ಧರ್ಮಸ್ಥಳ ಗ್ರಾಮ ಅಸ್ಥಿ ಉತ್ಖನನ ಸಸ್ಪೆನ್ಸ್‌

| N/A | Published : Aug 17 2025, 01:46 AM IST / Updated: Aug 17 2025, 09:23 AM IST

Dharmasthala Drone GPR Found

ಸಾರಾಂಶ

ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವ ಹೂತು ಹಾಕಿದ್ದಾಗಿ ಆರೋಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಯಾವುದೇ ಶೋಧ, ಉತ್ಖನನ ನಡೆದಿಲ್ಲ. ಭಾನುವಾರ ತಂಡಕ್ಕೆ ರಜಾದಿನವಾಗಿದ್ದು ಶೋಧ ನಡೆಯುವುದಿಲ್ಲ

  ಬೆಳ್ತಂಗಡಿ :  ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವ ಹೂತು ಹಾಕಿದ್ದಾಗಿ ಆರೋಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಯಾವುದೇ ಶೋಧ, ಉತ್ಖನನ ನಡೆದಿಲ್ಲ. ಭಾನುವಾರ ತಂಡಕ್ಕೆ ರಜಾದಿನವಾಗಿದ್ದು ಶೋಧ ನಡೆಯುವುದಿಲ್ಲ. ಜೊತೆಗೆ ಸೋಮವಾರ ಉತ್ಖನನ ಕಾರ್ಯ ಮುಂದುವರಿಕೆ ಕುರಿತು ಎಸ್‌ಐಟಿ ಯಾವುದೇ ಮಾಹಿತಿ ನೀಡಿಲ್ಲ. ಇದು ಉತ್ಖನನಕ್ಕೆ ಬ್ರೇಕ್ ಬಿದ್ದಿದೆಯೇ ಎಂಬ ಕುತೂಹಲಕ್ಕೆ ಕಾರಣವಾಗಿದೆ.ಈ ನಡುವೆ ಅಸ್ಥಿ ಪತ್ತೆಗಾಗಿ ಗುಂಡಿ ಅಗೆದ ಕಾರ್ಮಿಕರನ್ನು ಎಸ್‌ಐಟಿ ಅಧಿಕಾರಿಗಳು ಠಾಣೆಗೆ ಕರೆಸಿಕೊಂಡು ಅವರಿಂದ ದಾಖಲೆ ಸಂಗ್ರಹಿಸಿದ್ದಾರೆ. ಜೊತೆಗೆ ದೂರುದಾರನನ್ನೂ 4 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಾಹಿತಿ ಸಂಗ್ರಹ:

ಅನಾಮಿಕ ದೂರುದಾರದ ಆರೋಪದ ಹಿನ್ನೆಲೆಯಲ್ಲಿ ಧರ್ಮಸ್ಥಳ ಗ್ರಾಮದಲ್ಲಿ ಎಸ್ಐಟಿ ತಂಡ ಕಳೆದ 20 ದಿನಗಳಿಂದ ತನಿಖೆ, ಶೋಧ ಕಾರ್ಯ ನಡೆಸಿದ ಎಸ್‌ಐಟಿ, ಶೋಧ ಕಾರ್ಯದಲ್ಲಿ ಸಹಕರಿಸಿದ ಕಾರ್ಮಿಕರನ್ನು ಕೂಡ ಠಾಣೆಗೆ ಕರೆಸಿ ಅವರಿಂದ ಮಾಹಿತಿ ಸಂಗ್ರಹಿಸಿದೆ. ಜೊತೆಗೆ ದೂರುದಾರನನ್ನು ಶನಿವಾರ ಸುಮಾರು ನಾಲ್ಕು ತಾಸಿಗೂ ಅಧಿಕ ಕಾಲ ವಿಚಾರಣೆ ನಡೆಸಲಾಗಿದೆ. ಅನಾಮಿಕ ದೂರುದಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ತಲೆಬುರುಡೆ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದ್ದು ಕೆಲವೊಂದು ವಿಚಾರಗಳಿಗೆ ದೂರುದಾರ ಗೊಂದಲದ ಹೇಳಿಕೆಗಳನ್ನು ನೀಡುತ್ತಿದ್ದಾನೆ. ಇದರ ಜೊತೆಗೆ ಶೋಧ ಕಾರ್ಯ ನಡೆದ ಬೊಳಿಯಾರಿನ ಸ್ಥಳ ಸಂಖ್ಯೆ 15ಕ್ಕೆ ಸಂಬಂಧಪಟ್ಟಂತೆ ಇತರ ಕೆಲವರನ್ನು ವಿಚಾರಣೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ.

