ದೂರುದಾರ ಕೊಟ್ಟ ಸಾಕ್ಷ್ಯಗಳ ಬಗ್ಗೆಯೇ ಎಸ್‌ಐಟಿ ಉತ್ಖನನ

| N/A | Published : Aug 17 2025, 01:41 AM IST

ದೂರುದಾರ ಕೊಟ್ಟ ಸಾಕ್ಷ್ಯಗಳ ಬಗ್ಗೆಯೇ ಎಸ್‌ಐಟಿ ಉತ್ಖನನ
Share this Article
  • FB
  • TW
  • Linkdin
  • Email

ಸಾರಾಂಶ

ಧರ್ಮಸ್ಥಳದಲ್ಲಿ ಅನಧಿಕೃತವಾಗಿ ಅಪರಿಚಿತ ಮೃತದೇಹಗಳ ಹೂತ ಪ್ರಕರಣ ಸಂಬಂಧ ದೂರುದಾರ ನೀಡಿದ ‘ತಲೆಬುರುಡೆ’ ಕುರಿತ ಅನುಮಾನ ನಿವಾರಿಸಲು ಮಣ್ಣಿನ ಪರೀಕ್ಷೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ಮುಂದಾಗಿದೆ ಎಂದು ತಿಳಿದು ಬಂದಿದೆ.

  ಬೆಂಗಳೂರು :  ಧರ್ಮಸ್ಥಳದಲ್ಲಿ ಅನಧಿಕೃತವಾಗಿ ಅಪರಿಚಿತ ಮೃತದೇಹಗಳ ಹೂತ ಪ್ರಕರಣ ಸಂಬಂಧ ದೂರುದಾರ ನೀಡಿದ ‘ತಲೆಬುರುಡೆ’ ಕುರಿತ ಅನುಮಾನ ನಿವಾರಿಸಲು ಮಣ್ಣಿನ ಪರೀಕ್ಷೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ಮುಂದಾಗಿದೆ ಎಂದು ತಿಳಿದು ಬಂದಿದೆ.

ತಾನು ಧರ್ಮಸ್ಥಳ ಸುತ್ತಮುತ್ತ ನೂರಾರು ಮೃತದೇಹಗಳನ್ನು ಹೂತು ಹಾಕಿದ್ದೇನೆ ಎಂದು ಆರೋಪಕ್ಕೆ ಪೂರಕವಾಗಿ ತಲೆಬರುಡೆಯನ್ನು ದೂರುದಾರ ಸಲ್ಲಿಸಿದ್ದ. ಇದೀಗ ಆತ ತಂದುಕೊಟ್ಟಿರುವ ತಲೆಬರುಡೆ ಧರ್ಮಸ್ಥಳದಲ್ಲೇ ಹೂತು ಹಾಕಿದ್ದೇ ಅಥವಾ ಬೇರೆಡೆಯಿಂದ ತಂದಿರುವುದೇ ಎಂಬ ಶಂಕಾಸ್ಪದ ಪ್ರಶ್ನೆಗಳು ಹುಟ್ಟಿಕೊಂಡಿವೆ. ಈ ಹಿನ್ನೆಲೆಯಲ್ಲಿ ತಲೆಬುರುಡೆಗೆ ಅಂಟಿರುವ ಮಣ್ಣು ಹಾಗೂ ಧರ್ಮಸ್ಥಳದ ಮಣ್ಣಿನ ಪರೀಕ್ಷೆ ಮೂಲಕ ಶಂಕೆ ನಿವಾರಿಸಲು ಎಸ್‌ಐಟಿ ಮುಂದಾಗಿದೆ.

ಈ ಮಣ್ಣಿನ ಪರೀಕ್ಷೆಯಲ್ಲಿ ಸಾಮ್ಯತೆ ಕಂಡು ಬಂದರೆ ದೂರುದಾರನ ಆರೋಪಕ್ಕೆ ಪುರಾವೆ ಸಿಗಲಿದೆ. ಇಲ್ಲದೇ ಹೋದರೆ ಆರೋಪದ ಹಿಂದೆ ಸಂಚು ನಡೆದಿದೆ ಎಂಬ ಆಪಾದನೆಗೆ ಮತ್ತಷ್ಟು ಬಲ ಬಂದಂತಾಗಲಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ವರ್ಷದ ಹಿಂದಿನ ಮೃತದೇಹ:

