ಮಾಧ್ಯಮ ಮತ್ತು ಸಾಹಿತ್ಯ ಈಗ ವಾಸ್ತವ ಜಗತ್ತಿನಿಂದ ಡಿಜಿಟಲ್‌ ಯುಗಕ್ಕೆ ಪರಿವರ್ತನೆಗೊಂಡಿದೆ : ರವಿ ಹೆಗಡೆ

| Published : Jan 12 2025, 09:59 AM IST

Ravi hegade

ಸಾರಾಂಶ

ಮಾಧ್ಯಮ ಮತ್ತು ಸಾಹಿತ್ಯ ಈಗ ವಾಸ್ತವ ಜಗತ್ತಿನಿಂದ ಡಿಜಿಟಲ್‌ ಯುಗಕ್ಕೆ ಪರಿವರ್ತನೆಗೊಂಡಿದೆ ಎಂದು ‘ಕನ್ನಡಪ್ರಭ’ ಮತ್ತು ‘ಸುವರ್ಣ ನ್ಯೂಸ್‌’ ಪ್ರಧಾನ ಸಂಪಾದಕ ರವಿ ಹೆಗಡೆ ಅಭಿಪ್ರಾಯಪಟ್ಟಿದ್ದಾರೆ.

 ಮಂಗಳೂರು :  ಮಾಧ್ಯಮ ಮತ್ತು ಸಾಹಿತ್ಯ ಈಗ ವಾಸ್ತವ ಜಗತ್ತಿನಿಂದ ಡಿಜಿಟಲ್‌ ಯುಗಕ್ಕೆ ಪರಿವರ್ತನೆಗೊಂಡಿದೆ ಎಂದು ‘ಕನ್ನಡಪ್ರಭ’ ಮತ್ತು ‘ಸುವರ್ಣ ನ್ಯೂಸ್‌’ ಪ್ರಧಾನ ಸಂಪಾದಕ ರವಿ ಹೆಗಡೆ ಅಭಿಪ್ರಾಯಪಟ್ಟಿದ್ದಾರೆ.

ಮಂಗಳೂರಿನ ‘ಲಿಟ್‌ ಫೆಸ್ಟ್‌-2025’ರಲ್ಲಿ ‘ಪತ್ರಿಕೋದ್ಯಮ ಮತ್ತು ಸಾಹಿತ್ಯ: ಒಂದು ಹರಟೆ’ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು. ಮುದ್ರಣದಿಂದ ಟೆಲಿವಿಷನ್‌ ಆಗಿ ಈಗ ಡಿಜಿಟಲ್‌ಗೆ ಮಾಧ್ಯಮ ರೂಪಾಂತರಗೊಂಡಿರುವುದನ್ನು ಪ್ರಸ್ತಾಪಿಸಿದ ರವಿ ಹೆಗಡೆ, ಪತ್ರಿಕೆಗಳಲ್ಲಿ ದೈನಿಕ ಧಾರಾವಾಹಿ, ಕಾದಂಬರಿಗಳ ಪ್ರಕಟಣೆ ಈಗ ಅಪ್ರಸ್ತುತ ಎನಿಸಿದೆ. ಕತೆ, ಕವನಗಳನ್ನು ಪ್ರಕಟಿಸಿದರೂ ಅದನ್ನು ಡಿಜಿಟಲ್‌ ಮಾಧ್ಯಮಗಳಲ್ಲಿ ಪೋಸ್ಟ್‌ ಮಾಡುತ್ತಾರೆ. ಇವುಗಳನ್ನೆಲ್ಲ ಟೆಲಿವಿಷನ್‌ಗಳಲ್ಲಿ, ಈಗ ಡಿಜಿಟಲ್‌ ಮಾಧ್ಯಮಗಳಲ್ಲಿ ನೋಡಲು ಸಾಧ್ಯವಿದೆ. ಪತ್ರಿಕೆಯ ಓದುಗರ ಮಾನಸಿಕತೆಯೂ ಬದಲಾಗಿದೆ. ಪತ್ರಿಕೆಯಲ್ಲಿ ಈಗ ಸ್ಟಾಕ್‌ ಮಾರ್ಕೆಟ್‌ ಸುದ್ದಿಯ ಅಗತ್ಯವಿಲ್ಲ. ಟಿವಿಯ ಸ್ಕ್ರೋಲಿಂಗ್‌ನಲ್ಲಿ ಬಂದು ಬಿಡುತ್ತದೆ. ಕಾರ್ಟೂನು ಕೂಡ ಸ್ಥಗಿತಗೊಂಡಿದೆ. ಇವುಗಳನ್ನೆಲ್ಲ ಮೊಬೈಲ್‌ ಆಕ್ರಮಿಸಿಕೊಂಡಿದೆ. ಎಲ್ಲವೂ ಹೊಸ ಟ್ರೆಂಡ್‌ಗೆ ಬದಲಾಗುತ್ತಿದೆ. ಮೀಡಿಯಾ ಈಗ ಕಾಮಿಡಿ ಆಗಿಹೋಗಿದೆ ಎಂದು ಅಭಿಪ್ರಾಯಪಟ್ಟರು.