ಮತ್ತೊಂದು ದೂರು:

ಈ ಹಿಂದೆ ಧರ್ಮಸ್ಥಳ ಗ್ರಾಮದಲ್ಲಿ 13-15 ವರ್ಷದ ಬಾಲಕಿಯ ಶವವನ್ನು ಯಾವುದೇ ಮಹಜರು ನಡೆಸದೆ ವಿಲೇವಾರಿ ಮಾಡಲಾಗಿದೆ ಎಂದು ದೂರು ನೀಡಿದ್ದ ಇಚ್ಲಂಪಾಡಿಯ ಜಯಂತ ಟಿ. ಶನಿವಾರ ಮತ್ತೆ ಎಸ್ಐಟಿ ಠಾಣೆಗೆ ಆಗಮಿಸಿದ್ದರು. ಈ ಬಾರಿ, 15 ವರ್ಷದ ಹಿಂದೆ ಗ್ರಾಮದ ವಸತಿಗೃಹ ಒಂದರಲ್ಲಿ 35-40 ವರ್ಷದ ಮಹಿಳೆಯ ಕೊಲೆಯಾಗಿದ್ದು ಪ್ರಕರಣವನ್ನು ತರಾತುರಿಯಲ್ಲಿ ಮುಗಿಸಲಾಗಿದೆ .ಇದು ಕೊಲೆ ಮತ್ತು ಸಾಕ್ಷಿ ನಾಶದ ಪ್ರಕರಣವಾಗಿದೆ ಎಂದು ಆರೋಪಿಸಿದ್ದಾರೆ.

ಇದಲ್ಲದೆ ಇಲ್ಲಿ ಹಲವು ಮಹಿಳೆಯರ ಸಾವಿನ ಕುರಿತು ತಿಳಿದು ಬಂದಿದೆ. ಈ ಬಗ್ಗೆ ಮಾಹಿತಿ ಸಂಗ್ರಹ ಕಾರ್ಯದಲ್ಲಿ ತೊಡಗಿದ್ದೇನೆ. ಇಂತಹ ಪ್ರಕರಣಗಳನ್ನು ಮುಚ್ಚಿ ಹಾಕಿರುವ ಪೊಲೀಸ್ ಅಧಿಕಾರಿಗಳ ವಿರುದ್ಧವೂ ಕ್ರಮಗೊಳ್ಳಬೇಕು ಎಂದು ತಿಳಿಸಿದ ಅವರು ಸೋಮವಾರ ಎಸ್‌ಐಟಿ ಅಧಿಕಾರಿಗಳು ಠಾಣೆಗೆ ಬರುವಂತೆ ಹೇಳಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