ಇನ್ನು ದೂರುದಾರನ ಮಾಹಿತಿ ಮೇರೆಗೆ ಗುಂಡಿ ಅಗೆಯುವಾಗ ಪಾಯಿಂಟ್‌ 14ರ ಸಮೀಪ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿತ್ತು. ಈ ಮೃತದೇಹ ವರ್ಷದ ಹಿಂದೆ ಮೃತಪಟ್ಟ ವ್ಯಕ್ತಿಯದ್ದಾಗಿದೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ತಜ್ಞರು ಖಚಿತಪಡಿಸಿದ್ದಾರೆ. ಹೀಗಾಗಿ ವರ್ಷದ ಹಿಂದೆ ಧರ್ಮಸ್ಥಳದಲ್ಲಿ ಮೃತದೇಹ ಹೂತಿರುವ ಬಗ್ಗೆ ದೂರುದಾರನಿಗೆ ಹೇಗೆ ತಿಳಿಯಿತು? ಅಲ್ಲದೆ, ತಾನು 2014ರಲ್ಲೇ ಧರ್ಮಸ್ಥಳ ತೊರೆದಿದ್ದಾಗಿ ನ್ಯಾಯಾಲಯದಲ್ಲೇ ಆತ ಹೇಳಿಕೆ ಕೊಟ್ಟಿದ್ದಾನೆ. ಹೀಗಾಗಿ 11 ವರ್ಷಗಳ ಹಿಂದೆ ಧರ್ಮಸ್ಥಳ ಬಿಟ್ಟಿದ್ದವನಿಗೆ ವರ್ಷದ ಹಿಂದೆ ಮೃತಪಟ್ಟ ವ್ಯಕ್ತಿಯ ಮಣ್ಣು ಮಾಡಿದ್ದು ಹೇಗೆ ತಿಳಿಯಿತು ಎಂಬ ಪ್ರಶ್ನೆ ಎಸ್‌ಐಟಿ ತಂಡದ ಮುಂದೆ ಬಂದಿದೆ. ಇದರ ಆಧಾರದ ಮೇರೆಗೆ ದೂರುದಾರನ ಸಂಪರ್ಕ ಜಾಲ ಶೋಧಿಸಲು ಸಹ ಎಸ್‌ಐಟಿ ಚಿಂತಿಸಿದೆ ಎನ್ನಲಾಗಿದೆ.

ಎಸ್‌ಐಟಿ ಚಕ್ರವ್ಯೂಹದಲ್ಲಿ ದೂರುದಾರ:

ಈ ಎರಡು ಪ್ರಮುಖ ಸಂಗತಿಗಳಿಂದ ದೂರುದಾರನೇ ಎಸ್ಐಟಿ ತನಿಖಾ ಚಕ್ರವೂಹ್ಯದಲ್ಲಿ ಸಿಲುಕುವಂತೆ ಮಾಡಿದೆ. ತಾನು ಮಾಡಿದ್ದ ಆರೋಪಗಳಿಗೆ ಪೂರಕವಾಗಿ ಆತ ಸಾಕ್ಷ್ಯ ಕಲ್ಪಿಸದೆ ಹೋದರೆ ಕಾನೂನಾತ್ಮಕವಾಗಿ ದೂರುದಾರ ಸಂಕಷ್ಟಕ್ಕೆ ತುತ್ತಾಗಬೇಕಾಗುತ್ತದೆ. ಈಗಾಗಲೇ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಉಸ್ತುವಾರಿ ಸಚಿವ ದಿನೇಶ್ ಗೂಂಡುರಾವ್ ಸಹ ದೂರುದಾರ ಸುಳ್ಳು ಹೇಳಿದ್ದರೆ ತನಿಖೆ ನಡೆಸುವುದಾಗಿ ಪದೇ ಪದೆ ಹೇಳಿದ್ದಾರೆ. ಹೀಗಾಗಿ ದೂರುದಾರನಿಗೂ ಎಸ್‌ಐಟಿ ತನಿಖೆಯ ಬಿಸಿ ತಟ್ಟಲಿದೆ ಎನ್ನಲಾಗಿದೆ.

ಸಿಡಿಆರ್‌, ಹಣಕಾಸು ಮೂಲ ಶೋಧ:

ಷಡ್ಯಂತ್ರದ ಆರೋಪಗಳ ಹಿನ್ನೆಲೆಯಲ್ಲಿ ದೂರುದಾರನ ಪೂರ್ವಾಪರ ಮಾಹಿತಿ ಶೋಧನೆಗೆ ಎಸ್‌ಐಟಿ ಮುಂದಾಗಿದೆ. ಧರ್ಮಸ್ಥಳದಲ್ಲಿ ಆತ ಕೆಲಸ ಮಾಡಿದ್ದ ಕಾಲಾವಧಿ ಹಾಗೂ ಅಲ್ಲಿಂದ ಬೇರೆಡೆ ನೆಲೆ ನಿಂತಿರುವ ಕುರಿತು ಸಹ ವಿವರ ಕಲೆ ಹಾಕುತ್ತಿದ್ದಾರೆ. ಇನ್ನು ದೂರುದಾರನ ಸ್ನೇಹ ವಲಯ ಶೋಧನೆಗೆ ಮೊಬೈಲ್ ಕರೆಗಳ ವಿವರ (ಸಿಡಿಆರ್‌) ಹಾಗೂ ಹಣಕಾಸು ಮೂಲದ ಬಗ್ಗೆ ಸಹ ಕೆದಕಲು ಎಸ್‌ಐಟಿ ಯೋಜಿಸಿದೆ ಎನ್ನಲಾಗಿದೆ.

Read more Articles on