ಬದಲಾಗುತ್ತಿರುವ ಓದುವ ಶೈಲಿ:

ಸಾಹಿತ್ಯಕ್ಕಾಗಿ ಪತ್ರಿಕೆಯನ್ನು ಡಿಜಿಟಲ್‌ ಮಾಧ್ಯಮದಲ್ಲಿ ರೂಪಿಸಲಾಗಿದೆ. ಸಾಹಿತ್ಯದಲ್ಲೂ ಓದುವ ಶೈಲಿ ಬದಲಾಗುತ್ತಿದೆ. ಇದು ಸಾಹಿತ್ಯದಲ್ಲಿ ಹೊಸ ಭರವಸೆಯನ್ನು ಸೃಷ್ಟಿಸಿದೆ. ಓದುಗರ ಮಾನಸಿಕತೆ ಬದಲಾದಂತೆ ಬರಹಗಾರರು ಪೆನ್ನಿನ ಬದಲು ಕಂಪ್ಯೂಟರ್‌ ಕೀ ಬೋರ್ಡ್‌ ಬಳಸುತ್ತಿದ್ದಾರೆ. ಓದುವಿಕೆಗೆ ಮುದ್ರಣ ವಿಧಾನ ಬೇಕು, ಹಾಗೆಂದು ಬರಹಕ್ಕೆ ಡಿಜಿಟಲ್‌ ಮಾಧ್ಯಮವೇ ಆಗಬೇಕು. ಪುಸ್ತಕದ ಓದುವಿಕೆಯ ಭಾವನೆ ಡಿಜಿಟಲ್‌ ಓದುವಿಕೆಯಲ್ಲಿ ಸಿಗಲು ಸಾಧ್ಯವಿಲ್ಲ. ಈಗ ಎಫ್‌ಎಂ ಯುಗಾಂತ್ಯವಾಗುತ್ತಿದ್ದು, ಮೊಬೈಲ್‌ನಲ್ಲೇ ಮ್ಯೂಸಿಕ್‌, ಸಾಹಿತ್ಯಗಳು ಹೇರಳವಾಗಿ ಸಿಗುತ್ತಿವೆ. ಹೊಸ ತಲೆಮಾರಿನ ಪ್ರಕಾಶಕರು ಬಂದ ಮೇಲೆ ಪುಸ್ತಕಗಳಿಗೆ ಹೊಸ ಅವಕಾಶ ಒದಗಿ ಬಂದಿದೆ. ಸಣ್ಣ ಗಾತ್ರದ ಪುಸ್ತಕಗಳ ಪ್ರಕಟಣೆಯಿಂದಾಗಿ ಓದುವ ಸಂಸ್ಕೃತಿ ಶುರುವಾಗಿದೆ ಎಂದರು.

ಎಐ ಪ್ರವೇಶ:

