ಕುಕ್ಕುಜಡ್ಕದ ಚೊಕ್ಕಾಡಿ ಪ್ರೌಢಶಾಲೆಯ ಅಬಸಮ ಸಭಾಂಗಣದ ಡಾ. ಪೈಲೂರು ಗೋಪಾಲಕೃಷ್ಣ ವೇದಿಕೆಯಲ್ಲಿ ಮಂಗಳವಾರ ನಡೆದ ಸುಳ್ಯ ತಾಲೂಕು ೨೮ನೇ ಕನ್ನಡ ಸಾಹಿತ್ಯ ಸಮ್ಮೇಳನ

ಸುಳ್ಯ: ಬುಡಕಟ್ಟು ಹಾಗೂ ನಿರ್ಲಕ್ಷಿತ ಭಾಷೆಗಳಿಗೂ ಹಂತ ಹಂತವಾಗಿ ಅಕಾಡೆಮಿ ಸ್ಥಾಪಿತವಾಗಬೇಕು. ಇದರಿಂದ ಸಂಸ್ಕೃತಿಯ ಉಳಿವು ಸಾಧ್ಯವಾಗುತ್ತದೆ ಎಂದು ಕಥೆಗಾರ ಕೆ.ಆರ್. ತೇಜಕುಮಾರ್ ಬಡ್ಡಡ್ಕ ಹೇಳಿದ್ದಾರೆ.ಕುಕ್ಕುಜಡ್ಕದ ಚೊಕ್ಕಾಡಿ ಪ್ರೌಢಶಾಲೆಯ ಅಬಸಮ ಸಭಾಂಗಣದ ಡಾ. ಪೈಲೂರು ಗೋಪಾಲಕೃಷ್ಣ ವೇದಿಕೆಯಲ್ಲಿ ಮಂಗಳವಾರ ನಡೆದ ಸುಳ್ಯ ತಾಲೂಕು ೨೮ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸಾಹಿತ್ಯದ ಉನ್ನತಿಗೆ ಇಲ್ಲಿನ ಜನರಾಡುವ ವಿಭಿನ್ನ ಭಾಷೆಗಳ ಸೊಗಡು ಕಾರಣ. ಅರೆ ಭಾಷೆ, ಹವ್ಯಗನ್ನಡ, ಮರಾಟಿ, ಕೊಂಕಣಿ, ತುಳು ಇನ್ನಿತರ ಭಾಷೆಗಳು ಕ್ಷೀಣಿಸುತ್ತಿವೆ. ತುಳು, ಕೊಂಕಣಿ, ಬ್ಯಾರಿ, ಅರೆಭಾಷೆಗಳಿಗೆ ಸರಕಾರದ ನೆಲೆಯಲ್ಲಿ ಅಕಾಡೆಮಿ ಸ್ಥಾಪಿಸಿ ಭಾಷೆ ಉಳಿಯುವಿಕೆಗೆ ಶ್ರಮಿಸುತ್ತಿವೆ. ಪ್ರಚಲಿತದಲ್ಲಿರುವ ಹವ್ಯಗನ್ನಡಕ್ಕೆ ಅಕಾಡೆಮಿ ಬೇಕು ಎಂದು ಅವರು ಹೇಳಿದರು. ಸಮ್ಮೇಳನವನ್ನು ಹಿರಿಯ ಸಾಹಿತಿ ಕೆ.ಪಿ. ಸುರೇಶ ಕಂಜರ್ಪಣೆ ಉದ್ಘಾಟಿಸಿದರು. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ‘ಬಂಟಮಲೆ’ ಎಂಬ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿ, ಪ್ರಕೃತಿಯಲ್ಲಿರುವ ಪ್ರತಿಯೊಂದು ವಸ್ತುಗಳ ಬಗ್ಗೆ ಅವಲೋಕನ ಮಾಡಿ ಬರೆಯಬಲ್ಲವರು ಸಾಹಿತಿಗಳು. ಸಾಹಿತಿಗಳು ಬರೆದ ಪುಸ್ತಕಗಳ ಬಗ್ಗೆ ಪ್ರಚಾರಪಡಿಸುವ ಕಾರ್ಯವಾಗಬೇಕು. ಸಾಹಿತ್ಯ ಕ್ಷೇತ್ರ ನಿಂತ ನೀರಾಗದೆ ಹರಿಯುವ ನೀರಿನಂತಾಗಬೇಕು ಎಂದು ಹೇಳಿದರು.

ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಅವರು ಸಮ್ಮೇಳನಾಧ್ಯಕ್ಷ ತೇಜಕುಮಾರ್ ಅವರು ಬರೆದ ಮಜಲಿನಾಚೆ, ಮಮತಾ ರವೀಶ್ ಪಡ್ಡಂಬೈಲು ಅವರು ಬರೆದ ಗುಬ್ಬಿದನಿ ಎಂಬ ಹೊಸ ಕೃತಿಗಳನ್ನು ಬಿಡುಗಡೆ ಮಾಡಿದರು.

