ಹಾಜಬ್ಬರ ಶಾಲೆಯಲ್ಲೇ ನಾಳೆ ಪಿಯು ತರಗತಿ ಆರಂಭ

| Published : May 31 2024, 09:47 AM IST

Harekala Hajabba
ಹಾಜಬ್ಬರ ಶಾಲೆಯಲ್ಲೇ ನಾಳೆ ಪಿಯು ತರಗತಿ ಆರಂಭ
Share this Article
  • FB
  • TW
  • Linkdin
  • Email

ಸಾರಾಂಶ

ಕಿತ್ತಳೆ ಹಣ್ಣುಗಳನ್ನು ಮಾರಾಟ ಮಾಡುತ್ತ ಆ ಹಣದಲ್ಲೇ ಶಾಲೆ ಕಟ್ಟಿದ ‘ಪದ್ಮಶ್ರೀ’ ಹರೇಕಳ ಹಾಜಬ್ಬರ ಹಲವು ವರ್ಷಗಳ ಕನಸಿನ ಪಿಯು ಕಾಲೇಜು ಕೊನೆಗೂ ಜೂ.1ಕ್ಕೆ ಶುಭಾರಂಭವಾಗಲಿದೆ. ಈಗಿರುವ ಶಾಲೆ ಕೊಠಡಿಯಲ್ಲೇ ತಾತ್ಕಾಲಿಕವಾಗಿ ಕಾಲೇಜು ಆರಂಭವಾಗಲಿದೆ.

ಸಂದೀಪ್‌ ವಾಗ್ಲೆ

  ಮಂಗಳೂರು :  ಕಿತ್ತಳೆ ಹಣ್ಣುಗಳನ್ನು ಮಾರಾಟ ಮಾಡುತ್ತ ಆ ಹಣದಲ್ಲೇ ಶಾಲೆ ಕಟ್ಟಿದ ‘ಪದ್ಮಶ್ರೀ’ ಹರೇಕಳ ಹಾಜಬ್ಬರ ಹಲವು ವರ್ಷಗಳ ಕನಸಿನ ಪಿಯು ಕಾಲೇಜು ಕೊನೆಗೂ ಜೂ.1ಕ್ಕೆ ಶುಭಾರಂಭವಾಗಲಿದೆ. ಈಗಿರುವ ಶಾಲೆ ಕೊಠಡಿಯಲ್ಲೇ ತಾತ್ಕಾಲಿಕವಾಗಿ ಕಾಲೇಜು ಆರಂಭವಾಗಲಿದೆ.

ನೂತನ ಪಿಯು ಕಾಲೇಜಿಗೆ ಈವರೆಗೆ (ಮೇ 30ರವರೆಗೆ) 25 ಮಂದಿ ಅರ್ಜಿ ಪಡೆದುಕೊಂಡಿದ್ದು, ಅದರಲ್ಲಿ 14 ಮಂದಿ ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಂಡಿದ್ದಾರೆ. ಮಕ್ಕಳ ದಾಖಲಾತಿಗೆ ಇನ್ನೂ 10-15 ದಿನ ಇರುವುದರಿಂದ ಇನ್ನಷ್ಟು ವಿದ್ಯಾರ್ಥಿಗಳು ಪ್ರವೇಶ ಪಡೆಯುವ ನಿರೀಕ್ಷೆ ಹಾಜಬ್ಬ ಇಟ್ಟುಕೊಂಡಿದ್ದಾರೆ.

