ಸಾರಾಂಶ
ನಟ ದರ್ಶನ್ ಅವರ ತಾಯಿ, ಗಂಡ ತೀರಿಕೊಂಡಾಗ ಇಲ್ಲೇ ಆತ್ಮಹ* ಮಾಡಿಕೊಳ್ಳಲು ಬಂದಿದ್ದರು. ಇಲ್ಲಿ ಬಂದಿದ್ದಾಗ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು, ನಿನಗೆ ಮೂವರು ಮಕ್ಕಳಿದ್ದಾರೆ. ನೀನು ಜೀವನದಲ್ಲಿ ಚೆನ್ನಾಗಿ ಆಗುತ್ತೀಯಾ ಎಂದಿದ್ದರು
ಮಂಗಳೂರು : ನಟ ದರ್ಶನ್ ಅವರ ತಾಯಿ, ಗಂಡ ತೀರಿಕೊಂಡಾಗ ಇಲ್ಲೇ ಆತ್ಮಹ* ಮಾಡಿಕೊಳ್ಳಲು ಬಂದಿದ್ದರು. ಇಲ್ಲಿ ಬಂದಿದ್ದಾಗ ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರ ಬಳಿ ಹೋಗಿ ಆಶೀರ್ವಾದ ಪಡೆದಿದ್ದರು. ಈ ವೇಳೆ ಧೈರ್ಯ ತುಂಬಿದ ಹೆಗ್ಗಡೆಯವರು, ನಿನಗೆ ಮೂವರು ಮಕ್ಕಳಿದ್ದಾರೆ. ನೀನು ಜೀವನದಲ್ಲಿ ಚೆನ್ನಾಗಿ ಆಗುತ್ತೀಯಾ ಎಂದಿದ್ದರು. ಅವರು ಕೊಟ್ಟ ಧೈರ್ಯದಿಂದ ಇವತ್ತು ಅವರು ಯಾವ ಮಟ್ಟದಲ್ಲಿದ್ದಾರೆ ಎಂದು ಸ್ಥಳೀಯ ಶಂಕರ ಕುಲಾಲ್ ಎಂಬವರು ಹೇಳಿದ್ದಾರೆ.
ಅವರು ಕನ್ನಡಪ್ರಭ ಸೋದರ ಸಂಸ್ಥೆ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿ, ಹೆಗ್ಗಡೆಯವರ ಒಳ್ಳೆಯ ಮಾತಿನಿಂದ ಅನೇಕ ಜೀವಗಳು ಉಳಿದಿದೆ. ನನಗೆ ತಿಳಿದ ಮಟ್ಟಿಗೆ ಯಾವುದೇ ಕೊಲೆ ಧರ್ಮಸ್ಥಳದಲ್ಲಿ ಆಗಿಲ್ಲ. ನಮ್ಮ ಹೆಗ್ಗಡೆಯವರು ನಮಗೆ ದೇವರಿದ್ದ ಹಾಗೆ. ಹೆಗ್ಗೆಡೆಯವರ ಅಭಿವೃದ್ಧಿ ಕಾರ್ಯ ಸಹಿಸಲು ಆಗದೆ ಈ ರೀತಿಯ ಆರೋಪ ಮಾಡುತ್ತಾರೆ ಎಂದರು.
ಎಸ್ಐಟಿ ತನಿಖೆ ಚೆನ್ನಾಗಿ ಆಗಲಿ, ಶವಗಳ ಗುರುತು ಪತ್ತೆ ಮಾಡಲಿ. ಜನರಿಗೆ ನಾವು ಏನು ಹೇಳಿದರೂ ನಂಬುವುದಿಲ್ಲ, ಸತ್ಯಕ್ಕೆ ಯಾರು ತಲೆ ಕೊಡುವುದಿಲ್ಲ, ಸುಳ್ಳಿಗೆ ಮಾತ್ರ ಗಮನ ಕೊಡುತ್ತಾರೆ. ತನಿಖೆಯಲ್ಲಿ ಸತ್ಯ ಹೊರಗೆ ಬರುವ ನಂಬಿಕೆ ಇದೆ ಎಂದಿದ್ದಾರೆ.
ಇಲ್ಲಿ ತುಂಬಾ ಜನ ಆತ್ಮಹತ್ಯೆ ಮಾಡಿಕೊಳ್ಳಲು ಬರುತ್ತಾರೆ. ತುಂಬಾ ಜನ ಕಾಲು ಜಾರಿ ಬಿದ್ದಿದ್ದಾರೆ. ಈಗ ಕಟ್ಟೆ ಕಟ್ಟಿರುವುದರಿಂದ ರಕ್ಷಣೆ ಇದೆ. ಸ್ಮಶಾನ ಇಲ್ಲದೇ ಇದ್ದಾಗ, ಪೊಲೀಸ್ ಠಾಣೆಗೆ ತಿಳಿಸಿ ಇಲ್ಲೇ ಶವ ಹೂಳಲಾಗುತ್ತಿತ್ತು. ಅನೇಕ ಶವಗಳು ಇಲ್ಲಿ ಈ ಹಿಂದೆ ಸಿಕ್ಕಿದೆ ಎಂದು ಹೇಳಿದ್ದಾರೆ.