ವೇದಿಕೆಯಲ್ಲಿ ಸಮ್ಮೇಳನದ ನಿಕಟ ಪೂರ್ವಾಧ್ಯಕ್ಷೆ ಲೀಲಾ ದಾಮೋದರ, ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ, ಅಮರಮುಡ್ನೂರು ಗ್ರಾಪಂ ಅಧ್ಯಕ್ಷೆ ಜಾನಕಿ ಕಂದಡ್ಕ, ಕೊಡಗು ಜಿಲ್ಲಾ ಕಸಾಪದ ಅಧ್ಯಕ್ಷ ಕೇಶವ ಕಾಮತ್, ಸ್ವಾಗತ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಕಾರ್ಯಾಧ್ಯಕ್ಷ ಕೃಷ್ಣ ಪ್ರಸಾದ್ ಮಾಡಬಾಕಿಲು, ಪ್ರಧಾನ ಕಾರ್ಯದರ್ಶಿ ತೇಜಸ್ವಿ ಕಡಪಳ, ಗೌರವ ಕಾರ್ಯದರ್ಶಿ ಚಂದ್ರಮತಿ ಕೆ., ಮುಖ್ಯ ಶಿಕ್ಷಕ ಸಂಕೀರ್ಣ ಚೊಕ್ಕಾಡಿ, ಸಾಹಿತಿ ಬಾಬು ಗೌಡ ಅಚ್ರಪ್ಪಾಡಿ, ಚಂದ್ರಾವತಿ ಬಡ್ಡಡ್ಕ, ಕೋಶಾಧಿಕಾರಿ ಅರುಣ ಕುಮಾರ ಮುಂಡಾಜೆ ಉಪಸ್ಥಿತರಿದ್ದರು.

ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ ಪೇರಾಲು ಪ್ರಸ್ತಾವನೆ ಮಾಡಿದರು. ಸ್ವಾಗತ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಸ್ವಾಗತಿಸಿದರು. ಸಾಹಿತಿ ಎ.ಕೆ. ಹಿಮಕರ ಸಮ್ಮೇಳನಾಧ್ಯಕ್ಷರ ಪರಿಚಯ ಮಾಡಿದರು.

ಕಾರ್ಯಾಧ್ಯಕ್ಷ ಕೃಷ್ಣ ಪ್ರಸಾದ್ ಮಾಡಬಾಕಿಲು ವಂದಿಸಿದರು. ಚರಿಷ್ಮಾ ಕಡಪಳ ಕಾರ್ಯಕ್ರಮ ನಿರೂಪಿಸಿದರು. ಸುಶ್ಮಿತಾ ಕಡಪಳ, ಶ್ರೀಮತಿ ಭವ್ಯ ಸಹಕರಿಸಿದರು.

ಸತ್ವಶಾಲಿ ಸಾಹಿತ್ಯ ಪರಂಪರೆ ಮುಂದುವರಿಯಲಿ: ಸುರೇಶ

ಹೊಸ ತಲೆಮಾರನ್ನು ಸಾಹಿತ್ಯ ಕಲೆಯೆಡೆಗೆ ಆಕರ್ಷಿತವಾಗುವ ಮತ್ತು ಪ್ರೇರೇಪಿಸುವಂತೆ ಶಿಕ್ಷಣ, ಸಾಹಿತ್ಯ ಬೇಕು. ಆಗ ಮಾತ್ರ ನಮ್ಮ ಸಾಹಿತ್ಯ ಕಲೆ, ಸಂಸ್ಕೃತಿಯ ಬೇರುಗಳನ್ನು ಗಟ್ಟಿಗೊಳಿಸಲು ಸಾಧ್ಯ ಎಂದು ಸಮ್ಮೇಳನ ಉದ್ಘಾಟಿಸಿದ ಸಾಹಿತಿ ಕೆ.ಪಿ. ಸುರೇಶ್ ಕಂಜರ್ಪಣೆ ಹೇಳಿದರು.ಉಳಿದ ದೇಶಗಳಲ್ಲಿ ಅವರದ್ದೇ ಭಾಷೆಗಳಲ್ಲಿ ಸಂಶೋಧನೆ, ಸಾಧನೆ ಮಾಡುತ್ತಿದ್ದರೆ, ಭಾರತ ಮಾತ್ರ ಇನ್ನೂ ಇಂಗ್ಲಿಷ್ ಎಂಬ ವಸಾಹತುಶಾಹಿ ದಾಸ್ಯ ಮಾನಸಿಕತೆಗೊಳಗಾಗಿದೆ. ಈ ಮಾನಸಿಕತೆಯಿಂದ ಹೊರ ಬಂದು ನಮ್ಮ ಭಾಷೆ, ಸಾಹಿತ್ಯ ಸಾಂಸ್ಕೃತಿಕ ಪರಂಪರೆಯನ್ನು ಯುವ ತಲೆಮಾರಿಗೆ ತಿಳಿಸಿ ನಮ್ಮ ಬೇರುಗಳನ್ನು ಗಟ್ಟಿಗೊಳಿಸಬೇಕು ಎಂದು ಹೇಳಿದರು.