ನನಸಾದ ಕನಸು: ಪಿಯು ಕಾಲೇಜು ಆರಂಭಿಸಲು ಕೆಲ ವರ್ಷಗಳಿಂದ ಜಿಲ್ಲಾಡಳಿತ, ಸರ್ಕಾರ, ಸಚಿವರಾದಿಯಾಗಿ ಎಲ್ಲರ ಬಳಿಯೂ ಮನವಿ ಮಾಡಿಕೊಂಡ ಪರಿಣಾಮ ಈ ಶೈಕ್ಷಣಿಕ ವರ್ಷದಿಂದಲೇ ಪಿಯು ಕಾಲೇಜು ಆರಂಭಕ್ಕೆ ಸರ್ಕಾರ ಅನುಮತಿ ನೀಡಿತ್ತು. ಈಗಿರುವ ಪ್ರೌಢಶಾಲೆಯನ್ನು ಉನ್ನತೀಕರಿಸಿ ಹೊಸದಾಗಿ ಸರ್ಕಾರಿ ಪಿಯು ಕಾಲೇಜು ಆರಂಭಕ್ಕೆ ಆದೇಶ ನೀಡಿತ್ತು. ಇನ್ನೊಂದೇ ದಿನದಲ್ಲಿ ಅದು ಸಾಕಾರವಾಗಲಿದೆ. ಹಾಜಬ್ಬರ ಇತ್ತೀಚಿನ ಅತಿದೊಡ್ಡ ಕನಸು ಈ ಮೂಲಕ ನನಸಾಗುತ್ತಿದೆ.

ಕಾಮರ್ಸ್‌ಗೇ ದಾಖಲಾತಿ: ಹಾಜಬ್ಬರ ಪಿಯು ಕಾಲೇಜಿಗೆ ಕಾಮರ್ಸ್‌ ಮತ್ತು ಆರ್ಟ್ಸ್‌ ಕೋರ್ಸ್‌ಗಳು ಮಂಜೂರಾಗಿವೆ. ಆದರೆ ಈ ವರ್ಷ ದಾಖಲಾದ ಎಲ್ಲ 14 ವಿದ್ಯಾರ್ಥಿಗಳು ಕೇವಲ ಕಾಮರ್ಸ್‌ ಆಯ್ಕೆ ಮಾಡಿಕೊಂಡಿದ್ದಾರೆ. ಆರ್ಟ್ಸ್‌ಗೆ ಮಕ್ಕಳು ಬರುವ ಸಾಧ್ಯತೆ ಹಿನ್ನೆಲೆಯಲ್ಲಿ ಅದಕ್ಕೂ ಪೂರ್ವತಯಾರಿ ನಡೆಸಲಾಗಿದೆ.

 ಕಟ್ಟಡ ನಿರ್ಮಾಣ ಭರವಸೆ: \Bಪಿಯು ಕಾಲೇಜಿಗೆ ಈಗಿರುವ ಶಾಲೆಯ ಅರ್ಧ ಫರ್ಲಾಂಗು ದೂರದ ಗ್ರಾಮ ಚಾವಡಿಯಲ್ಲಿ 1.3 ಎಕರೆ ಜಾಗವೂ ಮಂಜೂರಾಗಿದೆ. ಅದಕ್ಕೆ ಕಟ್ಟಡ ಕಟ್ಟಲು ಇಂಡಿಯನ್ ಆಯಿಲ್‌ ಕಂಪೆನಿ ಭರವಸೆ ನೀಡಿದ್ದು, ಈಗಾಗಲೇ ಪರಿಶೀಲನೆಯನ್ನೂ ನಡೆಸಿದೆ. ಈ ಜಾಗಕ್ಕೆ ತಡೆಗೋಡೆ ಕಟ್ಟಲು ಹಲವರು ನೆರವಾಗಿದ್ದು, ಇನ್ನಷ್ಟು ನೆರವು ಪಡೆದು ಕಂಪೌಂಡ್‌ ವಾಲ್‌ ಕಟ್ಟುವ ಕಾರ್ಯ ಆಗಬೇಕಿದೆ. ಹೊಸ ಕಟ್ಟಡ ಆರಂಭಿಸಲು ಸಮಯ ಇರುವುದರಿಂದ ಈಗ ಇರುವ ಪ್ರೌಢಶಾಲೆಯ 9ನೇ ತರಗತಿ ಕೊಠಡಿಯಲ್ಲಿ ತಾತ್ಕಾಲಿಕವಾಗಿ ಪಿಯು ತರಗತಿ ಆರಂಭಿಸಲು ಸರ್ವ ಸಿದ್ಧತೆ ನಡೆಸಲಾಗಿದೆ ಎಂದು ಹರೇಕಳ ಹಾಜಬ್ಬ ಹೇಳಿದರು.