ಸಾಮಾಜಿಕ ಜಾಲತಾಣ, ಡಿಜಿಟಲ್‌ ಮಾಧ್ಯಮಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ) ಪ್ರವೇಶ ಮಾಡಿದೆ. ಚಾಟ್‌ ಜಿಪಿಟಿ ಕೂಡ ಶೇಕ್ಸ್‌ಫಿಯರ್‌ ಮಾದರಿಯ ಸಾಹಿತ್ಯವನ್ನು ಕ್ಷಣಮಾತ್ರದಲ್ಲಿ ಬರೆದುಕೊಡಬಲ್ಲದು. ಸದ್ಯ ಕನ್ನಡದಲ್ಲಿ ಚಾಟ್‌ ಜಿಪಿಟಿ ಪಳಗಿಲ್ಲ. ಜಾಹೀರಾತು ಸಹಿತ ಎಲ್ಲ ಕ್ಷೇತ್ರಗಳಲ್ಲೂ ಎಐ ತಂತ್ರಜ್ಞಾನ ಹೇರಳವಾಗಿ ಬಳಕೆಯಾಗುತ್ತಿದೆ. ಯಾವುದೋ ಗ್ರಾಮೀಣ ಚಿತ್ರಣವನ್ನು ಎಐ ಕೊಡಬಲ್ಲದು, ಆದರೆ, ಅದು ನೈಜ ಗ್ರಾಮೀಣತೆಯನ್ನು ಕೊಡಲು ಸಾಧ್ಯವಿಲ್ಲ. ಭವಿಷ್ಯದ ದಿನಗಳಲ್ಲಿ ಮನುಷ್ಯನ ಬುದ್ಧಿಮತ್ತೆಯನ್ನು ಮೀರಿಸುವಂತೆ ಎಐ ಪ್ರಬುದ್ಧವಾಗಬಲ್ಲದು. ಹೊಸತನಕ್ಕೆ ತೆರೆದುಕೊಳ್ಳದಿದ್ದರೆ ಉಳಿಗಾಲವಿಲ್ಲ ಎಂದು ರವಿ ಹೆಗಡೆ ಹೇಳಿದರು.

ಮಾಧ್ಯಮದಲ್ಲಿ ಸುದ್ದಿ ವಸ್ತುನಿಷ್ಠವಾಗಿರುತ್ತದೆ. ಅದರಲ್ಲಿ ಭಾವನೆ ಇರುವುದಿಲ್ಲ. ಎಐ ಪ್ರವೇಶಿಸಿದ ಬಳಿಕ ಈಗ ಶೇ.40ರಷ್ಟು ಸಿಬ್ಬಂದಿಯ ಅಗತ್ಯತೆ ಇಲ್ಲವಾಗಿದೆ. ಸುದ್ದಿ ಮನೆಯ ಕೆಲಸವನ್ನು ಚಾಟ್‌ ಜಿಪಿಟಿ ಮಾಡಿಕೊಡಬಲ್ಲದು. ಆಂಗ್ಲ ಪತ್ರಿಕೆಗಳಿಗೆ ಎಐ ಪ್ರವೇಶ ಹೊಡೆತ ನೀಡಿದೆ ಎಂದರು.

ದರ ಏರಿಕೆಯ ಸವಾಲು, ಸಂದಿಗ್ಧತೆ:

2020ರಲ್ಲಿ ಪತ್ರಿಕೆಗಳ ಒಟ್ಟು ಪ್ರಸರಣ 35 ಲಕ್ಷದಷ್ಟಿತ್ತು. ಕೊರೋನಾ ಬಳಿಕ ಇದು 18 ಲಕ್ಷವರೆಗೆ ಗಣನೀಯ ಇಳಿಕೆಯಾಗಿದೆ. ಹಿಂದೆ ₹2 ಇದ್ದ ಪತ್ರಿಕೆ ದರ ಈಗ ₹5 ರವರೆಗೆ ಏರಿಕೆಯಾಗಿದೆ. ಇದೇ ವೇಳೆ ಟೀ, ಕಾಫಿ ದರ ₹30ಕ್ಕೆ ತಲುಪಿದೆ. 50 ಪೈಸೆ ಜಾಸ್ತಿ ಮಾಡಿದರೆ ಪತ್ರಿಕೆ ಪ್ರಸರಣವೇ ಕಡಿಮೆಯಾಗುತ್ತದೆ. ಅಂಥದ್ದರಲ್ಲಿ ದರ ಏರಿಕೆ ಮಾಡುವುದೇ ಒಂದು ಸವಾಲು ಆಗಿದೆ. ಅದೇ ರೀತಿ ಚಾನೆಲ್‌ಗಳನ್ನು ಚಂದಾದಾರಿಕೆಗೆ ಒಳಪಡಿಸಿ ಒಳ್ಳೆಯ ಗುಣಮಟ್ಟದ ಹೂರಣ ನೀಡಲೂ ಟಿಆರ್‌ಪಿ ಧಾವಂತದಲ್ಲಿ ಸಾಧ್ಯವಾಗುತ್ತಿಲ್ಲ. ಕನಿಷ್ಠ ಪೈಸೆ ಚಂದಾ ಇರಿಸಿದರೂ ಉಚಿತ ಚಾನೆಲ್‌ ಲಭ್ಯ ಇರುವಾಗ ಪೇ ಚಾನೆಲನ್ನು ಕೇಳುವವರೇ ಇಲ್ಲದಂತಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮಾಧ್ಯಮ ಕ್ಷೇತ್ರ ಇದೆ ಎಂದು ರವಿ ಹೆಗಡೆ ಹೇಳಿದರು.

