400 ಕಾರುಗಳಲ್ಲಿ ಬಿಜೆಪಿ ಧರ್ಮಸ್ಥಳ ಚಲೋ

| N/A | Published : Aug 17 2025, 11:43 AM IST

Dharmasthala

ಸಾರಾಂಶ

ಧರ್ಮಸ್ಥಳ ಗ್ರಾಮದಲ್ಲಿ ಅನಾಮಿಕ ವ್ಯಕ್ತಿ ನೂರಾರು ಶವಗಳನ್ನು ಹೂಳಿರುವುದಾಗಿ ಹೇಳಿಕೆ ನೀಡಿರುವುದು, ಈ ಸಂಬಂಧ ಎಸ್‌ಐಟಿ ಉತ್ಖನನ ನಡೆಸುತ್ತಿರುವ ಬೆನ್ನಲ್ಲೇ ಶ್ರೀ ಕ್ಷೇತ್ರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ನಡೆಸಲಾಗುತ್ತಿದೆ.

ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದಲ್ಲಿ ಅನಾಮಿಕ ವ್ಯಕ್ತಿ ನೂರಾರು ಶವಗಳನ್ನು ಹೂಳಿರುವುದಾಗಿ ಹೇಳಿಕೆ ನೀಡಿರುವುದು, ಈ ಸಂಬಂಧ ಎಸ್‌ಐಟಿ ಉತ್ಖನನ ನಡೆಸುತ್ತಿರುವ ಬೆನ್ನಲ್ಲೇ ಶ್ರೀ ಕ್ಷೇತ್ರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಧರ್ಮಸ್ಥಳದೊಂದಿಗೆ ನಾವು ಅಭಿಯಾನವನ್ನು ಬಿಜೆಪಿ ಆರಂಭಿಸಿದೆ.

ಧರ್ಮಸ್ಥಳ ಕ್ಷೇತ್ರದ ಬಗ್ಗೆ ನಡೆಯುತ್ತಿರುವ ಅಪಪ್ರಚಾರ ಮತ್ತು ವದಂತಿಗಳನ್ನು ಖಂಡಿಸಿ, ಬೆಂಗಳೂರಿನ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ನೇತೃತ್ವದಲ್ಲಿ ಶನಿವಾರ 400 ಕಾರುಗಳಲ್ಲಿ ಎರಡು ಸಾವಿರ ಮಂದಿ ಧರ್ಮಸ್ಥಳದ ಭಕ್ತರು ಹಾಗೂ ಅಭಿಮಾನಿಗಳು ‘ಧರ್ಮಸ್ಥಳ ಚಲೋ ಅಭಿಯಾನ’ದಲ್ಲಿ ಆಗಮಿಸಿದರು. ಧರ್ಮಸ್ಥಳಕ್ಕೆ ಹೊರಟ ಬಿಜೆಪಿ ಕಾರ್ಯಕರ್ತರು ಮತ್ತು ಭಕ್ತರಿಗೆ ಹಾಸನ ಟೋಲ್‌ನಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು. ರಸ್ತೆ ಉದ್ದಕ್ಕೂ ಕಾರುಗಳ ಸಂಚಾರ ವಿಭಿನ್ನ ನೋಟವನ್ನು ಸೃಷ್ಟಿಸಿತ್ತು. ಶನಿವಾರ ಬೆಳಗ್ಗೆ 6 ಗಂಟೆಗೆ ಯಲಹಂಕ ಟೋಲ್‌ನಿಂದ ಹೊರಟ ಜಾಥಾ ಅಪರಾಹ್ನ 3 ಗಂಟೆಗೆ ಧರ್ಮಸ್ಥಳ ತಲುಪಿತು.

‘ಅನ್ನಪೂರ್ಣ’ ಛತ್ರದಲ್ಲಿ ಅವರು ಭೋಜನ ಸ್ವೀಕರಿಸಿದರು. ಬಳಿಕ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಸಂಜೆ ಏಳು ಗಂಟೆಗೆ ದೇವಸ್ಥಾನಕ್ಕೆ ಹೋಗಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಎಲ್ಲರೂ ನ್ಯಾಯಕ್ಕಾಗಿ ಸಾಮೂಹಿಕವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ದೇವಸ್ಥಾನ ಆವರಣದಲ್ಲಿ ಎಲ್ಲರೂ ಸೇರಿ ಸಾಮೂಹಿಕ ಸಂಕಲ್ಪದೊಂದಿಗೆ ನ್ಯಾಯಕ್ಕಾಗಿ ಪ್ರಾರ್ಥನೆ ಸಲ್ಲಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಎಸ್.ಆರ್.ವಿಶ್ವನಾಥ್, ಎಸ್.ಡಿ.ಪಿ.ಐ ಹಾಗೂ ಎಡಪಂಥೀಯರ ಕೈವಾಡ ಹಾಗೂ ಷಡ್ಯಂತ್ರದಿಂದ ಎಸ್.ಐ.ಟಿ ಸಮಿತಿ ರಚಿಸಲಾಗಿದೆ. ಸರ್ವಧರ್ಮೀಯರ ಶ್ರದ್ಧಾಕೇಂದ್ರವಾದ ಪವಿತ್ರ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಆಧಾರ ರಹಿತ ಆರೋಪ ಹಾಗೂ ಸುಳ್ಳು ವದಂತಿ ಪಸರಿಸಲಾಗುತ್ತಿದೆ. ಯೂಟ್ಯೂಬರ್‌ಗಳು ಮಾಡುವ ಅಪಪ್ರಚಾರದ ಬಗ್ಗೆ ಎಲ್ಲರಿಗೂ ಭಯ ಹಾಗೂ ಆತಂಕವಿದ್ದು, ತಪ್ಪಿತಸ್ಥರ ಮೇಲೆ ಸುಮೊಟೋ ಪ್ರಕರಣ ದಾಖಲಿಸಿ ಉಗ್ರ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.

ಇಂದು ವಿಜಯೇಂದ್ರ ಸೇರಿ

ಬಿಜೆಪಿ ಪ್ರಮುಖರು ಧರ್ಮಸ್ಥಳಕ್ಕೆ?

ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ ವಿಜಯೇಂದ್ರ ಹಾಗೂ ಹಲವು ಮಂದಿ ಶಾಸಕರು ಮತ್ತು ಸಂಸದರು ಭಾನುವಾರ ಧರ್ಮಸ್ಥಳಕ್ಕೆ ಆಗಮಿಸುವರು ಎಂದು ಮೂಲಗಳಿಂದ ತಿಳಿದು ಬಂದಿದೆ.

Read more Articles on