ಸಾರಾಂಶ
ವಿಮಾನಯಾನ ಸೇವೆಯಲ್ಲಿ ಕನ್ನಡ ಭಾಷೆಗೆ ಆದ್ಯತೆ ನೀಡಲು ಮುಂದಾಗಿರುವ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಸಂಸ್ಥೆ (ಬಿಐಎಎಲ್) ತನ್ನ ಅಂತರ್ಜಾಲದಲ್ಲಿ ಆಂಗ್ಲ ಭಾಷೆಯ ಜತೆಗೆ ಕನ್ನಡ ಭಾಷೆಯ ಆಯ್ಕೆಯನ್ನು ಹೊಸದಾಗಿ ಪರಿಚಯಿಸಿದೆ.
ಬೆಂಗಳೂರು : ವಿಮಾನಯಾನ ಸೇವೆಯಲ್ಲಿ ಕನ್ನಡ ಭಾಷೆಗೆ ಆದ್ಯತೆ ನೀಡಲು ಮುಂದಾಗಿರುವ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಸಂಸ್ಥೆ (ಬಿಐಎಎಲ್) ತನ್ನ ಅಂತರ್ಜಾಲದಲ್ಲಿ ಆಂಗ್ಲ ಭಾಷೆಯ ಜತೆಗೆ ಕನ್ನಡ ಭಾಷೆಯ ಆಯ್ಕೆಯನ್ನು ಹೊಸದಾಗಿ ಪರಿಚಯಿಸಿದೆ.
ಈವರೆಗೆ ತನ್ನ ಅಂತರ್ಜಾಲದಲ್ಲಿ ಕನ್ನಡ ಭಾಷೆಯ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದ ಬಿಐಎಎಲ್ ಇದೀಗ ಕನ್ನಡ ಭಾಷೆಯಲ್ಲೂ ಮಾಹಿತಿ ದೊರೆಯುವಂತೆ ಮಾಡಿದೆ. ಸ್ಥಳೀಯ ಭಾಷೆಯಲ್ಲಿ ಸಂವಹನ ನಡೆಸುವ ಮೂಲಕ ವಿಮಾನಯಾನ ಪ್ರಯಾಣಿಕರಿಗೆ ಉತ್ತಮ ಸೇವೆ ನೀಡುವ ಉದ್ದೇಶ ಬಿಐಎಎಲ್ ಹೊಂದಿದೆ. ಅದರಂತೆ ವಿಮಾನ ಹಾರಾಟದ ಮಾಹಿತಿ, ನಿರ್ಗಮನ, ಆಗಮನ ಮತ್ತು ವಿಳಂಬಗಳ ಕುರಿತು ಮಾಹಿತಿಗಳನ್ನು ಕನ್ನಡದಲ್ಲಿಯೇ ನೀಡಲಾಗುತ್ತದೆ. ಜತೆಗೆ ವಿಮಾನಗಳನ್ನು ಕಾಯ್ದಿರಿಸಲು, ವಿಮಾನ ನಿಲ್ದಾಣಕ್ಕೆ ತೆರಳಲು ಅಥವಾ ಅಲ್ಲಿಂದ ಬರಲು ಸಾರಿಗೆ ಆಯ್ಕೆ, ಭದ್ರತಾ ಕಾರ್ಯವಿಧಾನ, ಬ್ಯಾಗೇಜ್ ನಿಯಮಗಳು ಸೇರಿದಂತೆ ಇನ್ನಿತರ ಮಾಹಿತಿಗಳನ್ನು ಕನ್ನಡದಲ್ಲಿಯೇ ನೀಡುವ ವ್ಯವಸ್ಥೆ ಮಾಡಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಬಿಐಎಎಲ್‌ನ ವ್ಯವಸ್ಥಾಪಕ ನಿರ್ದೇಶಕ ಹರಿ ಮಾರಾರ್, ಸ್ಥಳೀಯ ಭಾಷೆಯಲ್ಲಿಯೇ ವಿಮಾನ ನಿಲ್ದಾಣದ ಮಾಹಿತಿ ನೀಡಲು ಅಂತರ್ಜಾಲದಲ್ಲಿ ಕನ್ನಡ ಭಾಷಾ ಆಯ್ಕೆಯನ್ನು ಪರಿಚಯಿಸಲಾಗಿದೆ. ಆಮೂಲಕ ನಮ್ಮ ಭಾಷಾ ಪರಂಪರೆಯ ಶ್ರೀಮಂತಿಕೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.
ಉತ್ತಮ ಸೇವೆ ಸಾಧ್ಯ
ಕನ್ನಡ ಭಾಷೆಯ ಪರಿಚಯದಿಂದ ಪ್ರಯಾಣಿಕರು ಮತ್ತಷ್ಟು ಉತ್ತಮವಾಗಿ ವಿಮಾನಯಾನ ಸೇವೆ ಪಡೆಯಲು ಸಾಧ್ಯವಾಗಲಿದೆ. ಈಗಾಗಲೇ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡವನ್ನು ಅಳವಡಿಸಿ ಮಾಹಿತಿ ಪ್ರದರ್ಶಿಸಲಾಗುತ್ತಿದೆ. ಇದೀಗ ಅಂತರ್ಜಾಲದಲ್ಲೂ ಕನ್ನಡಕ್ಕೆ ಆದ್ಯತೆ ನೀಡಲಾಗಿದೆ.
-ಹರೀಶ್ ಮಾರಾರ್, ಎಂಡಿ, ಬಿಐಎಎಲ್