ಓದುಗರ ಸಂಖ್ಯೆ ಕ್ಷೀಣ: ಹರಟೆ ಕಟ್ಟೆಯಲ್ಲಿ ಅಭಿಪ್ರಾಯ ಮುಂದುವರಿಸಿದ ‘ಕನ್ನಡಪ್ರಭ’ ಪುರವಣಿ ಸಂಪಾದಕ ಜೋಗಿ, ಸಾಹಿತ್ಯ ಕ್ಷೇತ್ರದಲ್ಲಿ ಪುಸ್ತಕಗಳನ್ನು ಖರೀದಿಸುವ ಸಾಮರ್ಥ್ಯ ಜಾಸ್ತಿಯಾದರೂ ಓದಿ ನೋಡುವವರು ಹಾಗೂ ಓದುವವರ ಸಂಖ್ಯೆ ಕಡಿಮೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಮುದ್ರಣ ಮಾಧ್ಯಮದಲ್ಲಿ ಸಾಹಿತ್ಯಗಳನ್ನು ಎಡಿಟ್‌ ಮಾಡಬೇಕಿತ್ತು. ಈಗ ಡಿಜಿಟಲ್‌ ಮಾಧ್ಯಮದಲ್ಲಿ ಅಂತಹ ತಾಪತ್ರಯ ಇಲ್ಲ. ಇ-ಪತ್ರಿಕೆಯನ್ನು ಹಳ್ಳಿ ಹಳ್ಳಿಗೂ ತಲುಪಿಸಲು ಸಾಧ್ಯ. ಡಿಜಿಟಲ್‌ನಲ್ಲಿ ಮುದ್ರಿತ ಸಾಹಿತ್ಯವನ್ನು ಮುದ್ರಣ ಮಾಡಿ ಪಡೆದುಕೊಳ್ಳಲು ಸಾಧ್ಯ ಎಂದರು.

ಒಳ್ಳೆಯ ವಿಚಾರ ಬೇಕಾದರೆ ದೂರದರ್ಶನ ನೋಡುತ್ತೇವೆ. ಯೂಟ್ಯೂಬ್‌ಗಳಲ್ಲಿ ರೋಚಕತೆಗೆ ಮಾರುಹೋಗುತ್ತೇವೆ. ಎಐ ಬಂದ ಮೇಲೆ ಯೂಟ್ಯೂಬ್‌ ನೋಡಿದಷ್ಟು ಅದುವೇ ಫೀಡ್‌ಬ್ಯಾಕ್‌ ತಂದುಕೊಡುತ್ತದೆ. ಇದಕ್ಕೆ ಕಡಿವಾಣ ಹಾಕುವವರೇ ಇಲ್ಲದಾಗಿದೆ. ಪತ್ರಕರ್ತರಿಗೆ ಹಾಗೂ ಲೇಖಕರಿಗೆ ಏನು ಬರೆದರೂ ಅದನ್ನು ಮೊದಲೇ ಯಾರೋ ಬರೆದಿದ್ದಾರೆ ಎನ್ನುವುದೇ ದೊಡ್ಡ ಸವಾಲು ಆಗಿದೆ. ಸಾಹಿತ್ಯದಲ್ಲಿ ಸರಿಯಾದ ವಿಮರ್ಶೆ, ಒಳನೋಟಗಳನ್ನು ಕಾಣುತ್ತಿಲ್ಲ. ವೈಎನ್‌ಕೆ, ಟಿ.ಜೆ.ಜಾರ್ಜ್‌, ಅಮೂರ ಇವರೆಲ್ಲ ವಿಮರ್ಶೆ, ಒಳನೋಟಗಳನ್ನು ಹೇಳುತ್ತಿದ್ದರು. ಅಂಥವರು ಈಗ ಇಲ್ಲ. ಪ್ರಸಕ್ತ ತಂತ್ರಜ್ಞಾನ ಎಲ್ಲದರಲ್ಲೂ ಒಂದು ಹೆಜ್ಜೆ ಮುಂದೆ ಇದೆ. ಇಂಥದ್ದರಲ್ಲಿ ನಾವು ಅಪ್‌ಡೇಟ್‌ ಆಗದೆ ಸಿಕ್ಕಿಹಾಕಿಕೊಂಡಿದ್ದೇವೆ ಎಂದರು.

