾಕಷ್ಟು ನೀರು ನೀಡಬೇಕು. ರೈತರು ಹೊಲದಲ್ಲಿ ಕೆಲಸ ಮಾಡುವಾಗ ನೇರ ಬಿಸಿಲಿಗೆ ಒಡ್ಡದಂತೆ ಟೋಪಿ ಅಥವಾ ಛತ್ರಿಗಳನ್ನು ಬಳಕೆ ಮಾಡಬೇಕು. ಅದೇ ರೀತಿ ಬಿಸಿಲಿನಿಂದ ಮನೆಗೆ ಬಂದ ತಕ್ಷಣ ಅತೀ ತಂಪಾದ ನೀರು ಕುಡಿಯಬಾರದು ಹಾಗೂ ಎಸಿ, ಕೂಲರ್‌ಗಳನ್ನು ಬಂದ ಕೂಡಲೆ ಬಳಸುವುದನ್ನು ತಪ್ಪಿಸಬೇಕು ಎಂದು ಸಲಹೆ ನೀಡಿದ್ದಾರೆ.

----------ಸನ್‌ ಸ್ಟ್ರೋಕ್‌ ಆದರೆ ಏನು ಮಾಡಬೇಕು?

ವ್ಯಕ್ತಿಯನ್ನು ತಂಪಾದ ಸ್ಥಳದಲ್ಲಿ ನೆರಳಿನ ಕೆಳಗೆ ಇರಿಸಿ. ಒದ್ದೆ ಬಟ್ಟೆಯಿಂದ ಆಗಾಗ ದೇಹವನ್ನು ತೊಳೆಯಿರಿ. ತಲೆ ಮೇಲೆ ಸಾಮಾನ್ಯ ತಾಪಮಾನದ ನೀರು ಸುರಿಯಿರಿ. ಒಆರ್‌ಎಸ್‌, ಲಿಂಬೆ ರಸ, ಮಜ್ಜಿಗೆ ಇತ್ಯಾದಿ ನೀಡಿ ಉಪಚರಿಸಿ. ತಕ್ಷಣ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸಲು ಸಲಹೆ ನೀಡಲಾಗಿದೆ.

--------ತುರ್ತು ಸೇವೆಗೆ ಟೋಲ್‌ ಫ್ರೀ ಸಂಖ್ಯೆ

ದ.ಕ. ಜಿಲ್ಲೆಯ ಸಾರ್ವಜನಿಕರಿಗೆ ಈ ಕುರಿತು ತುರ್ತು ಸೇವೆಯ ಅಗತ್ಯವಿದ್ದರೆ ಟೋಲ್‌ ಫ್ರೀ ಸಂಖ್ಯೆ 1077 ಗೆ ಕರೆ ಮಾಡಬಹುದು. ಅಥವಾ ದೂ.ಸಂಖ್ಯೆ 0824- 2442590 ಸಂಪರ್ಕಿಸಲು ತಿಳಿಸಲಾಗಿದೆ.