ಉಪನ್ಯಾಸಕರ ಕೊರತೆ: ಸರ್ಕಾರ ಪಿಯು ಕಾಲೇಜು ಆರಂಭಕ್ಕೆ ಆದೇಶ ನೀಡಿದ್ದರೂ ಈವರೆಗೆ ಉಪನ್ಯಾಸಕರನ್ನು ನೇಮಿಸಿಲ್ಲ. ಶಕ್ತಿನಗರ ನಾಲ್ಯಪದವು ಸರ್ಕಾರಿ ಪ.ಪೂ. ಕಾಲೇಜಿನ ಉಪನ್ಯಾಸಕ ಡಾ.ಅಬ್ದುಲ್‌ ರಝಾಕ್‌ ಕೆ. ಅವರನ್ನು ಪ್ರಭಾರ ಪ್ರಾಂಶುಪಾಲರನ್ನಾಗಿ 2 ತಿಂಗಳ ಅವಧಿಗೆ ನಿಯೋಜಿಸಲಾಗಿದ್ದು, ಮಕ್ಕಳ ದಾಖಲಾತಿ, ಕಾಲೇಜು ಆರಂಭಿಸಲು ಸಿದ್ಧತಾ ಕಾರ್ಯವನ್ನು ಅವರು ನಡೆಸುತ್ತಿದ್ದಾರೆ. ‘ಒಬ್ಬರು ಅತಿಥಿ ಉಪನ್ಯಾಸಕರನ್ನು ನೇಮಕ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಉಳಿದ ಮೂರು ವಿಷಯಗಳಿಗೆ ಪಾಠ ಮಾಡಲು ಉಳಿದ ಕಾಲೇಜುಗಳ ಉಪನ್ಯಾಸಕರನ್ನು (ವಾರಕ್ಕೆ ಎರಡು ದಿನದಂತೆ) ಇಲ್ಲಿಗೆ ನಿಯೋಜನೆ ಮಾಡುವ ನಿರೀಕ್ಷೆಯಿದೆ’ ಎಂದು ಡಾ.ಅಬ್ದುಲ್‌ ರಝಾಕ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಪಿಯು ಕಾಲೇಜು ಪೂರ್ಣಕಾಲಿಕವಾಗಿ ಆರಂಭವಾಗಬೇಕಾದರೆ ಮೊದಲು ಕಾಲೇಜಿನ ಕಟ್ಟಡ ನಿರ್ಮಾಣ ಆಗಬೇಕು. ಪೂರ್ಣಕಾಲಿಕ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ನಿಯೋಜನೆಯಾಗಬೇಕಿದೆ. ಇದಕ್ಕಾಗಿ ಮತ್ತೆ ಅಕ್ಷರ ಸಂತ ಹಾಜಬ್ಬರ ಹೋರಾಟ ಆರಂಭವಾಗಿದೆ.

‘2004ರಲ್ಲಿ ‘ಕನ್ನಡಪ್ರಭ’ ಪತ್ರಿಕೆ ನನ್ನನ್ನು ಗುರುತಿಸಿದ ಬಳಿಕ ನಾಡಿನೆಲ್ಲೆಡೆಯಿಂದ ನೆರವು ಹರಿದು ಬಂದಿದ್ದು, ಪ್ರಾಥಮಿಕ ಶಾಲೆ, ಹೈಸ್ಕೂಲು ಕನಸು ಸಾಕಾರಗೊಂಡಿದೆ. ಇದೀಗ ಪಿಯು ಕಾಲೇಜು ಆರಂಭವಾಗುತ್ತಿರುವುದು ಸಂತಸ ತಂದಿದೆ. ಅದಕ್ಕೆ ಕಾರಣರಾದ ಉಳ್ಳಾಲ ಕ್ಷೇತ್ರದ ಶಾಸಕರು, ಸರ್ಕಾರ, ಸಂಬಂಧಿಸಿದ ಎಲ್ಲರಿಗೂ ಚಿರಋಣಿಯಾಗಿದ್ದೇನೆ.’

- ಹರೇಕಳ ಹಾಜಬ್ಬ