ಸಿನಿಮಾಗಳಲ್ಲಿ ಬೇಕಾದಷ್ಟು ಕ್ಲೈಮ್ಯಾಕ್ಸ್‌ನ್ನು ಎಐ ನೀಡುತ್ತದೆ. ವ್ಯಾಸ ಭಾರತವನ್ನು ಓದಿ ಅದನ್ನು ಎಐ ಪುನರಾವರ್ತಿಸಬಲ್ಲದು. ಆದರೆ, ಅದನ್ನು ಷಟ್ಪದಿಗಳಲ್ಲಿ ಬರೆಯಲು ಲಿಪಿಕಾರರೇ ಬೇಕು. ಎಐ ತಂತ್ರಜ್ಞಾನವನ್ನು ಅರಿತುಕೊಂಡರೆ ಇಂದಿನ ದಿನಗಳಲ್ಲಿ ಮುಂದುವರಿಯಲು ಸಾಧ್ಯವಿದೆ ಎಂದರು.

ಯುವ ಮನಸ್ಸುಗಳು ರಾಷ್ಟ್ರಹಿತಕ್ಕೆ ಹಚ್ಚಿಕೊಳ್ಳಬೇಕು

ಸಾಹಿತ್ಯ ಉತ್ಸವಗಳು ಹೊಸ ಪೀಳಿಗೆಗೆ ಪ್ರೇರಣೆಯಾಗಬೇಕು, ಯುವ ಮನಸ್ಸುಗಳು ರಾಷ್ಟ್ರಹಿತಕ್ಕೆ ಹಚ್ಚಿಕೊಳ್ಳಬೇಕು ಎಂದು ಸರಸ್ವತಿ ಸಮ್ಮಾನ್‌ ಪುರಸ್ಕೃತ ಹಿರಿಯ ಸಾಹಿತಿ ಡಾ.ಎಸ್‌.ಎಲ್‌.ಭೈರಪ್ಪ ಆಶಿಸಿದ್ದಾರೆ.

ಮಂಗಳೂರಿನ ಟಿಎಂಎ ಪೈ ಅಂತಾರಾಷ್ಟ್ರೀಯ ಸಭಾಂಗಣದಲ್ಲಿ ಬೆಂಗಳೂರಿನ ಮಿಥಿಕ್‌ ಸೊಸೈಟಿ ಹಾಗೂ ಭಾರತ್‌ ಫೌಂಡೇಷನ್‌ ಆಶ್ರಯದಲ್ಲಿ ಆಯೋಜಿಸಲಾಗಿರುವ ಎರಡು ದಿನಗಳ ‘ಲಿಟ್‌ ಫೆಸ್ಟ್‌-2025’ನ್ನು ದೀಪ ಬೆಳಗಿಸಿ ಚಾಲನೆ ನೀಡಿ ಅವರು ಮಾತನಾಡಿದರು.

2017ರಲ್ಲಿ ಮೊದಲ ಬಾರಿಗೆ ಈ ಉತ್ಸವದಲ್ಲಿ ಭಾಗಿಯಾಗಿದ್ದನ್ನು ಸ್ಮರಿಸಿದ ಡಾ। ಭೈರಪ್ಪ, ದಕ್ಷಿಣ ಕನ್ನಡ ಜಿಲ್ಲೆ ಎಲ್ಲ ಕ್ಷೇತ್ರಗಳಲ್ಲಿ ದೇಶಕ್ಕೆ ಮಾದರಿಯಾಗಿದೆ. ಈ ಉತ್ಸವದಲ್ಲಿ ದೇಶದಾದ್ಯಂತದ ಸಾಧಕರನ್ನು ಆಹ್ವಾನಿಸಿ, ವಿವಿಧ ವೇದಿಕೆಗಳ ಮೂಲಕ ಚರ್ಚೆ ಮಂಟಪಗಳನ್ನು ಏರ್ಪಡಿಸುತ್ತಿರುವುದು ಪ್ರಶಂಸನೀಯ ಎಂದರು.