 -ದೂರುದಾರನ ತಕ್ಷಣ ಬಂಧಿಸಿ ತನಿಖೆಗೆ ಒಳಪಡಿಸಿ: ಜೋಶಿ

 ಹುಬ್ಬಳ್ಳಿ : ಧರ್ಮಸ್ಥಳ ಪ್ರಕರಣದಲ್ಲಿ ರಾಜ್ಯ ಸರ್ಕಾರದಲ್ಲಿ ಇದ್ದವರಿಂದಲೇ ಷಡ್ಯಂತ್ರ ನಡೆದಿದ್ದು, ಹಿಂದೂಗಳ ಭಾವನೆಗಳ ಜತೆ ಸರ್ಕಾರ ಚೆಲ್ಲಾಟ ಆಡುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದ ಮಾಸ್ಕ್‌ಧಾರಿ ಅನಾಮಿಕನನ್ನು ತಕ್ಷಣ ಬಂಧಿಸುವ ಜತೆಗೆ ಕೂಡಲೇ ಎಸ್‌ಐಟಿ ತನಿಖೆಯ ಕುರಿತು ಅಧಿವೇಶನದಲ್ಲಿ ಮಧ್ಯಂತರ ವರದಿ ಮಂಡಿಸಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಒತ್ತಾಯಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಕರಣಕ್ಕೆ ಸಂಬಂಧಿಸಿ ಡಿಸಿಎಂ ಡಿ.ಕೆ.ಶಿವಕುಮಾರ ಅವರೇ ಷಡ್ಯಂತ್ರ ನಡೆದಿದೆ ಎಂದು ಹೇಳಿದ್ದಾರೆ. ಹಾಗಾದರೆ ಇದರಲ್ಲಿ ಗೃಹ ಇಲಾಖೆಯ ವೈಫಲ್ಯ ಇದೆಯೇ? ಅಥವಾ ಖುದ್ದು ಸಿಎಂ ನಿಂತು ತನಿಖೆ ಮಾಡಿಸುತ್ತಿದ್ದಾರೆಂದು ಡಿಕೆಶಿ ಹೇಳುತ್ತಿದ್ದಾರೆಯೇ ಎಂದು ಕುಟುಕಿದರು.ಧರ್ಮಸ್ಥಳ ಪ್ರಕರಣದಲ್ಲಿ ಬಹುಸಂಖ್ಯಾತ ಹಿಂದೂಗಳ ಭಾವನೆ, ಧಾರ್ಮಿಕ ಅಸ್ಮಿತೆಗೆ ವ್ಯವಸ್ಥಿತವಾಗಿ ಧಕ್ಕೆ ತರುವ ಉದ್ದೇಶದಿಂದಲೇ ಎಸ್‌ಐಟಿ ತನಿಖೆ ನಡೆಸಲಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಮತ್ತು ಎಡಪಂಥೀಯ ವಿಚಾರಧಾರೆ ವ್ಯಕ್ತಿಗಳಿಂದ ಇಂತಹ ಷಡ್ಯಂತ್ರ ನಡೆದಿದ್ದು, ಉದ್ದೇಶ ಪೂರ್ವಕವಾಗಿ ಹೀಗೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಸರ್ಕಾರದ ಮತಬ್ಯಾಂಕ್ ಪಾಲಿಟಿಕ್ಸ್‌ಗೆ ಇದೊಂದು ಉದಾಹರಣೆ. ಪೊಲೀಸರು ಇದುವರೆಗೆ ಅನಾಮಿಕನನ್ನು ಏಕೆ ಬಂಧಿಸಿಲ್ಲ?.‌ ಅವನ ಪೂರ್ವಾಪರ ತನಿಖೆ ನಡೆಸಬೇಕು. ಅಲ್ಲದೇ ಆತನ ಜಾತಿ, ಧರ್ಮ ವಿಚಾರಿಸಬೇಕು. ಆತ ಬೇರೆ ಧರ್ಮದವನಾಗಿದ್ದರೆ ಇನ್ನೊಂದು ಧರ್ಮಕ್ಕೆ ಧಕ್ಕೆ ತಂದಂತಲ್ಲವೇ ಎಂದು ಕಿಡಿಕಾರಿದ್ದಾರೆ.ಡಿಕೆಶಿ ಅಸಹಾಯಕ:

ಸರ್ಕಾರದಲ್ಲಿ ಎಡಪಂಥೀಯ ವಿಚಾರಧಾರೆಯ ಪ್ರಮಾಣ ಹೆಚ್ಚಾಗಿದ್ದು, ಈ ವಿಚಾರದಲ್ಲಿ ಡಿಕೆಶಿ ಅಸಹಾಯಕರಾಗಿದ್ದಾರೆ. ಪ್ರಕರಣದ ಕುರಿತು ಧ್ವನಿ ಎತ್ತಿರುವ ಕೇರಳ ಸರ್ಕಾರಕ್ಕೂ ಇದಕ್ಕೆ ಏನು ಸಂಬಂಧ? ಮಾಸ್ಕ್‌ಧಾರಿ ಹೇಳಿದ ಪ್ರಕಾರ ಆತ ಗುರುತಿಸಿದ ಜಾಗದಲ್ಲಿ ಏನೂ ಸಿಕ್ಕಿಲ್ಲ. ಆತ ನೂರಾರು ಹೆಣ ಹೂತಿರುವುದಾಗಿ ಹೇಳುತ್ತಿದ್ದಾನೆ. ಹಾಗಿದ್ದರೆ ಅವನನ್ನು ಇಲ್ಲಿಯವರೆಗೆ ಏಕೆ ಬಂಧಿಸಿಲ್ಲ? ತರಾತುರಿಯಲ್ಲಿ ಎಸ್‌ಐಟಿ ರಚನೆ ಮಾಡಿದ್ದು ಯಾಕೆ? ಇದೇ ರೀತಿ ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಭೆ ವಿಚಾರದಲ್ಲಿ ಯಾಕೆ ಎಸ್‌ಐಟಿ ರಚನೆ ಮಾಡಲಿಲ್ಲ? ನಿಮ್ಮ ಸರ್ಕಾರದಲ್ಲಿ ಹಿಂದೂ ಭಾವನೆಗಳಿಗೆ ಬೆಲೆ ಇಲ್ಲವೇ ಎಂದು ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Read more Articles on