ಸಿಬ್ಬಂದಿಗೆ ಉಚಿತ ‘ವಿಮಾನಯಾನ’ ಮೂಲಕ ಕಾರ್ಮಿಕರ ದಿನಾಚರಣೆ !

| N/A | Published : May 02 2025, 08:54 AM IST

ahmedabad to mumbai cheapest flight ticket

ಸಾರಾಂಶ

ಕಾರ್ಮಿಕರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ಇಲ್ಲೊಬ್ಬರು ಉದ್ಯಮಿ ತನ್ನ ಸಂಸ್ಥೆಯ ಕಾರ್ಮಿಕರನ್ನು ವಿಮಾನ ಹತ್ತಿಸಿ ಖುಷಿಪಡಿಸಿದ್ದಾರೆ.

ಮೌನೇಶ ವಿಶ್ವಕರ್ಮ

 ಪುತ್ತೂರು : ಕಾರ್ಮಿಕರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ಇಲ್ಲೊಬ್ಬರು ಉದ್ಯಮಿ ತನ್ನ ಸಂಸ್ಥೆಯ ಕಾರ್ಮಿಕರನ್ನು ವಿಮಾನ ಹತ್ತಿಸಿ ಖುಷಿಪಡಿಸಿದ್ದಾರೆ. ಇಂಥ ಹೃದಯ ವೈಶಾಲ್ಯ ತೋರಿದವರು ಪುತ್ತೂರಿನ ಎಸ್.ಆರ್.ಕೆ. ಲ್ಯಾಡರ್‌ನ ಮಾಲಿಕ ಕೇಶವ ಅಮೈ. ಕಾರ್ಮಿಕ ದಿನಾಚರಣೆಯ ಹೆಸರಿನಲ್ಲಿ ತಮ್ಮ ಸಂಸ್ಥೆಯ ಕಾರ್ಮಿಕರೆಲ್ಲರನ್ನು ವಿಮಾನದಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ಪ್ರವಾಸಕ್ಕೆ ಕರೆದೊಯ್ದಿದ್ದಾರೆ.

ದೃಷ್ಟಿಹೀನತೆ ಸಮಸ್ಯೆಗೆ ತುತ್ತಾಗಿರುವ ಕೇಶವ ಅಮೈ ಅನೇಕ ಬಾರಿ ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ತಮ್ಮ ಸಂಸ್ಥೆಯ ಕಾರ್ಮಿಕರಿಗೂ ವಿಮಾನಯಾನದ ಭಾಗ್ಯ ಕರುಣಿಸುವ ಆಸೆ ಇವರದು. ಪ್ರತಿ ವರ್ಷ ಕೇಶವ ಅವರ ಸಂಸ್ಥೆಯು ಹಲವು ಹೊಸತನವನ್ನು ಪರಿಚಯಿಸುತ್ತಿದೆ. ಕಳೆದ ವರ್ಷ ರಜತ ಸಂಭ್ರಮ ಆಚರಿಸಿ ಕಾರ್ಮಿಕರಿಗೆ ಕ್ರೀಡಾಕೂಟ ಏರ್ಪಡಿಸಿತ್ತು. ಈ ಬಾರಿ ಕಾರ್ಮಿಕರ ದಿನದ ಅಂಗವಾಗಿ ಕಾರ್ಮಿಕರಿಗೆ ‘ವಿಮಾನಯಾನ’ ಪ್ರವಾಸದ ಯೋಜನೆ ರೂಪಿಸಿದೆ.

ಗುರುವಾರ ತಮ್ಮ ಸಂಸ್ಥೆಯ 51 ಕಾರ್ಮಿಕ ಸಿಬ್ಬಂದಿಯೊಂದಿಗೆ ತಾವೂ ಬೆಂಗಳೂರಿಗೆ ವಿಮಾನದಲ್ಲಿ ಪ್ರವಾಸ ತೆರಳಿದರು. ಬೆಳಗ್ಗೆ ಪುತ್ತೂರಿನಿಂದ ಮಂಗಳೂರಿಗೆ ಬಸ್‌ನಲ್ಲಿ ತೆರಳಿ ಅಲ್ಲಿಂದ ವಿಮಾನದ ಮೂಲಕ ಬೆಂಗಳೂರಿಗೆ ತೆರಳಿದ್ದಾರೆ. ಅಲ್ಲಿ ಸಂಸ್ಥೆಯ ಕಾರ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಇತರ ಫ್ಯಾಕ್ಟರಿಗಳಲ್ಲಿ ಮಾಹಿತಿ ಕಾರ್ಯಕ್ರಮ, ಸಂಜೆ ಸಂಗೀತ ರಸಮಂಜರಿ, ಕ್ಯಾಂಪ್ ಫೈಯರ್ ಮೂಲಕ ಸಂಭ್ರಮಿಸಿ ,ಮೇ 2ಕ್ಕೆ ಮೈಸೂರಿಗೆ ತೆರಳಿ, ಅಲ್ಲಿ ಪ್ರವಾಸಿತಾಣಗಳನ್ನು ಸುತ್ತಾಡಿ, ರಾತ್ರಿ ಮರಳಿ ಪುತ್ತೂರಿಗೆ ಬರುವ ಮೂಲಕ ಎರಡು ದಿನದ ಪ್ರವಾಸ ಪೂರ್ಣಗೊಳ್ಳಲಿದೆ.

ಸಿಬ್ಬಂದಿ ಸಂತೋಷವೇ ಪ್ರಧಾನ:

ನನ್ನ ಎಸ್‌ಆರ್‌ಕೆಯ ಕಾರ್ಮಿಕರು ಸಂಸ್ಥೆಯ ಸದಸ್ಯರು. ಅವರು ಸೀಸನ್‌ ಸಂದರ್ಭದಲ್ಲಿ ಉತ್ತಮ ಕೆಲಸ ನಿರ್ವಹಿಸಿದ್ದಾರೆ. ಹಗಲು-ರಾತ್ರಿ ಕೆಲಸ ಮಾಡಿ ಗ್ರಾಹಕರ ಬೇಡಿಕೆ ಈಡೇರಿಸಿದ್ದಾರೆ. ಅಂತಹ ಸದಸ್ಯರಿಗೆ ನನ್ನಿಂದ ಏನಾದರೂ ಮಾಡಬೇಕು ಎಂದುಕೊಂಡು ಹಿರಿಯ ಸಿಬ್ಬಂದಿ ಎದುರು ನಾಲ್ಕೈದು ಆಯ್ಕೆಗಳನ್ನು ಮುಂದಿಟ್ಟೆ. ಅವರು ಪ್ರವಾಸ ಆರಿಸಿಕೊಂಡರು. ಆಗ ನಾನು ವಿಮಾನ ಪ್ರವಾಸ ಮಾಡೋಣ ಎಂದೆ, ಅದಕ್ಕೆ ಅವರು ಒಪ್ಪಿಕೊಂಡರು. ಸಿಬ್ಬಂದಿ ಸಂತೋಷವೇ ನನ್ನ ಸಂತೋಷ.

- ಕೇಶವ ಅಮೈ, ಮಾಲೀಕರು ಎಸ್‌ಆರ್‌ಕೆ ಲ್ಯಾಡರ್‌ ಪುತ್ತೂರು