ಇಂತಹ ಉತ್ಸವದಲ್ಲಿ ಚರ್ಚಿಸಲ್ಪಟ್ಟ ವಿಷಯಗಳು ಬೇಕಾದವರಿಗೆ ತಲುಪುತ್ತಿವೆಯೆ?, ನೀವು ನಿರೀಕ್ಷಿಸಿರುವ ಪರಿಣಾಮ ಸಾಧಿಸುತ್ತಿವೆಯೆ? ಎಂದು ಪ್ರಶ್ನಿಸಿದ ಭೈರಪ್ಪ, ಈ ಪ್ರಶ್ನೆಗಳಿಗೆ ಸಮರ್ಥ ಉತ್ತರ ನೀಡುವ ಆತ್ಮವಿಶ್ವಾಸ ಅತ್ಯಗತ್ಯ ಎಂದರು.

ಸಾಹಿತ್ಯ ಉತ್ಸವ ಯಾಂತ್ರಿಕತೆಗೆ ಸಿಲುಕಿದರೆ ಜನತೆಗೆ ತಲುಪಬೇಕಾದ್ದನ್ನು ತಲುಪಿಸಲು, ಸಮಾಜಕ್ಕೆ ಹೊಸತನ್ನು ನೀಡಲು ಸಾಧ್ಯವಾಗದು ಎಂದ ಭೈರಪ್ಪ, ಈ ಉತ್ಸವ ವರ್ಷದಿಂದ ವರ್ಷಕ್ಕೆ ಹೊಸತನವನ್ನು ಉಳಿಸಿಕೊಂಡು ತನ್ನ ಗುರಿ ಸಾಧಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಮಿಥಿಕ್‌ ಸೊಸೈಟಿ ಗೌರವ ಕಾರ್ಯದರ್ಶಿ ಡಾ.ರವಿ ಪ್ರಾಸ್ತಾವಿಕವಾಗಿ ಮಾತನಾಡಿ, ಮಂಗಳೂರು ಸಾಹಿತ್ಯ ಉತ್ಸವವನ್ನು ದೇಶದ ಇತರ ಸಾಹಿತ್ಯ ಉತ್ಸವಗಳಿಗಿಂತ ವಿಭಿನ್ನವಾಗಿ ರೂಪಿಸಲಾಗುತ್ತಿದೆ. ಇಲ್ಲಿ ಚರ್ಚೆಯಾಗುವ ವಿಚಾರಗಳು ಮುಂದಿನ ಪೀಳಿಗೆಯನ್ನು ಪ್ರಭಾವಿಸಲು ಶಕ್ತವಾಗಿವೆ. ಮಿಥಿಕ್‌ ಸೊಸೈಟಿ ಭಾರತೀಯತೆ ಬಗ್ಗೆ ಆಳವಾದ ಅಧ್ಯಯನ ನಡೆಸುತ್ತಿದೆ. 5ರಿಂದ 15ನೇ ಶತಮಾನದವರೆಗಿನ ಭಾರತೀಯ ಇತಿಹಾಸವನ್ನು ಪುನರ್‌ ರಚಿಸುವ ಪ್ರಯತ್ನವನ್ನು ‘ಅಕ್ಷರ ಭಂಡಾರ’ ಹೆಸರಿನಲ್ಲಿ ನಡೆಸುತ್ತಿದೆ. ಪುರಾತತ್ವ ವಿಚಾರದಲ್ಲಿ ವಿವಿಧ ವಿಶ್ವವಿದ್ಯಾಲಯಗಳ ಜೊತೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದರು. ಇದೇ ವೇಳೆ, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ ದಿವಂಗತ ನಾ.ಡಿಸೋಜಾ ಅವರಿಗೆ ನುಡಿನಮನ ಸಲ್ಲಿಸಲಾಯಿತು.